ವಿಶ್ವಕಪ್ ವಿಜೇತ ಆಸ್ಟ್ರೇಲಿಯದ ಮೊದಲ ತಂಡಕ್ಕೆ ಕೊನೆಗೂ ಪದಕ ಪ್ರದಾನ!

Update: 2017-01-22 07:08 GMT

ಮೆಲ್ಬೋರ್ನ್, ಜ.22: ಐಸಿಸಿ ಕ್ರಿಕೆಟ್ ವಿಶ್ವಕಪ್ ಗೆದ್ದಂತಹ ಆಸ್ಟ್ರೇಲಿಯದ ಮೊದಲ ತಂಡಕ್ಕೆ ಪ್ರಶಸ್ತಿ ಜಯಿಸಿದ 30 ವರ್ಷಗಳ ಬಳಿಕ ಪದಕ ಪ್ರದಾನ ಮಾಡಲಾಯಿತು.

ಅಲನ್ ಬಾರ್ಡರ್ ನಾಯಕತ್ವದ ಆಸ್ಟ್ರೇಲಿಯದ ಏಕದಿನ ತಂಡ ಭಾರತದ ಆತಿಥ್ಯದಲ್ಲಿ 1987ರಲ್ಲಿ ನಡೆದಿದ್ದ ನಾಲ್ಕನೆ ಆವೃತ್ತಿಯ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು 7 ರನ್‌ಗಳ ಅಂತರದಿಂದ ಸೋಲಿಸಿತ್ತು. ಆಸ್ಟ್ರೇಲಿಯ ಚೊಚ್ಚಲ ವಿಶ್ವಕಪ್‌ನ್ನು ಗೆದ್ದುಕೊಂಡಿತ್ತು.

ವಿಶ್ವಕಪ್ ಗೆದ್ದ ಸಂದರ್ಭದಲ್ಲಿ ಟ್ರೋಫಿಯನ್ನು ಪ್ರದಾನಿಸಲಾಗಿತ್ತು. ಆದರೆ, 14 ಆಟಗಾರರು, ಕೋಚ್ ಬಾಬ್ ಸಿಂಪ್ಸನ್, ಟೀಮ್ ಮ್ಯಾನೇಜರ್ ಅಲನ್ ಕ್ರಾಂಪ್ಟನ್ ಹಾಗೂ ಫಿಸಿಯೊ ಎರ್ರೊಲ್ ಅಲ್ಕಾಟ್‌ಗೆ ವಿಶ್ವಕಪ್ ಗೆದ್ದ ಸಾಧನೆಯ ಸ್ಮರಣಾರ್ಥ ಪದಕಗಳನ್ನು ನೀಡಿರಲಿಲ್ಲ.

ರವಿವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಆಸ್ಟ್ರೇಲಿಯ ಹಾಗೂ ಪಾಕಿಸ್ತಾನ ನಡುವಿನ ನಾಲ್ಕನೆ ಏಕದಿನ ಪಂದ್ಯದ ವೇಳೆ 30 ವರ್ಷಗಳ ಹಿಂದೆ ವಿಶ್ವಕಪ್ ಜಯಿಸಿದ್ದ ಆಸ್ಟ್ರೇಲಿಯ ಆಟಗಾರರಿಗೆ ಪದಕಗಳನ್ನು ನೀಡಿ ಗೌರವಿಸಲಾಯಿತು.

 ಕ್ರಿಕೆಟ್ ಆಸ್ಟ್ರೇಲಿಯದ ಚೇರ್ಮನ್ ಹಾಗೂ ಐಸಿಸಿ ನಿರ್ದೇಶಕ ಡೇವಿಡ್ ಪೀರ್ ಪದಕಗಳನ್ನು ಪ್ರದಾನಿಸಿದರು. 2016ರ ಜೂನ್‌ನಲ್ಲಿ ಐಸಿಸಿ ಮುಖ್ಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ 1987ರಲ್ಲಿ ವಿಶ್ವಕಪ್ ವಿಜೇತ ಆಸ್ಟ್ರೇಲಿಯದ ಆಟಗಾರರು, ಸಹಾಯಕ ಸಿಬ್ಬಂದಿಗೆ ಪದಕ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

2003ರ ತನಕ ವಿಶ್ವಕಪ್ ಆಯೋಜಿಸುವುದು ಆತಿಥೇಯ ಸದಸ್ಯರುಗಳ ಜವಾಬ್ದಾರಿಯಾಗಿತ್ತು. ಐಸಿಸಿ ಇದರಲ್ಲಿ ನೇರವಾಗಿ ಭಾಗಿಯಾಗುತ್ತಿರಲಿಲ್ಲ. ರವಿವಾರ ನಡೆದ ಸರಳ ಕಾರ್ಯಕ್ರಮದಲ್ಲಿ 30 ವರ್ಷಗಳ ಬಳಿಕ ವಿಶ್ವಕಪ್ ತಂಡದ ಸದಸ್ಯರು ಮತ್ತೆ ಒಂದಾಗಿತ್ತು. ಐಸಿಸಿ ಎಲ್ಲರಿಗೂ ಖಾಸಗಿ ಡಿನ್ನರ್‌ನ್ನು ಆಯೋಜಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News