×
Ad

ಅಹ್ಮದ್ ಸಾವಿನ ಮಡಿಲಲ್ಲಿದ್ದರೂ ಅವರನ್ನು ನೋಡಲು ಕುಟುಂಬಕ್ಕೆ ಅವಕಾಶ ನೀಡದಿದ್ದ ಸರಕಾರ!

Update: 2017-02-01 17:27 IST

ಹೊಸದಿಲ್ಲಿ,ಫೆ.1: ಕೇರಳದ ಕಣ್ಣೂರಿನಿಂದ ಏಳು ಬಾರಿ ಸಂಸದರಾಗಿದ್ದ ರಾಜಕೀಯ ದಿಗ್ಗಜ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ (ಐಯುಎಂಎಲ್)ನ ಅಧ್ಯಕ್ಷ ಇ.ಅಹ್ಮದ್ ಅವರ ಸಾವು ಮತ್ತು ಅದನ್ನು ಸರಕಾರವು ನಿರ್ವಹಿಸಿದ ರೀತಿ ಹಲವು ವಿವಾದಗಳನ್ನು ಸೃಷ್ಟಿಸಿವೆ. ನಿಗದಿಯಂತೆ ಫೆ.1ರಂದೇ ಮುಂಗಡಪತ್ರವನ್ನು ಮಂಡಿಸಲು ಅನುಕೂಲವಾಗುವಂತೆ ಅವರ ಸಾವಿನ ಸುದ್ದಿಯನ್ನು ಒಂದು ದಿನದ ಮಟ್ಟಿಗೆ ಗುಟ್ಟಾಗಿರಿಸಲು ಕೇಂದ್ರವು ಹುನ್ನಾರ ನಡೆಸಿತ್ತು ಎಂಬ ಆರೋಪವೂ ಕೇಳಿಬಂದಿದೆ. ಆಸ್ಪತ್ರೆಗೆ ದಾಖಲಾಗಿದ್ದ ಅಹ್ಮದ್‌ರನ್ನು ನೋಡಲು ಅವರ ಸ್ವಂತ ಕುಟುಂಬವೇ ಪ್ರತಿಭಟನೆಯನ್ನು ನಡೆಸುವಂತಾಗಿದ್ದು ಮಾತ್ರ ದುರಂತವೇ ಸರಿ.

ಅಧಿವೇಶನ ನಡೆಯುತ್ತಿರುವಾಗಲೇ ಹಾಲಿ ಸದಸ್ಯರೋರ್ವರು ನಿಧನರಾಗಿದ್ದರೂ ಮುಂಗಡಪತ್ರವನ್ನು ಮಂಡಿಸಲು ನಿರ್ಧರಿಸಿದ್ದಕ್ಕಾಗಿ ಸರಕಾರವು ತೀವ್ರ ಟೀಕೆಗೊಳಗಾಗಿದೆ.

ಕಾಂಗ್ರೆಸ್, ಎಡರಂಗದಂತಹ ಪ್ರತಿಪಕ್ಷಗಳ ಜೊತೆಗೆ ಶಿವಸೇನೆಯಂತಹ ಎನ್‌ಡಿಎ ಮಿತ್ರಪಕ್ಷಗಳೂ ಮುಂಗಡಪತ್ರ ಮಂಡನೆಯನ್ನು ಮುಂದೂಡುವಂತೆ ಸರಕಾರವನ್ನು ಆಗ್ರಹಿಸಿದ್ದವು.

ಸರಕಾರದ ಕ್ರಮದಿಂದ ಪ್ರತಿಪಕ್ಷಗಳು ಮುನಿಸಿಕೊಂಡಿದ್ದರೆ, ಸರಕಾರವು ತಮ್ಮನ್ನು ನಡೆಸಿಕೊಂಡ ರೀತಿ ತಮಗೆ ತೀವ್ರ ನೋವನ್ನುಂಟುಮಾಡಿದೆ ಎಂದು ಅಹ್ಮದ್‌ರ ಕುಟುಂಬ ಸದಸ್ಯರು ಹೇಳಿದ್ದಾರೆ.

ಮಂಗಳವಾರ ಮಧ್ಯಾಹ್ನ ಲೋಕಸಭಾ ಅಧಿವೇಶನ ನಡೆಯುತ್ತಿದ್ದಾಗಲೇ ಅಹ್ಮದ್ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ದಿಲ್ಲಿಯ ರಾಮ ಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಹ್ಮದ್‌ರನ್ನು ಟ್ರಾಮಾ ಕೇರ್ ವಿಭಾಗದಲ್ಲಿರಿಸಲಾಗಿದ್ದರೂ, ಅವರ ದೇಹಸ್ಥಿತಿಯ ಬಗ್ಗೆ ತಮಗಾಗಲೀ ಅವರ ಸಹೋದ್ಯೋಗಿಗಳೊಂದಿಗಾಗಲಿ ವೈದ್ಯರು ಯಾವುದೇ ವಿವರಗಳನ್ನು ಹಂಚಿಕೊಂಡಿರಲಿಲ್ಲ ಎಂದು ದಿವಂಗತ ಸಂಸದರ ಕುಟುಂಬವು ಆಪಾದಿಸಿದೆ.

 ದಿನದಲ್ಲಿ ಅಹ್ಮದ್‌ರನ್ನು ಕಾಣಲು ಅವಕಾಶ ನೀಡಲಾಗಿದ್ದ ಕೆಲವೇ ಜನರ ಪೈಕಿ ಹಿರಿಯ ಬಿಜೆಪಿ ನಾಯಕ ಹಾಗೂ ಪ್ರಧಾನಿ ಕಚೇರಿಯ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಅವರೂ ಒಬ್ಬರಾಗಿದ್ದು, ಅವರ ಭೇಟಿಯ ಬಳಿಕ ಆಸ್ಪತ್ರೆಯು ಅಹ್ಮದ್‌ರನ್ನು ನೋಡಲು ಯಾರಿಗೂ ಅವಕಾಶವನ್ನೇ ಕೊಟ್ಟಿರಲಿಲ್ಲ. ಆಸ್ಪತ್ರೆಯ ನಿಲುವನ್ನು ವಿರೋಧಿಸಿ ಸಂಜೆ ಅಹ್ಮದ್‌ರ ಮಕ್ಕಳು ಮತ್ತು ಬಂಧುಗಳಾದ ನಸೀರ್ ಅಹ್ಮದ್,ರಯೀಸ್ ಅಹ್ಮದ್, ಡಾ.ಫೌಝಿಯಾ ಮತ್ತು ಬಾಬು ಶೆಹಝಾದ್ ಅವರು ಪ್ರತಿಭಟನೆ ನಡೆಸಿದಾಗ ಬೆಳವಣಿಗೆಗಳು ನಾಟಕೀಯ ತಿರುವನ್ನು ಪಡೆದುಕೊಂಡಿದ್ದವು.

ರಾತ್ರಿಯ ವೇಳೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಪಕ್ಷದ ಹಿರಿಯ ನಾಯಕರಾದ ಗುಲಾಂ ನಬಿ ಆಝಾದ್, ಅಹ್ಮದ್ ಪಟೇಲ್ ಮತ್ತಿತರರು ಆಸ್ಪತ್ರೆಗೆ ಧಾವಿಸಿ ಅಹ್ಮದ್‌ರನ್ನು ಭೇಟಿಯಾಗಲು ಅವರ ಕುಟುಂಬಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿದರು. ಆಸ್ಪತ್ರೆಯ ಕಾರಿಡಾರ್‌ನಲ್ಲಿ ಸೋನಿಯಾ ಆಸ್ಪತ್ರೆಯ ಅಧಿಕಾರಿಗಳೊಂದಿಗೆ ವಾದಿಸಿದ್ದೂ ವ್ಯರ್ಥವಾಗಿತ್ತು. ಕಾಂಗ್ರೆಸ್ ದಿಗ್ಗಜರ ಬೇಡಿಕೆಗೆ ಅಧಿಕಾರಿಗಳು ಕ್ಯಾರೇ ಎಂದಿರಲಿಲ್ಲ.

ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಯ ಸಂಬಂಧಿಕರನ್ನು ಈ ರೀತಿಯಾಗಿ ನಡೆಸಿಕೊಳ್ಳುತ್ತಿರುವುದನ್ನು ತಾನೆಂದೂ ಕಂಡಿರಲಿಲ್ಲ ಎಂದು ಸೋನಿಯಾ ವಿಷಾದಿಸಿದರು.

 ‘‘ನನ್ನ ತಂದೆಯನ್ನು ಕಾಣಲು ನನಗೆ ಅವಕಾಶ ನೀಡಿ ಎನ್ನುವಷ್ಟೇ ನನ್ನ ಮನವಿಯಾಗಿತ್ತು. ಆದರೆ ಅವರನ್ನು ನೋಡಲು ಸಾಧ್ಯವಿಲ್ಲ ಎಂದು ನನಗೆ ತಿಳಿಸಲಾಯಿತು. ನಮ್ಮಲ್ಲಿ ಯಾರಿಗೂ ಒಳಹೋಗಲು ಬಿಟ್ಟಿರಲಿಲ್ಲ. ಬೆಳಿಗ್ಗೆ ಯಾವುದೇ ಸಮಸ್ಯೆಯಿಲ್ಲದೆ ಎಲ್ಲರಿಗೂ ಅಹ್ಮದ್‌ರ ಭೇಟಿಗೆ ಅವಕಾಶ ನೀಡಲಾಗಿತ್ತು ಎಂದೂ ಅಧಿಕಾರಿಗಳು ನನಗೆ ತಿಳಿಸಿದ್ದರು. ಮಗನಾಗಿ ನನ್ನ ತಂದೆಯನ್ನು ನೋಡುವ ಮತ್ತು ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುವ ಹಕ್ಕು ನನಗಿತ್ತು. ನಮ್ಮ ಕುಟುಂಬವನ್ನು ಅಧಿಕಾರಿಗಳು ನಡೆಸಿಕೊಂಡ ರೀತಿ ನಮ್ಮ ಮನಸ್ಸಿಗೆ ತುಂಬ ನೋವನ್ನುಂಟು ಮಾಡಿದೆ. ನಾನು ಸಂಸದರ ಪುತ್ರನಾಗಿ ಮಾತನಾಡುತ್ತಿಲ್ಲ, ನಾನು ಓರ್ವ ಭಾರತೀಯನ ಪುತ್ರನಾಗಿ ಮಾತನಾಡುತ್ತಿದ್ದೇನೆ ’’ಎಂದು ಅಹ್ಮದ್‌ರ ಪುತ್ರ ದುಃಖವನ್ನು ತೋಡಿಕೊಂಡರು.

 ‘‘ಅಹ್ಮದ್‌ರನ್ನು ಭೇಟಿಯಾಗುವುದು ನಮ್ಮ ಮೂಲಭೂತ ಹಕ್ಕಾಗಿತ್ತು. ಆದರೆ ನಮಗೆ ಅವಕಾಶ ನೀಡಲಾಗಿಲ್ಲ. ಭೇಟಿಯಾಗುವವರ ಕುರಿತ ಶಿಷ್ಟಾಚಾರ ನಮೂನೆ ನೋಡೋಣ ವೆಂದರೆ ಆಸ್ಪತ್ರೆಯಲ್ಲಿ ಅದೂ ಇರಲಿಲ್ಲ. ಅಹ್ಮದ್‌ರನ್ನು ಕೃತಕ ಜೀವರಕ್ಷಕ ಸಾಧನಗಳಿಂದ ಬದುಕುಳಿಸಲು ಎಕ್ಮೋ ನಡೆಸಲು ಅವರು ಬಯಸಿದ್ದರು ಮತ್ತು ಆ ಬಗ್ಗೆ ಕುಟುಂಬದವರೊಡನೆ ಚರ್ಚೆಯನ್ನೂ ನಡೆಸಿರಲಿಲ್ಲ ಎಂದು ಸ್ವತಃ ವೈದ್ಯರಾಗಿರುವ ಬಾಬು ಶೆಹಝಾದ್ ಹೇಳಿದರು.

‘‘ದುರದೃಷ್ಟವೆಂದರೆ ಈ ಆಸ್ಪತ್ರೆಯಲ್ಲಿ ನನಗೆ ವೃತ್ತಿಪರ ವರ್ತನೆಯೇ ಕಂಡು ಬರಲಿಲ್ಲ, ಇದು ಸಂಪೂರ್ಣವಾಗಿ ಅಡ್ಡಕಸುಬಿಗಳ ನಡವಳಿಕೆಯಂತಿದೆ ’’ಎಂದು ಅಹ್ಮದ್ ಪುತ್ರಿ ಹೇಳಿದರು.

ಅಹ್ಮದ್‌ರ ಕುಟುಂಬ ಮತ್ತು ಮುಸ್ಲಿಂ ಲೀಗ್ ಸದಸ್ಯರು ಧರಣಿ ಪ್ರತಿಭಟನೆ ನಡೆಸಿದ ನಂತರವಷ್ಟೇ ಬುಧವಾರ ಬೆಳಗಿನ ಜಾವ ಅವರ ಭೇಟಿಗೆ ಅವಕಾಶ ಕಲ್ಪಿಸಲಾಗಿತ್ತು. ಇದರ ಬೆನ್ನಿಗೇ ನಸುಕಿನ 2.50ಕ್ಕೆ ಅವರ ನಿಧನವನ್ನು ಪ್ರಕಟಿಸಲಾಯಿತು.

ಮುಂಗಡಪತ್ರ ಮಂಡನೆಗೆ ಯಾವುದೇ ವಿಘ್ನವುಂಟಾಗದಂತೆ ನೋಡಿಕೊಳ್ಳಲು ಅಹ್ಮದ್ ನಿಧನದ ಸುದ್ದಿಯನ್ನು ಒಂದು ದಿನದ ಮಟ್ಟಿಗೆ ಮುಚ್ಚಿಡಲು ಮೋದಿ ಸರಕಾರವು ಬಯಸಿತ್ತು ಎಂಬಂತೆ ಕಂಡು ಬರುತ್ತಿದೆ. ಅಂತಹ ಪ್ರಮುಖ ನಾಯಕನನ್ನು ಅವರು ನಡೆಸಿಕೊಂಡಿರುವ ರೀತಿಯಿದು ಎಂದು ಮುಸ್ಲಿಂ ಲೀಗ್‌ನ ಹಿರಿಯ ನಾಯಕರೋರ್ವರು ಖೇದ ವ್ಯಕ್ತಪಡಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News