×
Ad

ಎರಡನೆ ಏಕದಿನ ಪಂದ್ಯಕ್ಕೆ ಧೋನಿ ತಯಾರಿ

Update: 2017-01-17 19:02 IST

ಕಟಕ್, ಜ.17: ಇಲ್ಲಿನ ಬಾರಾಬತಿ ಸ್ಟೇಡಿಯಂನಲ್ಲಿ ಗುರುವಾರ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಎರಡನೆ ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನಡೆಸುವ ಉದ್ದೇಶದೊಂದಿಗೆ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತುಂಬಾ ಹೊತ್ತು ಬ್ಯಾಟಿಂಗ್ ನಡೆಸಿದರು.

 35ರ ಧೋನಿ ದೊಡ್ಡ ಹೊಡೆತಗಳಿಗೆ ಹೆಚ್ಚಿನ ಆದ್ಯತೆ ನೀಡಿದರು. ಪ್ರತಿ ಬಾರಿಯೂ ಚೆಂಡನ್ನು ಲಾಂಗ್ ಆನ್ ಕಡೆಗೆ ತಳ್ಳಿದರು. ಮೊದಲ ಏಕದಿನ ಪಂದ್ಯದಲ್ಲಿ 6 ಎಸೆತಗಳನ್ನು ಎದುರಿಸಿದ್ದ ಅವರು ಒಂದು ಬೌಂಡರಿ ಇರುವ 6 ರನ್ ಗಳಿಸಿದ್ದರು. ಇದರಿಂದ ನಿರಾಶೆಗೊಂಡಿದ್ದರು. ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ನೂತನ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡನ್ನು ಬ್ಯಾಟಿಂಗ್‌ಗೆ ಇಳಿಸಿದ್ದರು. ಜೇಸನ್ ರಾಯ್, ಜೋ ರೂಟ್ ಮತ್ತು ಬೆನ್ ಸ್ಟೋಕ್ಸ್ ಅವರು ನೀಡಿದ ಅರ್ಧಶತಕಗಳ ನೆರವಿನಲ್ಲಿ ಇಂಗ್ಲೆಂಡ್ ನಿಗದಿತ 50 ಓವರ್‌ಗಳಲ್ಲಿ 350 ರನ್ ಗಳಿಸಿತ್ತು.

351 ರನ್‌ಗಳ ಕಠಿಣ ಸವಾಲು ಪಡೆದಿದ್ದ ಭಾರತ ಇನಿಂಗ್ಸ್ ಆರಂಭಿಸಿದಾಗ ಅಗ್ರ ಸರದಿಯ ದಾಂಡಿಗರು ಬೇಗನೆ ಔಟಾಗಿ ಪೆವಿಲಿಯನ್ ಸೇರಿದಾಗ ನಾಯಕ ವಿರಾಟ್ ಕೊಹ್ಲಿ ಮತ್ತು ಆಲ್‌ರೌಂಡರ್ ಕೇದಾರ್ ಜಾಧವ್ 200 ರನ್‌ಗಳ ಜೊತೆಯಾಟ ನೀಡಿದ್ದರು. ಕೊಹ್ಲಿ ಮತ್ತು ಜಾಧವ್ ಶತಕ ದಾಖಲಿಸಿದ್ದರು.ಇವರ ಶತಕದ ನೆರವಿನಲ್ಲಿ ಭಾರತ ಗೆಲುವು ದಾಖಲಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

 ಕೊಹ್ಲಿ 105 ಎಸೆತಗಳಲ್ಲಿ 8 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಲ್ಲಿ 122 ರನ್ ಗಳಿಸಿ ಔಟಾಗಿದ್ದರು. ಜಾಧವ್ ಔಟಾಗದೆ 76 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿದ್ದರು.

ಕಟಕ್‌ನಲ್ಲಿ ಅಭಿಮಾನಿಗಳು ಮಾಜಿ ನಾಯಕ ಧೋನಿ ಅವರಿಂದ ಭರ್ಜರಿ ಬ್ಯಾಟಿಂಗ್‌ನ ನಿರೀಕ್ಷೆಯಲ್ಲಿರುವ ಹಿನ್ನೆಲೆಯಲ್ಲಿ ಅವರು ಒತ್ತಡಕ್ಕೆ ಸಿಲುಕಿದ್ದಾರೆ.

ಧೋನಿ 199 ಏಕದಿನ ಪಂದ್ಯಗಳಲ್ಲಿ ಭಾರತದ ನಾಯಕತ್ವ ವಹಿಸಿದ್ದರು. 110 ಪಂದ್ಯಗಳಲ್ಲಿ ಭಾರತ ಜಯ ದಾಖಲಿಸಿತ್ತು. 74 ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಅವರ ನಾಯಕತ್ವದಲ್ಲಿ ಭಾರತ ಟ್ವೆಂಟಿ-20 ವಿಶ್ವಕಪ್, 50 ಓವರ್‌ಗಳ ಕ್ರಿಕೆಟ್ ವಿಶ್ವಕಪ್ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News