ಜಲ್ಲಿಕಟ್ಟು ಸಂಕಟ : ಪರಿಹಾರ ಕೇಳಿ ಬಂದ ತಮಿಳುನಾಡು ಸಿಎಂ ಗೆ ಪ್ರಧಾನಿ ಮೋದಿ ಹೇಳಿದ್ದೇನು ?
ಹೊಸದಿಲ್ಲಿ, ಜ.19: ಜಲ್ಲಿಕಟ್ಟು ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಕೇಂದ್ರ ಸರಕಾರಕ್ಕೆ ಏನನ್ನೂ ಮಾಡಲು ಸಾಧ್ಯವಿಲ್ಲ.ಕೇಂದ್ರದ ಕೈಯನ್ನು ಕಟ್ಟಿ ಹಾಕಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.
ತಮಿಳುನಾಡು ಮುಖ್ಯ ಮಂತ್ರಿ ಪನ್ನೀರ್ ಸೆಲ್ವಂ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿ ಜಲ್ಲಿಕಟ್ಟು ಕ್ರೀಡೆಯ ಮೇಲಿನ ನಿಷೇಧವನ್ನು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ತೆರವುಗೊಳಿಸಬೇಕೆಂದು ಆಗ್ರಹಿಸಿ ತಮ್ಮ ಮನವಿ ಸಲ್ಲಿಸಿದರು.
ಜಲ್ಲಿಕಟ್ಟು ನಿಷೇಧದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎದುರಾಗಿರುವ ಪರಿಸ್ಥಿತಿಯನ್ನು ಪ್ರಧಾನಿ ಮೋದಿ ಅವರಿಗೆ ಸಿಎಂ ಅವರು ಮನವರಿಕೆ ಮಾಡಿದರು. ಆದರೆ ಜಲ್ಲಿಕಟ್ಟು ಸ್ಪರ್ಧೆಗೆ ಸುಪ್ರೀಂ ಕೋರ್ಟ್ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ವಿಚಾರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಖ್ಯ ಮಂತ್ರಿ ಪನ್ನೀರ್ ಸೆಲ್ವಂಗೆ ಏನನ್ನೂ ಹೇಳಲಿಲ್ಲ ಎಂದು ತಿಳಿದು ಬಂದಿದೆ.
ರಾಜ್ಯ ಬರಗಾಲದಿಂದ ಸಮಸ್ಯೆ ಎದುರಿಸುತ್ತಿದೆ ಎಂದು ಇದೇ ಸಂದರ್ಭದಲ್ಲಿ ಸಿಎಂ ಸೆಲ್ವಂ ಅವರು ಪ್ರಧಾನಿ ಗಮನ ಸೆಳೆದರು.
ತಮಿಳುನಾಡಿನ ಬರ ಪೀಡಿತ ಗ್ರಾಮಗಳಿಗೆ ಕೇಂದ್ರದ ತಜ್ಞರ ತಂಡ ಭೇಟಿ ನೀಡಲಿದೆ. ಈ ವೇಳೆ ವರದಿ ತಯಾರಿಸಿ ಸರ್ಕಾರಕ್ಕೆ ನೀಡಲಿದೆ. ವರದಿಯನ್ನಾಧರಿಸಿ ಸರಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಪ್ರಧಾನಿ ಕಚೇರಿ ಮೂಲಗಳು ತಿಳಿಸಿವೆ.
.