ಬಜೆಟ್‌ಗೆ ಧನಾತ್ಮಕವಾಗಿ ಸ್ಪಂದಿಸಿದ ಶೇರು ಮಾರುಕಟ್ಟೆ

Update: 2017-02-01 09:12 GMT

ಹೊಸದಿಲ್ಲಿ,ಫೆ.1: ವಿತ್ತಸಚಿವ ಅರುಣ್ ಜೇಟ್ಲಿ ಅವರು ಬುಧವಾರ ಸಂಸತ್ತಿನಲ್ಲಿ ಮಂಡಿಸಿದ 2017-18ನೇ ಸಾಲಿನ ಕೇಂದ್ರ ಮುಂಗಡಪತ್ರವನ್ನು ಶೇರು ಮಾರುಕಟ್ಟೆ ಸಂಭ್ರಮದಿಂದ ಸ್ವಾಗತಿಸಿದೆ. ಲೋಕಸಭೆಯಲ್ಲಿ ಜೇಟ್ಲಿಯವರ ಭಾಷಣ ಮುಂದುವರಿಯುತ್ತಿದ್ದಂತೆ ಸ್ಥಿರವಾಗಿ ಏರುತ್ತಲೇ ಇದ್ದ ಮುಂಬೈ ಶೇರು ವಿನಿಮಯ ಕೇಂದ್ರದ ಸೂಚ್ಯಂಕ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಶೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ಅವರು ಮಾತು ಮುಗಿಸಿದಾಗ ಸುಮಾರು ಶೇ.1ರಷ್ಟು ಏರಿಕೆಯನ್ನು ದಾಖಲಿಸಿದ್ದವು.

ಜೇಟ್ಲಿಯವರು ಮುಂಗಡಪತ್ರ ಭಾಷಣವನ್ನು ಮುಗಿಸಿ ತನ್ನ ಆಸನದಲ್ಲಿ ಕುಳಿತಾಗ ಸೆನ್ಸೆಕ್ಸ್ 300 ಅಂಶಗಳಿಗೂ ಹೆಚ್ಚಿನ ಏರಿಕೆಯನ್ನು ಕಂಡಿದ್ದರೆ, ನಿಫ್ಟಿ 80 ಅಂಶಗಳಷ್ಟು ಜಿಗಿದಿತ್ತು.

ಅತ್ತ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಕೂಡ ಮುಂಗಡಪತ್ರಕ್ಕೆ ಧನಾತ್ಮಕವಾಗಿ ಸ್ಪಂದಿಸಿದೆ. ಡಾಲರ್‌ನೆದುರು ರೂಪಾಯಿ 24 ಪೈಸೆಗಳಷ್ಟು ವೃದ್ಧಿ ಕಂಡು 67.63ರಷ್ಟಾಯಿತು. ಮುಂಗಡಪತ್ರ ಭಾಷಣಕ್ಕೆ ಮುನ್ನ ಎರಡು ದಿನಗಳ ವಹಿವಾಟುಗಳಲ್ಲಿ ಸೆನ್ಸೆಕ್ಸ್ 226 ಅಂಶಗಳನ್ನು ಕಳೆದುಕೊಂಡಿತ್ತು.

ಉಭಯ ಸೂಚ್ಯಂಕಗಳಲ್ಲಿ ಏರಿಕೆಯು ಸ್ಮಾಲ್‌ಕ್ಯಾಪ್ ಮತ್ತು ಮಿಡ್‌ಕ್ಯಾಪ್ ಸೂಚ್ಯಂಕಗಳಲ್ಲಿಯೂ ಪ್ರತಿಬಿಂಬಿಸಿತ್ತು. ಹೆಚ್ಚಿನ ಕ್ಷೇತ್ರಗಳು ಏರಿಕೆಗೆ ಸಾಕ್ಷಿಯಾದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News