ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಸಹ ಪ್ರಾಧ್ಯಾಪಕನಿಂದ ಕಿರುಕುಳ
ತೃಶೂರ್,ಜ. 26 ತೃಶೂರ್ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿಯನ್ನು ಅಪಮಾನಿಸಿದ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ಪತ್ರೆಯ ಜನರಲ್ ಸರ್ಜರಿ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಹಬೀಬ್ ಮುಹಮ್ಮದ್(47)ನನ್ನು ಮೆಡಿಕಲ್ ಕಾಲೇಜು ಠಾಣಾ ಪೊಲೀಸರು ಬಂಧಿಸಿದ್ದಾರೆ. ವೈದ್ಯನ ವಿರುದ್ಧ ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ನೀಡಿದ ದೂರಿನಹಿನ್ನೆಲೆಯಲ್ಲಿ ವೈದ್ಯನ ಬಂಧನವಾಗಿದೆ.
ಮಂಗಳವಾರದಂದು ಶಸ್ತ್ರಕ್ರಿಯೆ ಥಿಯೇಟರ್‌ನೊಳಗೆ ಈತ ವಿದ್ಯಾರ್ಥಿನಿಯನ್ನು ಅಪಮಾನಿಸಿದ್ದ ಎಂದು ವಿದ್ಯಾರ್ಥಿನಿ ಪ್ರಿನ್ಸಿಪಾಲ್‌ಗೆ ದೂರು ನೀಡಿದ್ದಳು. ಕಲ್ಲಿಕೋಟೆ ಮೆಡಿಕಲ್ ಕಾಲೇಜಿನಿಂದ ಅಶಿಸ್ತಿಗಾಗಿ ಇದೇ ವೈದ್ಯನನ್ನು ಒಂದು ವರ್ಷದ ಹಿಂದೆ ತೃಶೂರಿಗೆ ವರ್ಗಾಯಿಸಲಾಗಿತ್ತು. ಅದಕ್ಕಿಂತ ಮೊದಲು ಆತನಿಗೆ ಅಮಾನತು ಶಿಕ್ಷೆ ವಿಧಿಸಲಾಗಿತ್ತು.
ಅಪಮಾನಿತಳಾದ ವಿದ್ಯಾರ್ಥಿನಿಯನ್ನು ವೈದ್ಯ ಕೆಲವುದಿವಸಗಳಿಂದ ಚುಡಾಯಿಸುತ್ತಿದ್ದ ಎಂದು ಇತರ ವಿದ್ಯಾರ್ಥಿಗಳು ಸಾಕ್ಷ್ಯ ನುಡಿದಿದ್ದಾರೆ. ಘಟನೆಯ ಕುರಿತು ಚರ್ಚಿಸಲು ಪ್ರಿನ್ಸಿಪಾಲ್‌ರ ನೇತೃತ್ವದಲ್ಲಿ ಮೆಡಿಕಲ್ ಕಾಲೇಜು ಮ್ಯಾನೇಜಿಂಗ್ ಕಮಿಟಿ ತುರ್ತು ಸಭೆ ಸೇರಿತ್ತು.ನಂತರ ವಿದ್ಯಾರ್ಥಿನಿ ದೂರಿನ ಹಿನ್ನೆಲೆಯಲ್ಲಿ ತಪ್ಪಿತಸ್ಥ ವೈದ್ಯನನ್ನು ಗ್ರಿವೆನ್ಸ್ ಕಂಟ್ರೋಲ್ ಕಮಿಟಿ ಪ್ರಶ್ನಿಸುತ್ತಿದ್ದಾಗ , ಶಾಸಕ ಅನಿಲ್ ಅಕ್ಕರ ತಪ್ಪಿತಸ್ಥ ವೈದ್ಯನನ್ನು ಬಂಧಿಸಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದರು. ಶಾಸಕರು ತಪ್ಪಿತಸ್ಥ ವೈದ್ಯನನ್ನು, ಅಸಿಸ್ಟೆಂಟ್ ಪ್ರಿನ್ಸಿಪಾಲ್ ಡಾ. ಪುಷ್ಪಲತಾ ಹಾಗೂ ಇತರ ಮೆಡಿಕಲ್ ಕಾಲೇಜು ಅಧಿಕಾರಿಗಳ ಬಂಧನಕ್ಕೆ ಆಗ್ರಹಿಸಿದ ಬೆಳವಣಿಗೆ ನಡೆದಿದ್ದು, ನಂತರ ತಪ್ಪಿತಸ್ಥ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆಂದು ವರದಿ ಯಾಗಿದೆ.