×
Ad

ಅಂಕಪಟ್ಟಿಯಲ್ಲಿ ತನ್ನ ಹೆಸರನ್ನೇ ಹಾಕಲು ಮರೆತ ಮುಂಬೈ ವಿ.ವಿ.!

Update: 2017-01-26 14:33 IST

ಮುಂಬೈ,ಜ.26: ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ ಪ್ರತಿಷ್ಠಿತ ಮುಂಬೈ ವಿಶ್ವವಿದ್ಯಾನಿಲಯಕ್ಕೆ ಅಂಕಪಟ್ಟಿಯ ನಮೂನೆಯ ಕರಡನ್ನು ಸಿದ್ಧಪಡಿಸಲು ಪಾಠ ಕಲಿಯುವ ಅಗತ್ಯವಿರುವಂತೆ ಕಂಡುಬರುತ್ತಿದೆ. ಅಂಕಪಟ್ಟಿಯಲ್ಲಿ ತನ್ನ ಹೆಸರನ್ನೇ ಹಾಕಲು ಮರೆತಿರುವ ವಿವಿ ಇತರ ಹಲವಾರು ತಪ್ಪುಗಳನ್ನೂ ಮಾಡಿದೆ.

ವಿವಿಯು ಕಾಲೇಜುಗಳಿಗೆ ರವಾನಿಸಿರುವ ಅಂಕಪಟ್ಟಿಯ ಮಾದರಿ ಹಲವಾರು ತಪ್ಪುಗಳಿಂದ ಕೂಡಿದೆ. ವಿವಿಯ ಹೆಸರೇ ಇಲ್ಲ,ಜೊತೆಗೆ ಸಾಕಷ್ಟು ಸ್ಪೆಲ್ಲಿಂಗ್ ತಪ್ಪುಗಳೂ ಇವೆ ಎನ್ನುತ್ತಾರೆ ಕಾಲೇಜು ಪ್ರಾಂಶುಪಾಲರೊಬ್ಬರು.

ವಿದ್ಯಾರ್ಥಿ ಓದಿರುವ ಕಾಲೇಜು ಮುಂಬೈ ವಿವಿಯೊಂದಿಗೆ ಸಂಲಗ್ನಗೊಂಡಿದೆ ಎನ್ನುವುದನ್ನು ಉಲ್ಲೇಖಿಸಲು ಹೊಸ ಅಂಕಪಟ್ಟಿಯಲ್ಲಿ ಅವಕಾಶವೇ ಇಲ್ಲ.

ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನಡೆಸುವ ಹೊಣೆಯನ್ನು 2016ರಿಂದ ವಿವಿಯೇ ವಹಿಸಿಕೊಂಡಿದೆ. ಅಲ್ಲಿಯವರೆಗೂ ಅಂತಿಮ ವರ್ಷದ ಪರೀಕ್ಷೆಯನ್ನು ಹೊರತುಪಡಿಸಿ ಎಲ್ಲ ಪರೀಕ್ಷೆಗಳನ್ನು ಆಯಾ ಕಾಲೇಜುಗಳೇ ನಡೆಸುತ್ತಿದ್ದವು.

ಈ ವರ್ಷ ಪದವಿ ತರಗತಿಗಳ ಶಿಕ್ಷಣದಲ್ಲಿ ಏಕರೂಪತೆಯನ್ನು ತರುವ ಪ್ರಯತ್ನವಾಗಿ ವಿವಿಯೇ ಪ್ರಶ್ನೆಪತ್ರಿಕೆಗಳನ್ನು ರೂಪಿಸುವ ಜೊತೆಗೆ ಎಲ್ಲ ಕಾಲೇಜುಗಳಲ್ಲಿ ಏಕಕಾಲದಲ್ಲಿ ಪ್ರವೇಶ ಪರೀಕ್ಷೆಗಳನ್ನು ನಡೆಸಿತ್ತು.

ಅಂಕಪಟ್ಟಿಗೆ ಗ್ರೇಡ್ ಕಾರ್ಡ್ ಎಂದು ಹೆಸರಿಸುವ ನಿರ್ಧಾರವನ್ನು ವಿವಿ ಮೊದಲು ಪ್ರಕಟಿಸಿತ್ತು. ಆದರೆ ಈಗ ದಿಢೀರ್‌ನೆ ಅದು ‘ಸರ್ಟಿಫಿಕೇಟ್ ’ ಆಗಿ ಬದಲಾಗಿದೆ. ಸರ್ಟಿಫಿಕೇಟ್‌ನ ಸ್ಪೆಲ್ಲಿಂಗ್‌ನ್ನೂ ತಪ್ಪಾಗಿ ಬರೆಯಲಾಗಿದೆ. ಕಾಲೇಜಿನ ಲಾಂಛನ ಅಥವಾ ವಿದ್ಯಾರ್ಥಿಯ ಪೋಟೊ ಮುದ್ರಿಸಲೂ ಅಂಕಪಟ್ಟಿಯಲ್ಲಿ ಜಾಗವಿಲ್ಲ. ಆಂತರಿಕ ಪರೀಕ್ಷೆಗಳು ಮತ್ತು ಪ್ರಾಕ್ಟಿಕಲ್‌ಗಳಲ್ಲಿ ಗಳಿಸಿದ ಅಂಕಗಳನ್ನೂ ಉಲ್ಲೇಖಿಸಲು ಸ್ಥಳವಿಲ್ಲ ಎಂದು ಹಲವಾರು ಕಾಲೇಜುಗಳ ಪ್ರಾಂಶುಪಾಲರು ದೂರಿದ್ದಾರೆ.

ತಪ್ಪುಗಳನ್ನು ಗಮನಿಸಿದ್ದೇವೆ ಮತ್ತು ಅಂಕಪಟ್ಟಿಯನ್ನು ಹೊಸದಾಗಿ ರೂಪಿಸುತ್ತಿದ್ದೇವೆ ಎಂದು ವಿವಿಯ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News