ಮರ್ರೆ, ಫೆಡರರ್, ವಾವ್ರಿಂಕ ನಾಲ್ಕನೆ ಸುತ್ತಿಗೆ ಲಗ್ಗೆ

Update: 2017-01-20 17:57 GMT

ಮೆಲ್ಬೋರ್ನ್, ಜ.20: ಆಸ್ಟ್ರೇಲಿಯನ್ ಓಪನ್‌ನಲ್ಲಿ ಆ್ಯಂಡಿ ಮರ್ರೆ, ರೋಜರ್ ಫೆಡರರ್ ಹಾಗೂ ವಾವ್ರಿಂಕ ನಾಲ್ಕನೆ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಮಂಡಿನೋವಿನ ಹೊರತಾಗಿಯೂ ಉತ್ತಮ ಪ್ರದರ್ಶನ ನೀಡಿರುವ ವಿಶ್ವದ ನಂ.1 ಆಟಗಾರ ಆ್ಯಂಡಿ ಮರ್ರೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸತತ 9ನೆ ವರ್ಷ ಅಂತಿಮ 16ರ ಸುತ್ತಿಗೆ ತಲುಪಿದ್ದಾರೆ.

ಐದು ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ರನ್ನರ್-ಅಪ್ ಆಗಿರುವ ಮರ್ರೆ ಶುಕ್ರವಾರ ಇಲ್ಲಿ ನಡೆದ ಮೂರನೆ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯದ ಸ್ಯಾಮ್ ಕ್ಯೂರಿ ವಿರುದ್ಧ 6-4, 6-2, 6-4 ಸೆಟ್‌ಗಳ ಅಂತರದಿಂದ ಮಣಿಸಿದರು.

 ಕ್ಯೂರಿ ಕಳೆದ ವರ್ಷ ವಿಂಬಲ್ಡನ್ ಟೂರ್ನಿಯ ಮೂರನೆ ಸುತ್ತಿನ ಪಂದ್ಯದಲ್ಲಿ ಜೊಕೊವಿಕ್ ಅವರ ಗ್ರಾನ್‌ಸ್ಲಾಮ್ ಯಶಸ್ಸಿನ ಓಟಕ್ಕೆ ಬ್ರೇಕ್ ಹಾಕಿದ್ದರು. ಆ ಸಮಯದಲ್ಲಿ ಜೊಕೊವಿಕ್ ಸತತವಾಗಿ ಪ್ರಮುಖ ನಾಲ್ಕು ಪ್ರಶಸ್ತಿಗಳನ್ನು ಜಯಿಸಿದ್ದರು. ಜೊಕೊವಿಕ್ 2015ರಲ್ಲಿ ವಿಂಬಲ್ಡನ್ ಹಾಗೂ ಯುಎಸ್ ಓಪನ್ ಹಾಗೂ 2016ರಲ್ಲಿ ಆಸ್ಟ್ರೇಲಿಯನ್ ಹಾಗೂ ಫ್ರೆಂಚ್ ಓಪನ್‌ನ್ನು ಜಯಿಸಿದ್ದರು.

ಕಳೆದ ವರ್ಷದ ನವೆಂಬರ್‌ನಲ್ಲಿ ಮೊದಲ ಬಾರಿ ವಿಶ್ವದ ನಂ.1 ಸ್ಥಾನವನ್ನು ಪಡೆದಿದ್ದ ಮರ್ರೆ ಈ ವರ್ಷ ಆಸ್ಟ್ರೇಲಿಯನ್ ಓಪನ್ ಜಯಿಸುವ ಫೇವರಿಟ್ ಆಟಗಾರನಾಗಿದ್ದಾರೆ. ಹಾಲಿ ಚಾಂಪಿಯನ್ ಜೊಕೊವಿಕ್ ಹಾಗೂ ಕ್ಯೂರಿ ಟೂರ್ನಿಯಿಂದ ಹೊರ ನಡೆದಿದ್ದಾರೆ. ಆರು ಬಾರಿಯ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಜೊಕೊವಿಕ್ ಗುರುವಾರ ನಡೆದ ಎರಡನೆ ಸುತ್ತಿನ ಪಂದ್ಯದಲ್ಲಿ ಉಜ್ಬೇಕಿಸ್ತಾನದ ಡೆನಿಸ್ ಇಸ್ಟೊಮಿನ್ ವಿರುದ್ಧ ಆಘಾತಕಾರಿ ಸೋಲನುಭವಿಸಿ ಟೂರ್ನಿಯಿಂದ ಹೊರ ನಡೆದಿದ್ದರು.

 ಮರ್ರೆಗೆ ದ್ವಿತೀಯ ಸುತ್ತಿನ ಪಂದ್ಯದ ವೇಳೆ ಮಂಡಿನೋವು ಕಾಣಿಸಿಕೊಂಡಿದ್ದು, ಕ್ಯೂರಿ ವಿರುದ್ಧದ 3ನೆ ಸುತ್ತಿನ ಪಂದ್ಯದಲ್ಲಿ ನೋವಿನ ನಡುವೆಯೂ ಉತ್ತಮ ಪ್ರದರ್ಶನ ನೀಡಿದರು. ಅವರು ಮುಂದಿನ ಸುತ್ತಿನಲ್ಲಿ ಮಿಸ್ಚಾ ಝ್ವೆರೆವ್‌ರನ್ನು ಎದುರಿಸಲಿದ್ದಾರೆ. ಮಿಶ್ಚಾ ಅವರು ಮಾಲೆಕ್ ಜಾಝಿರಿ ಅವರನ್ನು 6-1, 4-6, 6-3, 6-0 ಸೆಟ್‌ಗಳಿಂದ ಮಣಿಸಿದರು.

 ಇದೇ ವೇಳೆ, ಹಿರಿಯ ಆಟಗಾರ ಫೆಡರರ್ ಮೂರನೆ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಥಾಮಸ್ ಬೆರ್ಡಿಕ್‌ರನ್ನು 6-2, 6-4, 6-4 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಆಸ್ಟ್ರೇಲಿಯನ್ ಓಪನ್‌ನಲ್ಲಿ ತಾನೂ ತೀವ್ರ ಸ್ಪರ್ಧೆಯೊಡ್ಡುವ ಸೂಚನೆ ನೀಡಿದ್ದಾರೆ.

2016ರಲ್ಲಿ ಗಾಯದ ಸಮಸ್ಯೆಗೀಡಾಗಿದ್ದ 35ರ ಪ್ರಾಯದ ಫೆಡರರ್ ಟೂರ್ನಿಯ ಆರಂಭಕ್ಕೆ ಮೊದಲು ‘ಅಂಡರ್‌ಡಾಗ್’ ಆಗಿದ್ದರು. ಇದೀಗ ಬೆರ್ಡಿಕ್ ವಿರುದ್ಧ ಸವಾಲನ್ನು ಜಯಿಸಿರುವ 17 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆದರು. ಒಂದು ಗಂಟೆ, 30 ನಿಮಿಷಗಳ ಪಂದ್ಯದಲ್ಲಿ 3 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು. ಸ

ಸ್ವಿಸ್ ಸೂಪರ್ ಸ್ಟಾರ್ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಕೀ ನಿಶಿಕೊರಿ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯದಲ್ಲಿ ಜಯ ಸಾಧಿಸುವ ಆಟಗಾರ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರನನ್ನು ಎದುರಿಸುವ ಸಾಧ್ಯತೆಯಿದೆ.

23ನೆ ಶ್ರೇಯಾಂಕದ ಜಾಕ್ ಸಾಕ್ ಅವರು ಫ್ರಾನ್ಸ್‌ನ ವಿಲ್ಫ್ರೆಡ್ ಸೋಂಗ್ ವಿರುದ್ಧ 7-6(4), 7-5, 6-7(8), 6-3 ಸೆಟ್‌ಗಳ ಅಂತರದಿಂದ ಸೋಲಿಸಿದರು.

ಯುಎಸ್ ಓಪನ್ ಚಾಂಪಿಯನ್ ವಾವ್ರಿಂಕ ಮೆಲ್ಬೋರ್ನ್ ಪಾರ್ಕ್‌ನಲ್ಲಿ ನಡೆದ ಮತ್ತೊಂದು ಮೂರನೆ ಸುತ್ತಿನ ಪಂದ್ಯದಲ್ಲಿ ವಿಕ್ಟರ್ ಟ್ರಾಸ್ಕಿ ವಿರುದ್ಧ 3-6, 6-2, 6-2, 7-6(7) ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದರು.

 2014ರ ಚಾಂಪಿಯನ್ ವಾವ್ರಿಂಕ ಸತತ ಐದನೆ ವರ್ಷ ಅಂತಿಮ-16ರ ಸುತ್ತು ಪ್ರವೇಶಿಸಿದ್ದಾರೆ. ಮುಂದಿನ ಸುತ್ತಿನಲ್ಲಿ ಆ್ಯಂಡ್ರಿಯಸ್ ಸೆಪ್ಪಿ ಅವರನ್ನು ಎದುರಿಸಲಿದ್ದಾರೆ. ಸೆಪ್ಪಿ ಅವರು ಸ್ಟೀವ್ ಡಾರ್ಸಿಸ್‌ರನ್ನು 4-6, 6-4, 7-6(1), 7-6(2) ಸೆಟ್‌ಗಳ ಅಂತರದಿಂದ ಸೋಲಿಸಿದರು.

ಕೆರ್ಬರ್ ನಾಲ್ಕನೆ ಸುತ್ತಿಗೆ ತೇರ್ಗಡೆ:

ವಿಶ್ವದ ನಂ.1 ಆಟಗಾರ್ತಿ, ಹಾಲಿ ಚಾಂಪಿಯನ್ ಆ್ಯಂಜೆಲಿಕ್ ಕೆರ್ಬರ್ ಸತತ ಐದನೆ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಅಂತಿಮ 16ರ ಸುತ್ತು ಪ್ರವೇಶಿಸಿದ್ದಾರೆ.

 ಶುಕ್ರವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಮೂರನೆ ಸುತ್ತಿನ ಪಂದ್ಯದಲ್ಲಿ ಕ್ರಿಸ್ಟಿನಾ ಪ್ಲಿಸ್ಕೋವಾರನ್ನು 6-0, 6-4 ಸೆಟ್‌ಗಳ ಅಂತರದಿಂದ ಮಣಿಸಿದರು.

 ಕೆರ್ಬರ್ ಕಳೆದ ವರ್ಷದ ಯುಎಸ್ ಓಪನ್ ಫೈನಲ್‌ನಲ್ಲಿ ಪ್ಲಿಸ್ಕೋವಾರ ಅವಳಿ ಸೋದರಿ ಕ್ಯಾರೊಲಿನಾರನ್ನು ಮಣಿಸಿ ಎರಡನೆ ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಜಯಿಸಿದ್ದರು. ಕೆರ್ಬರ್ ಒಂದು ವರ್ಷದ ಹಿಂದೆ ಆಸ್ಟ್ರೇಲಿಯನ್ ಓಪನ್ ಜಯಿಸಿದ್ದರು.

 ಕೆರ್ಬರ್ ಮುಂದಿನ ಸುತ್ತಿನಲ್ಲಿ 35ನೆ ರ್ಯಾಂಕಿನ ಕೊಕೊ ವ್ಯಾಂಡೆವೆಘ್‌ರನ್ನು ಎದುರಿಸಲಿದ್ದಾರೆ. ವ್ಯಾಂಡೆವೆಝ್ ಅವರು 2014ರಲ್ಲಿ ಸೆಮಿಫೈನಲ್‌ಗೆ ತಲುಪಿದ್ದ ಎವ್‌ಜಿನಿ ಬೌಚರ್ಡ್‌ರನ್ನು 6-4, 3-6, 7-5 ಸೆಟ್‌ಗಳ ಅಂತರದಿಂದ ಮಣಿಸಿ ಮೊದಲ ಬಾರಿ ಆಸ್ಟ್ರೇಲಿಯದಲ್ಲಿ ನಾಲ್ಕನೆ ಸುತ್ತು ತಲುಪಿದ್ದಾರೆ.

8ನೆ ಶ್ರೇಯಾಂಕಿತೆ ಸ್ವೆತ್ಲಾನಾ ಕುಝ್ನೆಸೋವಾ ಮಾಜಿ ವಿಶ್ವದ ನಂ.1 ಆಟಗಾರ್ತಿ ಜೆಲೆನಾ ಜಾಂಕೊವಿಕ್‌ರನ್ನು 6-4, 5-7, 9-7 ಸೆಟ್‌ಗಳ ಅಂತರದಿಂದ ಸೋಲಿಸಿದರು.

ಎರಡು ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ವಿಜೇತೆ ಕುಝ್ನೆಸೋವಾ ಮುಂದಿನ ಸುತ್ತಿನಲ್ಲಿ ಅನಸ್ಟಾಸಿಯ ಪಾವ್ಲಚೆಂಕೊವಾರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News