ಸಂದರ್ಶನದಲ್ಲಿ ಯಶಸ್ವಿಯಾಗುವುದು ಹೇಗೆ ?

Update: 2017-01-18 09:56 GMT

ಹಾರ್ವರ್ಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಜೆಸ್ಸಿಕಾ ಪೊಯಿಂಟಿಂಗ್ ಗೂಗಲ್, ಆ್ಯಪಲ್, ಫೇಸ್‌ಬುಕ್, ಮೈಕ್ರೋಸಾಫ್ಟ್, ಮೆಕಿನ್ಸಿ, ಬೇನ್, ಗೋಲ್ಡಮನ್ ಸ್ಯಾಚ್ಸ್ ಮತ್ತು ಮಾರ್ಗನ್ ಸ್ಟಾನ್ಲಿ ಸೇರಿದಂತೆ ಪ್ರತಿಷ್ಠಿತ ಕಂಪನಿಗಳಿಂದ ಇಂಟರ್ನ್‌ಷಿಪ್‌ಗೆ ಆಹ್ವಾನಗಳನ್ನು ಪಡೆದಿದ್ದಾರೆ.

ಕಂಪ್ಯೂಟರ್ ವಿಜ್ಞಾನ ಮತ್ತು ಭೌತಶಾಸ್ತ್ರಗಳನ್ನು ಮುಖ್ಯ ವಿಷಯಗಳನ್ನಾಗಿ ತೆಗೆದುಕೊಂಡಿರುವ ಜೆಸ್ಸಿಕಾ ಸಾಫ್ಟ್‌ವೇರ್ ಇಂಜಿನಿಯರಿಂಗ್, ಡೇಟಾ ಸೈನ್ಸ್, ಪ್ರಾಡಕ್ಟ್ ಮ್ಯಾನೇಜ್‌ಮೆಂಟ್, ಕನ್ಸಲ್ಟಿಂಗ್, ಇನ್ವೆಸ್ಟಮೆಂಟ್ ಬ್ಯಾಂಕಿಂಗ್, ಟ್ರೇಡಿಂಗ್ ಮತ್ತು ಕ್ವಾಂಟಿಟೇಟಿವ್ ಫೈನಾನ್ಸ್ ಈ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಲು ಆಹ್ವಾನ ಪತ್ರಗಳನ್ನು ಸ್ವೀಕರಿಸಿದ್ದಾರೆ.

ಅಲ್ಲ, ಈ ಹುಡುಗಿ ಇಷ್ಟೊಂದು ಅಸಾಮಾನ್ಯ ಯಶಸ್ಸನ್ನು ಸಾಧಿಸಿದ್ದಾದರೂ ಹೇಗೆ?

ತನ್ನ ಯಶಸ್ವಿ ಸಂದರ್ಶನಗಳ ಸರಣಿಯುದ್ದಕ್ಕೂ ಕಾಯ್ದುಕೊಂಡು ಬಂದಿದ್ದ ಸಂಪೂರ್ಣ ಸನ್ನದ್ಧತೆ ಮತ್ತು ನಿರಾಳತೆಗೆ ತನ್ನ ಸಾಧನೆಯ ಹೆಗ್ಗಳಿಕೆ ಸೇರಬೇಕು ಎನ್ನುತ್ತಾಳೆ ಜೆಸ್ಸಿಕಾ.

ಹೈಸ್ಕೂಲು ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಮತ್ತು ವೃತ್ತಿಜೀವನದ ಸಲಹೆಗಳನ್ನು ನೀಡುವ ತನ್ನ ಬ್ಲಾಗ್ ‘Optimize Guide' ನಲ್ಲಿ ಸಂದರ್ಶನಗಳನ್ನು ಯಶಸ್ವಿಯಾಗಿ ಎದುರಿಸುವುದು ಹೇಗೆ ಎಂಬ ಬಗ್ಗೆ ಆಕೆ ಟಿಪ್ಸ್ ಪ್ರಕಟಿಸಿದ್ದಾಳೆ.

ನಿಮಗಾಗಿ ಇಲ್ಲಿವೆ ಆ ಟಿಪ್ಸ್..........

►ನಿಮ್ಮ ಹೋಮ್‌ವರ್ಕ್ ಚೆನ್ನಾಗಿ ಮಾಡಿ

  ಯಾವುದೇ ಸಂದರ್ಶನಕ್ಕೆ ಮುನ್ನ ಆ ಕ್ಷೇತ್ರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಿಕೊಳ್ಳಿ. ಸಂದರ್ಶನಗಳನ್ನು ಪರೀಕ್ಷೆಯೆಂದೇ ಪರಿಗಣಿಸಿ ಅದೇ ರೀತಿಯಲ್ಲಿ ಸಿದ್ಧರಾಗಿ. ಪ್ರತಿಯೊಂದು ಕ್ಷೇತ್ರಕ್ಕೂ ಇಂತಹ ಪುಸ್ತಕಗಳಿವೆ. ಉದಾಹರಣೆಗೆ ಸಾಫ್ಟ್‌ವೇರ್ ಇಂಜಿನಿಯರಿಂಗ್ ಸಂದರ್ಶನ ಎದುರಿಸಲು ಗೇಲ್ ಲಾಕ್‌ಮನ್ ಮೆಕ್‌ಡೊವೆಲ್ ಬರೆದಿರುವ ‘Cracking the Coding Interview' ಪುಸ್ತಕವವನ್ನು ಅಧ್ಯಯನ ಮಾಡಬಹುದಾಗಿದೆ.

►ಸಮಸ್ಯೆಯನ್ನು ಬಗೆಹರಿಸುವ ಮನಃಸ್ಥಿತಿ ಬೆಳೆಸಿಕೊಳ್ಳಿ

ಸಂದರ್ಶನವನ್ನು ಎದುರಿಸಬೇಕಾದ ಮಾನಸಿಕ ಒತ್ತಡವು ನೀವು ಸಂದರ್ಶಕರ ಪ್ರಶ್ನೆಗಳಿಗೆ ಉತ್ತರಿಸುವಾಗ ನಿಮ್ಮನ್ನು ತಬ್ಬಿಬ್ಬುಗೊಳಿಸಬಹುದು. ಹೀಗಾಗಿ ಸಮಸ್ಯೆಯನ್ನು ಬಗೆಹರಿಸುವ ಮನಃಸ್ಥಿತಿ ಬೆಳಸಿಕೊಳ್ಳುವುದು ಬಹಳ ಮುಖ್ಯವಾಗಿದೆ.

 ಪ್ರಶ್ನೆಯನ್ನು ಸರಿಯಾಗಿ ಅರಿತುಕೊಳ್ಳಲು ನಿಮಗೆ ನೀವೇ ಮತ್ತೊಮ್ಮೆ ಆ ಪ್ರಶ್ನೆಯನ್ನು ಕೇಳಿಕೊಳ್ಳಿ ಮತ್ತು ಅದಕ್ಕೆ ಸಂಬಂಧಿತ ಎಲ್ಲ ವಿವರಗಳನ್ನೂ ಮೆಲುಕು ಹಾಕಿ. ನಿಮ್ಮ ಉತ್ತರ ಸರಿಯಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಕ್ರಾಸ್ ಚೆಕ್ ಮಾಡಿ. ಸಮಸ್ಯೆ ಎದುರಾದರೆ ತಕ್ಷಣವೇ ಪರಿಹಾರ ಕಂಡುಕೊಳ್ಳಿ.

►ಅಭ್ಯಾಸ ಮತ್ತು ಕಾರ್ಯತಂತ್ರ

ಸಂದರ್ಶನವೊಂದನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ಮೊದಲೇ ಅಭ್ಯಾಸ ಮಾಡಿಕೊಳ್ಳಿ. ಸಂಭಾವ್ಯ ಪ್ರಶ್ನೆಗಳಿಗೆ ಉತ್ತರಿಸುವ ಕಾರ್ಯತಂತ್ರವನ್ನು ರೂಪಿಸಿಕೊಳ್ಳಿ. ನಿಮ್ಮ ಕಾಲೇಜುಗಳಲ್ಲಿ ಅಣಕು ಸಂದರ್ಶನಗಳನ್ನು ಏರ್ಪಡಿಸಿದರೆ ಅವುಗಳಲ್ಲಿ ಅಗತ್ಯವಾಗಿ ಭಾಗವಹಿಸಿ. ನಿಮಗಾಗಿ ಅಣಕು ಸಂದರ್ಶನಗಳನ್ನು ಏರ್ಪಡಿಸುವ ಸೇವಾ ಸಂಸ್ಥೆಗಳೂ ಇವೆ. ಸಂದರ್ಶನವನ್ನು ಅಭ್ಯಾಸ ಮಾಡಬಹುದಾದ ಯಾವುದೇ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ.

►ಪರ್ಯಾಯ ಯೋಜನೆ ಸಿದ್ಧವಿರಲಿ

ಯಾವುದೇ ಸಂದರ್ಶನವನ್ನು ಎದುರಿಸಲು ಪರ್ಯಾಯ ಯೋಜನೆಯೊಂದು ನಿಮ್ಮ ತಲೆಯಲ್ಲಿ ಸದಾ ಸಿದ್ಧವಿರಲಿ. ಇದು ನಿಮ್ಮ ಒತ್ತಡವನ್ನು ನಿವಾರಿಸಿ ಶಾಂತಚಿತ್ತದಿಂದ ಇರುವಂತೆ ಮಾಡುತ್ತದೆ. ಸಂದರ್ಶನದ ಸಮಯದಲ್ಲಿ ನೀವು ನಿರಾಳರಾಗಿದ್ದಷ್ಟೂ ಯಶಸ್ಸು ನಿಮ್ಮದಾಗುವ ಸಾಧ್ಯತೆಯಿರುತ್ತದೆ.

►ಸಮಯವನ್ನು ಮೀಸಲಿಡಿ

ಸಂದರ್ಶನವೆಂದರೆ ಸಂದರ್ಶಕರ ಗುಂಪಿನೊಂದಿಗೆ ಮಾತನಾಡಲು ಸಮಯ ನಿಗದಿ ಮಾಡಿಕೊಂಡಂತಲ್ಲ. ಓದುವಿಕೆ,ಅಭ್ಯಾಸ....ಅಷ್ಟೇ ಏಕೆ,ಪ್ರಯಾಣಕ್ಕೂ ನೀವು ಸಮಯವನ್ನು ನೀಡಬೇಕಾಗುತ್ತದೆ.

►ಪ್ರಶ್ನೆಗಳ ಬ್ಯಾಂಕ್ ಸೃಷ್ಟಿಸಿ

ಪ್ರತಿ ಸಂದರ್ಶನದ ಬಳಿಕ ನಿಮಗೆ ಕೇಳಲಾಗಿದ್ದ ಪ್ರಶ್ನೆಗಳು ಮತ್ತು ಅವುಗಳಿಗೆ ಉತ್ತರಗಳನ್ನು ಬರೆದಿಟ್ಟುಕೊಳ್ಳಿ. ಈ ಉತ್ತರಗಳಲ್ಲಿ ಹೆಚ್ಚಿನ ಸುಧಾರಣೆ ತರಲು ಸಾಧ್ಯವೇ ಎನ್ನುವ ಬಗ್ಗೆ ಗಮನ ಹರಿಸಿ. ಹೀಗೆ ನಿಮ್ಮ ಪ್ರಶ್ನೆಗಳ ಬ್ಯಾಂಕ್‌ನ್ನು ಸೃಷ್ಟಿಸಿ ಅದರಲ್ಲಿ ಸಂಭಾವ್ಯ ಪ್ರಶ್ನೆಗಳು ಮತ್ತು ಉತ್ತರಗಳನ್ನು ತುಂಬುತ್ತಲೇ ಇರಿ.

►ವ್ಯಾವಹಾರಿಕ ಪ್ರಶ್ನೆಗಳನ್ನು ಕಡೆಗಣಿಸಬೇಡಿ

ನೀವು ಸಂದರ್ಶನವನ್ನು ಎದುರಿಸಬೇಕಾದ ಹುದ್ದೆಗೆ ಸಂಬಂಧಿಸಿದ ಪ್ರಶ್ನೆಗಳ ಮೇಲೆ ಮಾತ್ರ ಗಮನವಿಟ್ಟರೆ ಸಾಲದು. ಸಾಮಾನ್ಯ ವ್ಯಾವಹಾರಿಕ ಪ್ರಶ್ನೆಗಳಿಗೂ ಉತ್ತರಿಸಲು ಸಿದ್ಧರಾಗಿರಬೇಕಾಗುತ್ತದೆ. ನಾಯಕತ್ವ,ತಂಡಕಾರ್ಯ,ಸವಾಲುಗಳು ಮತ್ತು ಯಶಸ್ಸು ಗಳು.... ಹೀಗೆ ಹಲವಾರು ವಿಭಾಗಗಳಲ್ಲಿ ಇಂತಹ ಪ್ರಶ್ನೆಗಳಿರುತ್ತವೆ. ಇವುಗಳಿಗೆ ನೀವು ಕೊಡುವ ಉತ್ತರಗಳು ನಿಮ್ಮ ವ್ಯಕ್ತಿತ್ವದ ಅಳತೆಗೋಲುಗಳಾಗಿರುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News