ಆಸ್ಟ್ರೇಲಿಯನ್ ಓಪನ್: ವಿಶ್ವದ ನಂ.1 ಆಟಗಾರ ಮರ್ರೆ ಸವಾಲು ಅಂತ್ಯ

Update: 2017-01-22 08:25 GMT

ಮೆಲ್ಬೋರ್ನ್, ಜ.22: ವಿಶ್ವದ ನಂ.1 ಆಟಗಾರ, ಅಗ್ರ ಶ್ರೇಯಾಂಕದ ಆ್ಯಂಡಿ ಮರ್ರೆ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಅಭಿಯಾನ ರವಿವಾರ ಇಲ್ಲಿ ಕೊನೆಗೊಂಡಿತು.

 ಇಲ್ಲಿನ ರಾಡ್ ಲಾವೆರ್ ಅರೆನಾದಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ನಾಲ್ಕನೆ ಸುತ್ತಿನ ಪಂದ್ಯದಲ್ಲಿ ಬ್ರಿಟನ್ ಆಟಗಾರ ಮರ್ರೆ ಅವರು ಜರ್ಮನಿಯ ವಿಶ್ವದ ನಂ.50ನೆ ಆಟಗಾರ ಮಿಶ್ಚಾ ಝ್ವೆರೆವ್ ವಿರುದ್ಧ 7-5,5-7, 6-2, 6-4 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.

ನಾಲ್ಕನೆ ಸುತ್ತಿನಲ್ಲಿ ಮುಗ್ಗರಿಸಿರುವ ಮರ್ರೆ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಹಾದಿ ಅನುಸರಿಸಿದರು. ಜೊಕೊವಿಕ್ ಗುರುವಾರ ನಡೆದಿದ್ದ ಎರಡನೆ ಸುತ್ತಿನ ಪಂದ್ಯದಲ್ಲಿ ಉಜ್ಬೇಕಿಸ್ತಾನದ ಡೆನಿಸ್ ಇಸ್ಟೊಮಿನ್ ವಿರುದ್ಧ ಸೋತಿದ್ದರು.

ಆರು ಬಾರಿ ಆಸ್ಟ್ರೇಲಿಯನ್ ಓಪನ್ ಫೈನಲ್‌ಗೆ ಲಗ್ಗೆ ಇಟ್ಟು ಪ್ರಶಸ್ತಿ ವಂಚಿತರಾಗಿರುವ ಮರ್ರೆ ಈ ಬಾರಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದರು. ಜೊಕೊವಿಕ್, ಮರ್ರೆ ಸೋಲಿನೊಂದಿಗೆ ಈ ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಟಾಪ್-2 ಶ್ರೇಯಾಂಕಿತ ಆಟಗಾರರು ಕಣದಲ್ಲಿಲ್ಲ ಇಲ್ಲದಂತಾಗಿದೆ.

ಪೇಸ್ ಗೆಲುವಿನಾರಂಭ, ಸಾನಿಯಾಗೆ ಸೋಲು

ಭಾರತ ರವಿವಾರ ಮಿಶ್ರ ಫಲಿತಾಂಶ ದಾಖಲಿಸಿದೆ. ಹಿರಿಯ ಆಟಗಾರ ಲಿಯಾಂಡರ್ ಪೇಸ್ ಗೆಲುವಿನ ಆರಂಭ ಪಡೆದರೆ, ಸಾಣಿಯಾ ಮಿರ್ಝಾ ಅವರ ಮಹಿಳೆಯರ ಡಬಲ್ಸ್ ಅಭಿಯಾನ ಕೊನೆಗೊಂಡಿದೆ.

ಪೇಸ್ ಹಾಗೂ ಸ್ವಿಸ್‌ನ ಮಾರ್ಟಿನಾ ಹಿಂಗಿಸ್ ಜೋಡಿ ಮಿಶ್ರ ಡಬಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯದ ಡೆಸ್ಟನೀ ಅಲಾವಾ ಹಾಗೂ ಮಾರ್ಕ್ ಪಾಲ್ಮನ್ಸ್‌ರನ್ನು 6-4, 6-3 ಸೆಟ್‌ಗಳ ಅಂತರದಿಂದ ಮಣಿಸಿದರು.

ಮಹಿಳೆಯರ ಡಬಲ್ಸ್‌ನ 3ನೆ ಸುತ್ತಿನ ಪಂದ್ಯದಲ್ಲಿ ಸಾನಿಯಾ ಹಾಗೂ ಅವರ ಜೊತೆಗಾರ್ತಿ ಸ್ಟ್ರೈಕೋವಾ ಜಪಾನ್‌ನ ಹೊಝುಮಿ ಹಾಗೂ ಮಾಟೊ ವಿರುದ್ಧ 3-6, 6-2, 2-6 ಸೆಟ್‌ಗಳ ಅಂತರದಿಂದ ಸೋತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News