ಅರುಣಾಚಲ ಪ್ರದೇಶ:ಖಂಡು ಬದಲಿಗೆ ರಿಜಿಜು ಮುಖ್ಯಮಂತ್ರಿಯಾಗುವ ಸಾಧ್ಯತೆ

Update: 2017-01-06 15:46 GMT

ಗುವಾಹಟಿ,ಜ.6: ಅರುಣಾಚಲ ಪ್ರದೇಶದಲ್ಲಿ ರಾಜಕೀಯ ಬದಲಾವಣೆಗಳು ಈಶಾನ್ಯ ಭಾರತದಲ್ಲಿ ಆಗಾಗ್ಗೆ ಸಂಭವಿಸುವ ಭೂಕಂಪಗಳಂತೆ ಊಹಾತೀತವಾಗಿವೆ. ಮುಖ್ಯಮಂತ್ರಿ ಪೆಮಾ ಖಂಡು ಅವರು ಮೊನ್ನೆಮೊನ್ನೆಯಷ್ಟೇ 32 ಶಾಸಕರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡು ಈಶಾನ್ಯ ಭಾರತದಲ್ಲಿ ಕೇಸರಿ ಪಕ್ಷದ ಮೊದಲ ಸ್ವತಂತ್ರ ಸರಕಾರದ ಉಡುಗೊರೆ ನೀಡಿದ್ದಾರೆ. ಇದೀಗ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಎತ್ತಂಗಡಿ ಮಾಡಲಾಗುತ್ತದೆ ಎಂಬ ಊಹಾಪೋಹಗಳು ದಟ್ಟವಾಗಿವೆ. ಇಟಾನಗರದ ಅಧಿಕಾರದ ಮೊಗಸಾಲೆಗಳಲ್ಲಿ ಕೇಳಿ ಬರುತ್ತಿರುವ ವದಂತಿಗಳಂತೆ ಡಿ.31ರಂದು ಪಿಪಿಎ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಖಂಡು ಕೇಸರಿ ಪಕ್ಷದ ಹಳಬರಿಗೆ ಸ್ಥಾನವನ್ನು ಬಿಟ್ಟುಕೊಡಬೇಕಾಗಬಹುದು.

ರಾಜ್ಯದ ಮುಂದಿನ ಸಂಭಾವ್ಯ ಮುಖ್ಯಮಂತ್ರಿಯಾಗಿ ಕೇಂದ್ರ ಸಹಾಯಕ ಗೃಹಸಚಿವ ಕಿರಣ್ ರಿಜಿಜು ಅವರ ಹೆಸರು ಕೇಳಿಬರುತ್ತಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ತಾಪಿರ್ ಗಾವೊ ಅವರೂ ಸಿಎಂ ಹುದ್ದೆಯ ರೇಸಿನಲ್ಲಿದ್ದಾರೆ ಎನ್ನಲಾಗಿದೆ.

ಬಿಜೆಪಿ ಪದಾಧಿಕಾರಿಗಳು ಮತ್ತು ಖಂಡು ಸರಕಾರದ ಹಿರಿಯ ಸಚಿವರು ಇಂತಹ ಬೆಳವಣಿಗೆಯನ್ನು ನಿರಾಕರಿಸಿದ್ದಾರಾದರೂ ತಮ್ಮ ನಡುವೆ ಖಂಡು ಉಪಸ್ಥಿತಿ ರಾಜ್ಯದಲ್ಲಿಯ ಬಿಜೆಪಿ ಶಾಸಕರಿಗೆ ಅಸಮಾಧಾನವನ್ನುಂಟುಮಾಡಿದೆ ಎನ್ನಲಾಗಿದೆ.

 ಆದರೆ,ಇವೆಲ್ಲ ಸುಳ್ಳು ವದಂತಿಗಳು ಎಂದು ಗಾವೊ ತಳ್ಳಿಹಾಕಿದ್ದಾರೆ. ಪೆಮಾ ಖಂಡು ನಮ್ಮ ಮುಖ್ಯಮಂತ್ರಿಯಾಗಿದ್ದಾರೆ ಮತ್ತು ಮುಖ್ಯಮಂತ್ರಿಯಾಗಿರುತ್ತಾರೆ. ಕೆಲವು ಕಾಂಗ್ರೆಸ್ ಕಾರ್ಯಕರ್ತರು ಈ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಪಕ್ಷಕ್ಕೆ ಖಂಡು ಸೇರ್ಪಡೆಗೆ ಮುನ್ನ ಬಿಜೆಪಿ 12 ಶಾಸಕರನ್ನು ಹೊಂದಿತ್ತು ಮತ್ತು ಪಿಪಿಎ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಪಾಲುದಾರನಾಗಿತ್ತು. 33 ಪಿಪಿಎ ಶಾಸಕರ ಸೇರ್ಪಡೆ ಮತ್ತು ಇಬ್ಬರು ಕಾಂಗ್ರೆಸ್ ಶಾಸಕರ ಪಕ್ಷಾಂತರದೊಂದಿಗೆ 60 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ಬಲ 47ಕ್ಕೇರಿದೆ. ಇಬ್ಬರು ಪಕ್ಷೇತರ ಶಾಸಕರ ಬೆಂಬಲವೂ ಖಂಡು ಸರಕಾರಕ್ಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News