ರಿಕ್ಷಾವಾಲಾನ ಹೊಟ್ಟೆಪಾಡಿಗೆ ಕಲ್ಲು ಹಾಕಿದ ಮಗನ ತಪ್ಪನ್ನು ಲಾಲು ಸರಿಪಡಿಸಿದ್ದು ಹೀಗೆ
ಪಾಟ್ನಾ, ಡಿ.30 : ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ, ರಾಜ್ಯ ಆರೋಗ್ಯ ಸಚಿವನಾಗಿರುವ ತೇಜ್ ಪ್ರತಾಪ್ ಯಾದವ್ ಅವರಿಗೆ ವಿವಿಧ ರೀತಿಯ ವಾಹನಗಳನ್ನು ಚಲಾಯಿಸುವುದೆಂದರೆ ಇಷ್ಟ. ಅವರು ಕೆಲವೊಮ್ಮ ಆಡಿ ಕಾರನ್ನು ಓಡಿಸಿದರೆ ಕೆಲವೊಮ್ಮೆ ಕುದುರೆ ಸವಾರಿ ಮಾಡುತ್ತಾರೆ.ಅಂತೆಯೇ ಅವರು ವ್ಯಕ್ತಿಯೊಬ್ಬನ ಇ-ರಿಕ್ಷಾ ಕೂಡ ಚಲಾಯಿಸಿ ಕೊನೆಗೆ ಆತನಿಗೆ ಸಂಕಷ್ಟವೊದಗಿಸಿದ್ದರು. ವಿಷಯ ಹೀಗಿದೆ ಓದಿ.
ಒಮ್ಮೆ ಸಚಿವರ ಮನೆಗೆ ಕೆಲ ಸರಂಜಾಮುಗಳನ್ನು ತಲುಪಿಸಲು ಅಂಗಡಿ ಮಾಲಕರೊಬ್ಬರು ಅರುಣ್ ಕುಮಾರ್ ಎಂಬ ಹೆಸರಿನ ಇ-ರಿಕ್ಷಾ ಚಾಲಕನೊಬ್ಬನಿಗೆ ತಿಳಿಸಿದ್ದರು. ಅಂತೆಯೇ ರಿಕ್ಷಾ ಚಾಲಕ ಸರಂಜಾಮುಗಳನ್ನು ಸಚಿವರ ಮನೆಗೆ ತಲುಪಿಸಿದ್ದನು. ಆಗ ಅಲ್ಲಿದ್ದ ತೇಜ್ ಪ್ರತಾಪ್ ಯಾದವ್ ಆ ಇ-ರಿಕ್ಷಾವನ್ನು ತಾವು ಚಲಾಯಿಸುವ ಇಚ್ಛೆ ವ್ಯಕ್ತಪಡಿಸಿದರು. ಅಂತೆಯೇ ಅರುಣ್ ಸಚಿವರಿಗೆ ಇ-ರಿಕ್ಷಾ ಚಲಾಯಿಸುವ ವಿಧಾನ ಹೇಳಿಕೊಟ್ಟರು. ಸಚಿವರು ಇ-ರಿಕ್ಷಾ ಸ್ವಲ್ಪ ಹೊತ್ತು ಚಲಾಯಿಸಿದ ಬಳಿಕ ಅವರ ಚಾಲಕ ಪ್ರಮೋದ್ ಕೂಡ ಅದನ್ನು ಚಲಾಯಿಸಿದರು. ಅಲ್ಲೇ ಎಡವಟ್ಟಾಗಿರುವುದು. ರಿಕ್ಷಾ ಚಲಾಯಿಸುತ್ತಾ ಹೋಗಿ ವಾಹನವನ್ನು ಕಂಬವೊಂದಕ್ಕೆ ಗುದ್ದಿ ಬಿಟ್ಟರು, ಇದರಿಂದ ಅರುಣ್ ವಿಚಲಿತನಾದರೂ ರಿಕ್ಷಾ ದುರಸ್ತಿಪಡಿಸಿ ಕೊಡುವುದಾಗಿ ಸಚಿವ ಭರವಸೆ ನೀಡಿದ ಕಾರಣ ಮನೆಗೆ ಹಿಂದಿರುಗಿದ್ದರು. ಈ ಘಟನೆ ಡಿಸೆಂಬರ್ 12 ತಾರೀಕಿನಂದು ನಡೆದಿತ್ತು. ಆದರೆ ಘಟನೆ ನಡೆದು 17 ದಿನಗಳಾದರೂ ಸಚಿವರು ಇ-ರಿಕ್ಷಾ ದುರಸ್ತಿಗೊಳಿಸುವ ಗೋಜಿಗೆ ಹೋಗದೇ ಇದ್ದಾಗ ಡಿಸೆಂಬರ್ 28 ರಂದು ನೋಟು ಅಮಾನ್ಯದ ವಿರುದ್ಧ ಲಾಲು ಆಯೋಜಿಸಿದ್ದ ಧರಣಿ ಕಾರ್ಯಕ್ರಮದ ಸ್ಥಳಕ್ಕೆ ಬಂದ ಅರುಣ್ ಅಲ್ಲಿದ್ದ ಪಕ್ಷ ನಾಯಕರಲ್ಲಿ ತನ್ನ ಅಳಲನ್ನು ತೋಡಿಕೊಂಡರು. ಈ ವಿಷಯ ಲಾಲು ಕಿವಿಗೆ ಬೀಳುವಷ್ಟು ಹೊತ್ತಿಗೆ ಮಾಧ್ಯಮ ಮಂದಿಗೂ ಗೊತ್ತಾಗಿ ಬಿಟ್ಟಿತ್ತು. ನಂತರ ಲಾಲು ಅರುಣ್ ಗೆ ಫೋನ್ ಮಾಡಿ ಕರೆಸಿ ಆತನಿಗೆ ರಿಕ್ಷಾ ದುರಸ್ತಿಗೊಳಿಸಲು ರೂ 15,000 ನೀಡಿದರು.
ಈ ರಿಕ್ಷಾ ಪಡೆದುಕೊಳ್ಳಲು ಅರುಣ್‌ರೂ 1.4 ಲಕ್ಷ ವ್ಯಯಿಸಿದ್ದರೆ ಅದರಿಂದ ದಿನಕ್ಕೆ ರೂ 600ರಿಂದ 700ರ ತನಕ ಬಾಡಿಗೆ ಪಡೆದು ಕುಟುಂಬ ನಿರ್ವಹಣೆ ಮಾಡುತ್ತಿದ್ದರು.