ರಣಜಿ ಟ್ರೋಫಿ ಫೈನಲ್: ಗುಜರಾತ್‌ಗೆ ಸ್ಪರ್ಧಾತ್ಮಕ ಸವಾಲು
ಇಂದೋರ್, ಜ.13: ಮತ್ತೊಮ್ಮೆ ತಂಡಕ್ಕೆ ಆಪತ್ಬಾಂಧವರಾದ ಆಲ್‌ರೌಂಡರ್ ಅಭಿಷೇಕ್ ನಾಯರ್ ಹಾಗೂ ನಾಯಕ ಆದಿತ್ಯ ತಾರೆ ಜವಾಬ್ದಾರಿಯುತ ಬ್ಯಾಟಿಂಗ್ ಸಹಾಯದಿಂದ ಹಾಲಿ ಚಾಂಪಿಯನ್ ಮುಂಬೈ ತಂಡ ಗುಜರಾತ್ ತಂಡಕ್ಕೆ ರಣಜಿ ಟ್ರೋಫಿ ಫೈನಲ್ ಪಂದ್ಯದ ಗೆಲುವಿಗೆ 312 ರನ್ ಗುರಿ ನೀಡಿದೆ.
ಇಲ್ಲಿ ಹೋಳ್ಕರ್ ಸ್ಟೇಡಿಯಂನಲ್ಲಿ ನಾಲ್ಕನೆ ದಿನವಾದ ಶುಕ್ರವಾರ ಆಟ ಕೊನೆಗೊಂಡಾಗ ಗುಜರಾತ್ ತಂಡ ವಿಕೆಟ್ ನಷ್ಟವಿಲ್ಲದೆ 13.2 ಓವರ್‌ಗಳಲ್ಲಿ 47 ರನ್ ಗಳಿಸಿದೆ. ಐದನೆ ಹಾಗೂ ಅಂತಿಮ ದಿನದಾಟವಾದ ಶನಿವಾರ 10 ವಿಕೆಟ್‌ಗಳ ನೆರವಿನಿಂದ 265 ರನ್ ಗಳಿಸಬೇಕಾದ ಒತ್ತಡದಲ್ಲಿದೆ.
ಒಂದು ವೇಳೆ ಗುಜರಾತ್ ಅಂತಿಮ ದಿನದಾಟ ಪೂರ್ತಿ ಬ್ಯಾಟಿಂಗ್ ಮಾಡಿ ಪಂದ್ಯ ಡ್ರಾಗೊಳಿಸಿದರೆ, ಪ್ರಥಮ ಇನಿಂಗ್ಸ್‌ನಲ್ಲಿ 100 ರನ್ ಮುನ್ನಡೆಯ ಆಧಾರದಲ್ಲಿ ಮೊದಲ ಬಾರಿ ರಣಜಿ ಟ್ರೋಫಿ ಫೈನಲ್‌ಗೆ ತೇರ್ಗಡೆಯಾಗಲಿದೆ. ಮತ್ತೊಂದೆಡೆ ಮುಂಬೈ ತಂಡ ಫೈನಲ್‌ಗೆ ಪ್ರವೇಶಿಸಿ ದಾಖಲೆ ನಿರ್ಮಿಸುವ ವಿಶ್ವಾಸದಲ್ಲಿದೆ.
ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಸಮಿತ್ ಗೊಹಿಲ್(ಅಜೇಯ 8) ಹಾಗೂ ಪ್ರಿಯಾಂಕ್ ಪಾಂಚಾಲ್(34) ಕ್ರೀಸ್ ಕಾಯ್ದುಕೊಂಡಿದ್ದಾರೆ. ಪಾಂಚಾಲ್(1310ರನ್) ಹಾಗೂ ಗೊಹಿಲ್ ಸರಣಿಯಲ್ಲಿ ಶ್ರೇಷ್ಠ ಫಾರ್ಮ್‌ನಲ್ಲಿದ್ದಾರೆ.
ಮುಂಬೈ 411: ಇದಕ್ಕೆ ಮೊದಲು 3 ವಿಕೆಟ್ ನಷ್ಟಕ್ಕೆ 208 ರನ್‌ನಿಂದ ಎರಡನೆ ಇನಿಂಗ್ಸ್ ಆರಂಭಿಸಿದ ಮುಂಬೈ ನಿನ್ನೆಯ ಮೊತ್ತಕ್ಕೆ 203 ರನ್ ಸೇರಿಸಿ 137.1 ಓವರ್‌ಗಳಲ್ಲಿ 411 ರನ್‌ಗೆ ಆಲೌಟಾಯಿತು.
ನಾಯಕ ತಾರೆ(60 ರನ್) ಅವರೊಂದಿಗೆ 45 ರನ್‌ನೊಂದಿಗೆ ಬ್ಯಾಟಿಂಗ್ ಮುಂದುವರಿಸಿದ ಸೂರ್ಯ ಯಾದವ್ ನಿನ್ನೆಯ ಸ್ಕೋರ್‌ಗೆ ಕೇವಲ 5 ರನ್ ಸೇರಿಸಿ ಔಟಾದರು. ತಾರೆ ಹಾಗೂ ಸಿದ್ದೇಶ್ ಲಾಡ್ 5ನೆ ವಿಕೆಟ್‌ಗೆ 32 ರನ್ ಸೇರಿಸಿದರು. ಲಾಡ್ 15 ರನ್‌ಗೆ ಔಟಾದರು. ಲಾಡ್ ಔಟಾದ ಬೆನ್ನಿಗೆ ತಾರೆ ಕೂಡ ಪೆವಿಲಿಯನ್ ಸೇರಿದರು. ಆಗ ಮುಂಬೈ 297 ರನ್‌ಗೆ 6 ವಿಕೆಟ್ ಕಳೆದುಕೊಂಡಿತ್ತು.
ತಂಡಕ್ಕೆ ಮತ್ತೊಮ್ಮೆ ಆಸರೆಯಾದ ಅಭಿಷೇಕ್(91 ರನ್, 146 ಎಸೆತ, 5 ಬೌಂಡರಿ, 5 ಸಿಕ್ಸರ್) ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳೊಂದಿಗೆ ಕ್ರಮವಾಗಿ 9 ಹಾಗೂ 10ನೆ ವಿಕೆಟ್‌ನಲ್ಲಿ 44 ಹಾಗೂ 41 ರನ್ ಸೇರಿಸಿ ತಂಡದ ಸ್ಕೋರನ್ನು 400 ರ ಗಡಿ ದಾಟಿಸಿದರು.
14ನೆ ಶತಕ ವಂಚಿತರಾದ ನಾಯರ್ ಸರಣಿಯಲ್ಲಿ ಒಟ್ಟು 588 ರನ್ ಹಾಗೂ 24 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಗುಜರಾತ್‌ನ ಪರ ಚಿಂತನ್ ಗಜ(6-121) ಯಶಸ್ವಿ ಬೌಲರ್ ಎನಿಸಿಕೊಂಡರು.
ಸಂಕ್ಷಿಪ್ತ ಸ್ಕೋರ್
ಮುಂಬೈ ಮೊದಲ ಇನಿಂಗ್ಸ್: 228 ರನ್‌ಗೆ ಆಲೌಟ್
ಮುಂಬೈ ಎರಡನೆ ಇನಿಂಗ್ಸ್: 137.1 ಓವರ್‌ಗಳಲ್ಲಿ 411
(ಅಭಿಷೇಕ್ ನಾಯರ್ 91, ಶ್ರೇಯಸ್ ಐಯ್ಯರ್ 82, ಆದಿತ್ಯ ತಾರೆ 69,ಸೂರ್ಯಕುಮಾರ್ ಯಾದವ್ 49, ಪೃಥ್ವಿ ಶಾ 44, ಚಿಂತನ್ ಗಜ 6-121, ಆರ್‌ಪಿ ಸಿಂಗ್ 2-83)
ಗುಜರಾತ್ ಮೊದಲ ಇನಿಂಗ್ಸ್: 328 ರನ್‌ಗೆ ಆಲೌಟ್
ಗುಜರಾತ್ ಎರಡನೆ ಇನಿಂಗ್ಸ್: 47/0
(ಪಾಂಚಾಲ್ ಅಜೇಯ 34, ಗೊಹಿಲ್ ಅಜೇಯ 8)