ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಅನುರಾಗ್ ಠಾಕೂರ್ ವಜಾ
ಹೊಸದಿಲ್ಲಿ, ಜ.2: ಪಾರದರ್ಶಕ ಆಡಳಿತಕ್ಕೆ ನ್ಯಾ.ಲೋಧಾ ಸಮಿತಿ ಸಲ್ಲಿಸಿರುವ ಶಿಫಾರಸಿನ ವರದಿಯನ್ನು ಅನುಷ್ಠಾನಕ್ಕೆ ತರಲು ವಿಫಲವಾಗಿರುವ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹಾಗೂ ಕಾರ್ಯದರ್ಶಿ ಅಜಯ್ ಶಿರ್ಕೆ ಸಹಿತ ಮಂಡಳಿಯ ಎಲ್ಲ ಪದಾಧಿಕಾರಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿ ಆದೇಶಿಸಿದೆ.
ಸುಳ್ಳು ಸಾಕ್ಷ ನೀಡಿ, ನ್ಯಾಯಾಲಯಕ್ಕೆ ಅಗೌರವ ತೋರಿದ್ದಕ್ಕಾಗಿ ಠಾಕೂರ್‌ಗೆ ಶೋಕಾಸ್ ನೋಟಿಸ್ ನೀಡಿರುವ ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್ ಅವರಿದ್ದ ನ್ಯಾಯಪೀಠ ಜ.19ರೊಳಗೆ ನೋಟಿಸ್‌ಗೆ ಉತ್ತರ ನೀಡಬೇಕೆಂದು ಸೂಚಿಸಿದೆ.
ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲೇಬೇಕು. ಇದರರ್ಥ ಎಲ್ಲ 70 ವರ್ಷಗಿಂತ ಅಧಿಕ ಪ್ರಾಯದ ಆಡಳಿತಾಧಿಕಾರಿಗಳು ತಮ್ಮ ಹುದ್ದೆ ತ್ಯಜಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ಬಿಸಿಸಿಐನ ಕಾರ್ಯದರ್ಶಿ ಸಹಿತ ಮಂಡಳಿಯ ಎಲ್ಲ ಪದಾಧಿಕಾರಿಗಳು ಹಾಗೂ ಬಿಸಿಸಿಐನ ರಾಜ್ಯ ಘಟಕದ ಪದಾಧಿಕಾರಿಗಳನ್ನು ವಜಾಗೊಳಿಸಿದ ನ್ಯಾಯಾಲಯ ಬಿಸಿಸಿಐಗೆ ಹೊಸ ಉನ್ನತಾಧಿಕಾರಿ ಹಾಗೂ ಆಡಳಿತಾಧಿಕಾರಿಗಳ ಹೊಸ ಸಮಿತಿ ನೇಮಕಗೊಳಿಸಲು ಜ.19ರೊಳಗೆ ನಿರ್ಧರಿಸಲು ಸೂಚಿಸಲಾಗಿದೆ.
ನಿಮ್ಮ ವಿರುದ್ಧ ನಾವು ಯಾಕೆ ತನಿಖೆಗೆ ಆದೇಶಿಸಬಾರದು? ನಮ್ಮ ಪ್ರಶ್ನೆಗಳಿಗೆ ನೀವು ಉತ್ತರಿಸಬೇಕು ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್‌ಗೆ ಸುಪ್ರೀಂಕೋರ್ಟ್ ಪ್ರಶ್ನೆ ಕೇಳಿದೆ.
"'ಬಿಸಿಸಿಐ ಆಡಳಿತದಲ್ಲಿ ಪಾರದರ್ಶಕತೆ ತರುವ ಸಂಬಂಧ ಲೋಧಾ ಸಮಿತಿ ಮೂರು ವರದಿಗಳನ್ನು ನೀಡಿತ್ತು. ಆ ಮೂರೂ ವರದಿಗಳನ್ನು ಬಿಸಿಸಿಐ ಅನುಷ್ಠಾನಗೊಳಿಸಲಿಲ್ಲ. ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲು ಡಿ.3ರ ತನಕ ನ್ಯಾಯಾಲಯ ಕಾಲಾವಕಾಶ ನೀಡಿತ್ತು. ಲೋಧಾ ಸಮಿತಿಯ ಎಲ್ಲ ಶಿಫಾರಸು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ವಾದಿಸಿತ್ತು. ಒಮ್ಮೆ ಸುಪ್ರೀಂಕೋರ್ಟ್ ಆದೇಶ ಬಂದರೆ ಪಾಲಿಸಬೇಕು. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಅನುರಾಗ್ ಠಾಕೂರ್ ವಜಾ ಆಗಲೇಬೇಕಿತ್ತು. ಇಂದು ಆಗಿದ್ದಾರೆ'' ಎಂದು ಜಸ್ಟಿಸ್ ಲೋಧಾ ಸುಪ್ರೀಂಕೋರ್ಟ್‌ನ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದರು.