ಜನಾಂಗೀಯ ಆರೋಪ ಹೊರಿಸಿದ ಪಾಕ್ ಅಭಿಮಾನಿ ಕ್ಷಮೆ ಕೋರುವಂತೆ ಮಾಡಿದ ಕೈಫ್
ಮುಂಬೈ, ಡಿ.29: ಇತ್ತೀಚೆಗೆ ಕ್ರಿಕೆಟರುಗಳಾದ ಮೊಹಮ್ಮದ್ ಶಮಿ ಹಾಗೂ ಇರ್ಫಾನ್ ಪಠಾಣ್ ನಂತರ ಹಿರಿಯ ಕ್ರಿಕೆಟಿಗ ಮೊಹಮ್ಮದ್ ಕೈಫ್ ಟ್ವಿಟ್ಟರಿನಲ್ಲಿ ಸುದ್ದಿಯಾಗಿದ್ದಾರೆ.
ಮೆಲ್ಬೋರ್ನ್ ನಲ್ಲಿ ನಡೆದ ಆಸ್ಟ್ರೇಲಿಯಾ ಪಾಕಿಸ್ತಾನ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರನ್ನು ಅಭಿನಂದಿಸಿ ಅವರನ್ನು ಆಸ್ಟ್ರೇಲಿಯಾ ತಂಡದ ಅತ್ಯುತ್ತಮ ದಾಂಡಿಗ ಎಂದು ಪ್ರಶಂಸಿಸಿ ಕೈಫ್ ಮಾಡಿದ ಟ್ವೀಟೊಂದು ಮೊಹಮ್ಮದ್ ಅರ್ಸ್ಲಾನ್ ಹೆಸರಿನ ಪಾಕಿಸ್ತಾನದ ಟ್ವಿಟ್ಟರ್ ಬಳಕೆದಾರನೊಬ್ಬನಿಗೆ ಸರಿ ಕಂಡಿಲ್ಲ. ಅದೇ ಪಂದ್ಯದಲ್ಲಿ ದ್ವಿಶತಕ ಹೊಡೆದಿದ್ದ ಪಾಕಿಸ್ತಾನದ ಆಟಗಾರ ಅಝರ್ ಅಲಿಯನ್ನು ಏಕೆ ಹೊಗಳಿಲ್ಲ. ಜನಾಂಗೀಯ ಕಾರಣಗಳಿಗಾಗಿಯೇ ಎಂದು ಆತ ಪ್ರಶ್ನಿಸಿಯೇ ಬಿಟ್ಟಿದ್ದ. ಇದಕ್ಕೆ ಕೈಫ್ ಅವರು ನೀಡಿದ ಪ್ರತ್ಯುತ್ತರ ಅದೆಷ್ಟು ತೀಕ್ಷ್ಣವಾಗಿತ್ತೆಂದರೆ ಆ ಪಾಕ್ ಟ್ವಿಟ್ಟರ್ ಬಳಕೆದಾರನಿಗೆ ಕ್ಷಮೆ ಯಾಚಿಸದೆ ಅನ್ಯ ಮಾರ್ಗವೇ ಇರಲಿಲ್ಲ.
‘‘ಎಲ್ಲಾ ವಿಚಾರಗಳಲ್ಲಿಯೂ ದೋಷವನ್ನೇ ಹುಡುಕುವುದು ಒಂದು ದೋಷಪೂರಿತ ಯೋಚನೆಯಾಗಿದೆ’’ ಎಂದು ಟ್ವೀಟ್ ಮಾಡಿದ ಕೈಫ್ ತಾವು ಈ ಹಿಂದೆ ಅಝರ್ ಅಲಿ ಅವರನ್ನು ಹೊಗಳಿ ಮಾಡಿದ ಟ್ವೀಟನ್ನೂ ಜೋಡಿಸಿದರು. ಪ್ರತಿಭಾವಂತ ಅಝರ್ ಅಲಿ ಅಷ್ಟೊಂದು ಹೆಸರು ವಾಸಿಯಾದ ಕ್ರಿಕೆಟಿಗನಲ್ಲದೇ ಇದ್ದರೂ ಅವರು ಆಡಿದ ರೀತಿ ಸಾಹಸಿಕವಾಗಿತ್ತು ಎಂದು ಕೈಫ್ ತಮ್ಮ ಹಿಂದಿನ ಟ್ವೀಟೊಂದರಲ್ಲಿ ಅಝರ್ ಅವರನ್ನು ಹೊಗಳಿದ್ದರು.