×
Ad

ಚಾಪೆಲ್ ಟೀಕೆಗೆ ಅಫ್ರಿದಿ ‘ಬೂಮ್ ಬೂಮ್’ ರಿಪ್ಲೇ

Update: 2017-01-17 17:41 IST

ಕರಾಚಿ, ಜ.17: ಪಾಕಿಸ್ತಾನ ತಂಡ ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯ ಎರಡನೆ ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯನ್ನು ಸಮಬಲಗೊಳಿಸಿದೆ. ಇದನ್ನೇ ಅಸ್ತ್ರವಾಗಿಸಿಕೊಂಡ ಪಾಕ್ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಪಾಕ್ ತಂಡವನ್ನು ಟೀಕಿಸಿದ್ದ ಆಸ್ಟ್ರೇಲಿಯದ ಮಾಜಿ ನಾಯಕ ಇಯಾನ್ ಚಾಪೆಲ್‌ಗೆ ತಿರುಗೇಟು ನೀಡಿದ್ದಾರೆ.

ಪಾಕ್ ತಂಡ ಕಳಪೆ ಕ್ರಿಕೆಟ್ ಆಡುತ್ತಿರುವ ಕಾರಣ ಆ ತಂಡವನ್ನು ಆಸ್ಟ್ರೇಲಿಯಕ್ಕೆ ಆಡಲು ಆಹ್ವಾನಿಸಬಾರದು ಎಂದು ಚಾಪೆಲ್ ಇತ್ತೀಚೆಗೆ ಪಾಕ್ ತಂಡ ಟೆಸ್ಟ್ ಸರಣಿಯನ್ನು 0-3 ಅಂತರದಿಂದ ಸೋತಿದ್ದನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದ್ದರು.

ಪ್ರಸ್ತುತ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದು ಪಂದ್ಯದಲ್ಲಿ ಜಯ ಸಾಧಿಸಿ 1-1ರಿಂದ ಟೈ ಸಾಧಿಸಿವೆ. ಪಾಕ್ ತಂಡ ಮೆಲ್ಬೋರ್ನ್‌ನಲ್ಲಿ ನಡೆದ ಎರಡನೆ ಪಂದ್ಯದಲ್ಲಿ ಆಸೀಸ್‌ನ ವಿರುದ್ಧ 12 ವರ್ಷಗಳ ಬಳಿಕ ಏಕದಿನ ಪಂದ್ಯವನ್ನು ಗೆದ್ದುಕೊಂಡಿತ್ತು.

ತಂಡದ ಗೆಲುವಿಗೆ ಸಂತಸ ವ್ಯಕ್ತಪಡಿಸಿರುವ ಅಫ್ರಿದಿ‘‘ಶಹಬ್ಬಾಸ್, ಪಾಕಿಸ್ತಾನ, ಹಫೀಝ್‌ರ ಶ್ರೇಷ್ಠ ನಾಯಕತ್ವ ಹಾಗೂ ಶ್ರೇಷ್ಠ ಇನಿಂಗ್ಸ್‌ಗೆ ನನ್ನದೊಂದು ಸಲಾಂ, ಜುನೈದ್‌ಖಾನ್, ಮಲಿಕ್ ಕೂಡಾ ಚೆನ್ನಾಗಿ ಆಡಿದ್ದಾರೆ. ಇಯಾನ್ ಚಾಪೆಲ್‌ರೇ ನೀವು ಈ ಪಂದ್ಯವನ್ನು ವೀಕ್ಷಿಸಿದ್ದೀರಿ ತಾನೆ? ಎಂದು ಟ್ವಿಟ್ಟರ್‌ನಲ್ಲಿ ಕುಟುಕಿದ್ದಾರೆ.

ಆಸೀಸ್ ವಿರುದ್ಧದ ಎರಡನೆ ಏಕದಿನ ಪಂದ್ಯದಲ್ಲಿ ಮುಹಮ್ಮದ್ ಆಮಿರ್ ಹಾಗೂ ಜುನೈದ್ ಖಾನ್ ಕ್ರಮವಾಗಿ 3 ಹಾಗೂ 2 ವಿಕೆಟ್‌ಗಳನ್ನು ಕಬಳಿಸಿದ್ದರು. ನಾಯಕ ಮುಹಮ್ಮದ್ ಹಫೀಝ್(72) ಹಾಗೂ ಶುಐಬ್ ಮಲಿಕ್(ಅಜೇಯ 42) ಪ್ರವಾಸಿ ತಂಡಕ್ಕೆ 2.2 ಓವರ್ ಬಾಕಿ ಇರುವಾಗಲೇ ಗೆಲುವು ತಂದಿದ್ದರು.

‘‘ಪಾಕಿಸ್ತಾನ ಇದೀಗ ಆಸ್ಟ್ರೇಲಿಯದಲ್ಲಿ ಸತತ 12 ಟೆಸ್ಟ್ ಪಂದ್ಯಗಳನ್ನು ಸೋತಿದೆ. ನೀವು ಉತ್ತಮ ಪ್ರದರ್ಶನ ನೀಡದೇ ಇದ್ದರೆ ನಿಮ್ಮನ್ನು ಆಸ್ಟ್ರೇಲಿಯಕ್ಕೆ ಆಹ್ವಾನಿಸುವುದಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯ ಪಾಕ್‌ಗೆ ಕಿವಿಮಾತು ಹೇಳಬೇಕು’’ ಎಂದು ಚಾಪೆಲ್ ಇಎಸ್‌ಪಿಎನ್‌ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.

2016ರಲ್ಲಿ ಆಸ್ಟ್ರೇಲಿಯ ವಿರುದ್ಧ ಕೊನೆಯ ಬಾರಿ ಟ್ವೆಂಟಿ-20 ಪಂದ್ಯ ಆಡಿದ್ದ ಅಫ್ರಿದಿ ಅವರ ಕ್ರಿಕೆಟ್ ವೃತ್ತಿಜೀವನ ತೂಗುಯ್ಯಿಲೆಯಲ್ಲಿದೆ. ಇತ್ತೀಚೆಗಿನ ಸರಣಿಯಲ್ಲಿ ಆಯ್ಕೆಗಾರರು ಅಫ್ರಿದಿಯ ಮೇಲೆ ಕಣ್ಣು ಹಾಯಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News