×
Ad

ಐಒಎ ವಿರುದ್ಧ ನಿಷೇಧ ವಾಪಸ್ ಪಡೆದ ಕ್ರೀಡಾ ಸಚಿವಾಲಯ

Update: 2017-01-13 23:26 IST

 ಹೊಸದಿಲ್ಲಿ, ಜ.13: ಭ್ರಷ್ಟಾಚಾರ ಆರೋಪ ಹೊತ್ತಿರುವ, ಕಳಂಕಿತ ಅಧಿಕಾರಿಗಳಾದ ಸುರೇಶ್ ಕಲ್ಮಾಡಿ ಹಾಗೂ ಅಭಯ್ ಸಿಂಗ್ ಚೌಟಾಲಾರನ್ನು ಆಜೀವ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಕ್ರೀಡಾ ಸಚಿವಾಲಯ ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ)ಗೆ ವಿಧಿಸಿದ್ದ ನಿಷೇಧವನ್ನು ತಕ್ಷಣವೇ ಜಾರಿಗೆ ಬರುವಂತೆ ಹಿಂದಕ್ಕೆ ಪಡೆದಿದೆ.

ಅಭಯ್ ಸಿಂಗ್ ಚೌಟಾಲ ಹಾಗೂ ಸುರೇಶ್ ಕಲ್ಮಾಡಿ ಅವರನ್ನು ಆಜೀವ ಅಧ್ಯಕ್ಷರನ್ನಾಗಿ ಮಾಡಿದ್ದ ತನ್ನ ಹಿಂದಿನ ನಿರ್ಧಾರವನ್ನು ಹಿಂದಕ್ಕೆ ಪಡೆದು ತಪ್ಪನ್ನು ತಿದ್ದಿಕೊಂಡಿರುವ ಹಿನ್ನೆಲೆಯಲ್ಲಿ ದೇಶದ ಕ್ರೀಡೆಯ ಬೆಳವಣಿಗೆ, ಉತ್ತೇಜನದ ದೃಷ್ಟಿಯಿಂದ ಐಒಎ ವಿರುದ್ಧ 2016ರ ಡಿ.30ರಂದು ವಿಧಿಸಲಾಗಿದ್ದ ನಿಷೇಧವನ್ನು ರಾಜ್ಯ ಸಚಿವಾಲಯ(ಸ್ವತಂತ್ರ) ಹಾಗೂ ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಹಿಂದಕ್ಕೆ ಪಡೆಯಲು ನಿರ್ಧರಿಸಿದೆ ಎಂದು ಕ್ರೀಡಾ ಸಚಿವಾಲಯ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಕ್ರೀಡಾ ಸಚಿವಾಲಯದ ನಿರ್ಧಾರವನ್ನು ಸ್ವಾಗತಿಸಿದ ಐಒಎ ಅಧ್ಯಕ್ಷ ಎನ್.ರಾಮಚಂದ್ರನ್,‘‘ಸಚಿವಾಲಯ ನಿಷೇಧವನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿರುವುದು ಶುಭ ಸುದ್ದಿ. ಇದಕ್ಕೆ ನಾನು ಕ್ರೀಡಾ ಸಚಿವಾಲಯಕ್ಕೆ ಕೃತಜ್ಞತೆ ಸಲ್ಲಿಸುವೆನು’’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News