3 ಲಕ್ಷ ರೂ. ಗಿಂತ ಹೆಚ್ಚಿನ ನಗದು ವ್ಯವಹಾರಕ್ಕೆ ಅವಕಾಶವಿಲ್ಲ
ಹೊಸದಿಲ್ಲಿ, ಫೆ. 1: ನಗದು ವ್ಯವಹಾರವನ್ನು ಮೂರು ಲಕ್ಷ ರೂಪಾಯಿಗೆ ನಿಗದಿ ಪಡಿಸುವ ಮೂಲಕ ಸರಕಾರ ಸುಪ್ರೀಮ ಕೋರ್ಟ್ ನೇಮಿತ ವಿಶೇಷ ತನಿಖಾ ಸಮಿತಿ (ಸಿಟ್)ಯ ಶಿಫಾರಸುಗಳನ್ನು ಒಪ್ಪಿಕೊಂಡಿದೆ.
ಸಮಿತಿಯು ಕಳೆದ ವರ್ಷದ ಜುಲೈಯಲ್ಲಿ ಇಂಥ ಕ್ರಮವನ್ನು ಶಿಫಾರಸು ಮಾಡಿತ್ತು.
‘‘ಮೂರು ಲಕ್ಷ ರೂ.ಗಿಂತ ಹೆಚ್ಚಿನ ನಗದು ವ್ಯವಹಾರಕ್ಕೆ ಅವಕಾಶವಿಲ್ಲ. ಈ ಸಲಹೆಯನ್ನು ಸ್ವೀಕರಿಸಲು ಸರಕಾರ ನಿರ್ಧರಿಸಿದೆ’’ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತನ್ನ ಬಜೆಟ್ ಭಾಷಣದಲ್ಲಿ ತಿಳಿಸಿದರು.
ಸರಕಾರವು ಹಣಕಾಸು ಮಸೂದೆಯ ಮೂಲಕ ಈ ಬದಲಾವಣೆಯನ್ನು ಜಾರಿಗೆ ತರಬೇಕಾಗುತ್ತದೆ.
ಆದರೆ, 15 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಇಟ್ಟುಕೊಳ್ಳಲು ಅವಕಾಶ ನೀಡಬಾರದು ಎಂಬ ಸಿಟ್‌ನ ಇನ್ನೊಂದು ಶಿಫಾರಸನ್ನು ಸ್ವೀಕರಿಸಲು ಸರಕಾರ ಉದ್ದೇಶಿಸಿದೆಯೇ ಎಂಬ ಬಗ್ಗೆ ಜೇಟ್ಲಿ ಏನೂ ಹೇಳಿಲ್ಲ.
►ಪಕ್ಷಗಳ ನಗದು ದೇಣಿಗೆ ಇನ್ನು 2,000 ರೂ. ಮಾತ್ರ
ಹೊಸದಿಲ್ಲಿ, ಫೆ. 1: ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಗಳಲ್ಲಿ ಪಾರದರ್ಶಕತೆ ತರಲು ಸರಕಾರ ಬುಧವಾರ ಮಹತ್ವದ ಕ್ರಮವೊಂದನ್ನು ತೆಗೆದುಕೊಂಡಿದೆ ಹಾಗೂ ನಗದು ರೂಪದಲ್ಲಿ ಪಡೆಯುವ ದೇಣಿಗೆ ಮಿತಿಯನ್ನು 90 ಶೇಕಡದಷ್ಟು ಕಡಿತಗೊಳಿಸಿದೆ.
ಇನ್ನು ಮುಂದೆ ರಾಜಕೀಯ ಪಕ್ಷಗಳು ಒಂದು ಮೂಲದಿಂದ ಕೇವಲ 2,000 ರೂ. ದೇಣಿಗೆಯನ್ನು ಮಾತ್ರ ನಗದು ರೂಪದಲ್ಲಿ ಪಡೆಯಬಹುದಾಗಿದೆ ಎಂದು 2017ರ ಬಜೆಟ್ ಮಂಡಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದರು.
2,000 ರೂ.ಗಿಂತ ಹೆಚ್ಚಿನ ದೇಣಿಗೆ ನೀಡಿದ ವ್ಯಕ್ತಿಗಳ ಗುರುತನ್ನು ರಾಜಕೀಯ ಪಕ್ಷಗಳು ಬಹಿರಂಗಪಡಿಸಬೇಕು ಎಂದರು.
ಈವರೆಗೆ ರಾಜಕೀಯ ಪಕ್ಷಗಳು 20,000 ರೂ.ವರೆಗಿನ ಮೊತ್ತವನ್ನು ನಗದು ರೂಪದಲ್ಲಿ ಪಡೆಯಲು ಅವಕಾಶವಿತ್ತು.
ರಾಜಕೀಯ ಪಕ್ಷಗಳು ಚೆಕ್, ಇಲೆಕ್ಟ್ರಾನಿಕ್ ವಿಧಗಳು ಮತ್ತು ಆರ್‌ಬಿಐ ಹೊರಡಿಸುವ ಇಲೆಕ್ಟೋರಲ್ ಬಾಂಡ್‌ಗಳ ಮೂಲಕ ದೇಣಿಗೆಗಳನ್ನು ಪಡೆಯಬಹುದಾಗಿದೆ.
ರಾಜಕೀಯ ಪಕ್ಷಗಳು ಪಡೆಯುವ ದೇಣಿಗೆಯಲ್ಲಿ ಪಾರದರ್ಶಕತೆ ತರುವಂತೆ ಚುನಾವಣಾ ಆಯೋಗ ಮಾಡಿರುವ ಶಿಫಾರಸುಗಳನ್ನು ಸರಕಾರ ಒಪ್ಪಿಕೊಂಡಿದೆ ಎಂದು ಜೇಟ್ಲಿ ತಿಳಿಸಿದರು.
►1 ಲಕ್ಷ ಕೋಟಿ ರೂ. ಮೊತ್ತದ ರೈಲ್ವೆ ಸುರಕ್ಷತಾ ನಿಧಿ ಸ್ಥಾಪನೆ
ಹೊಸದಿಲ್ಲಿ, ಫೆ. 1: ರೈಲುಗಳು ಪದೇ ಪದೇ ಹಳಿ ತಪ್ಪುತ್ತಿರುವುದನ್ನು ಗಮನದಲ್ಲಿಟ್ಟುಕೊಂಡಿರುವ ಸರಕಾರ, 1 ಲಕ್ಷ ಕೋಟಿ ರೂಪಾಯಿಯ ವಿಶೇಷ ಸುರಕ್ಷತಾ ನಿಧಿಯನ್ನು ಸ್ಥಾಪಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ.
ಹಳಿಗಳು ಮತ್ತು ಸಿಗ್ನಲ್ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲು ಹಾಗೂ ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು ನಿವಾರಿಸಲು ಈ ನಿಧಿಯನ್ನು ಬಳಸಲಾಗುವುದು.
ಸಾಮಾನ್ಯ ಬಜೆಟ್‌ನ ಜೊತೆಗೇ ಮಂಡಿಸಲ್ಪಟ್ಟಿರುವ 2017-18ರ ರೈಲ್ವೆ ಬಜೆಟ್, 3,500 ಕಿ.ಮೀ. ಉದ್ದದ ನೂತನ ರೈಲು ಹಳಿಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.
ರೈಲ್ವೆಯ ಮುಂದಿನ ಹಣಕಾಸು ವರ್ಷದ ಯೋಜನಾ ಗಾತ್ರವನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ 1.31 ಲಕ್ಷ ಕೋಟಿ ರೂ.ಗೆ ನಿಗದಿಪಡಿಸಿದರು. ಕಳೆದ ವರ್ಷದ ರೈಲ್ವೆ ಯೋಜನಾ ಗಾತ್ರವು 1.21 ಲಕ್ಷ ಕೋಟಿ ರೂ. ಆಗಿತ್ತು.
ಒಂದು ಲಕ್ಷ ಕೋಟಿ ರೂಪಾಯಿ ನಿಧಿಯೊಂದಿಗೆ ‘ರಾಷ್ಟ್ರೀಯ ರೈಲು ಸುರಕ್ಷತಾ ಕೋಶ’ವನ್ನು ರಚಿಸುವ ಪ್ರಸ್ತಾಪವನ್ನು ಹಣಕಾಸು ಸಚಿವರು ಮಂಡಿಸಿದರು.
ಬ್ರಾಡ್‌ಗೇಜ್ ರೈಲ್ವೆ ಜಾಲದಲ್ಲಿರುವ ಎಲ್ಲ ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು 2020ರ ವೇಳೆಗೆ ನಿವಾರಿಸುವ ಪ್ರಸ್ತಾಪವನ್ನು ರೈಲ್ವೆ ಬಜೆಟ್ ಹೊಂದಿದೆ.
ಭಿನ್ನಚೇತನರ ಪ್ರಯಾಣಕ್ಕೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ, 500 ರೈಲು ನಿಲ್ದಾಣಗಳನ್ನು ಭಿನ್ನಚೇತನ ಸ್ನೇಹಿಯನ್ನಾಗಿ ಮಾಡಲಾಗುವುದು ಎಂದು ಜೇಟ್ಲಿ ಘೋಷಿಸಿದರು.
ಎಲ್ಲ ಕೋಚ್‌ಗಳಲ್ಲಿ ಜೈವಿಕ ಶೌಚಾಲಯಗಳು ಇರುವುದು ಎಂದು ಹೇಳಿದ ಸಚಿವರು, ಎಲ್ಲ ಪ್ರಯಾಣಿಕರ ಅನುಕೂಲಕ್ಕಾಗಿ ‘ಕ್ಲೀನ್ ಮೈ ಕೋಚ್’ ಆ್ಯಪನ್ನು ಬಿಡುಗಡೆ ಮಾಡಲಾಗುವುದು ಎಂದರು.
ಇ-ಟಿಕೆಟಿಂಗ್‌ಗೆ ಉತ್ತೇಜನ ನೀಡುವುದಕ್ಕಾಗಿ, ಆರ್‌ಸಿಟಿಸಿ ಮೂಲಕ ಖರೀದಿಸುವ ಟಿಕೆಟ್‌ಗಳಿಗೆ ಸೇವಾ ತೆರಿಗೆಯಿಂದ ವಿನಾಯಿತಿ ನೀಡಲಾಗುವುದು ಎಂದು ಜೇಟ್ಲಿ ಭರವಸೆ ನೀಡಿದರು.
ರೈಲ್ವೆಯ ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳಾದ ಐಆರ್‌ಸಿಟಿಸಿ, ಐಆರ್‌ಎಫ್‌ಸಿ ಮತ್ತು ಕಾನ್‌ಕರ್‌ಗಳನ್ನು ವಿವಿಧ ಶೇರು ವಿನಿಮಯ ಕೇಂದ್ರಗಳಲ್ಲಿ ನೋಂದಾಯಿಸಲಾಗುವುದು.
ಸಣ್ಣ ವ್ಯಾಪಾರ ಸಂಸ್ಥೆಗಳಿಗೆ ಆದಾಯ ತೆರಿಗೆ ಶೇ.25ಕ್ಕೆ ಇಳಿಕೆ ಹೊಸದಿಲ್ಲಿ, ಫೆ.1: ವ್ಯಾಪಾರ ಸಂಸ್ಥೆಗಳನ್ನು ಕಂಪನಿಯ ಸ್ವರೂಪಕ್ಕೆ ಬದಲಿಸಿಕೊಳ್ಳಲು ್ಠಉತ್ತೇಜನ ನೀಡುವ ನಿಟ್ಟಿನಲ್ಲಿ , 50 ಕೋಟಿ ರೂ.ವರೆಗೆ ವಾರ್ಷಿಕ ವಹಿವಾಟು ನಡೆಸುವ ಸಣ್ಣ ವ್ಯಾಪಾರ ಸಂಸ್ಥೆಗಳಿಗೆ ವಿಧಿಸಲಾಗುವ ಆದಾಯ ತೆರಿಗೆಯನ್ನು ಶೇ.25ಕ್ಕೆ ಇಳಿಸಲಾಗಿದೆ. 2015-16ರ ತೆರಿಗೆ ವರ್ಷದ ಮಾಹಿತಿಯ ಪ್ರಕಾರ, 6.94 ಲಕ್ಷ ಸಂಸ್ಥೆಗಳು ವರದಿ ಸಲ್ಲಿಸಿದ್ದು , ಈ ಪೈಕಿ 6.67 ಲಕ್ಷ ಸಂಸ್ಥೆಗಳು ಈ ವಿಭಾಗಕ್ಕೆ ಸೇರುತ್ತವೆ. ಶೇಕಡಾವಾರು ಲೆಕ್ಕದಲ್ಲಿ ಹೇಳುವುದಾದರೆ ಶೇ.96ರಷ್ಟು ಕಂಪನಿಗಳಿಗೆ ಈ ತೆರಿಗೆ ಕಡಿಮೆಗೊಳಿಸಿದ ಕ್ರಮದಿಂದ ಅನುಕೂಲವಾಗಲಿದೆ . ಈ ಸಂಸ್ಥೆಗಳು ಇನ್ನು ಮುಂದೆ ಶೇ.5ರಷ್ಟು ಕಡಿಮೆ ಆದಾಯ ತೆರಿಗೆ ಪಾವತಿಸಬಹುದು ಎಂದು ವಿತ್ತಸಚಿವ ಅರುಣ್ ಜೇಟ್ಲೀ ಹೇಳಿದ್ದಾರೆ. ಇದರಿಂದ , ಬೃಹತ್ ಉದ್ಯಮಗಳಿಗೆ ಹೋಲಿಸಿದರೆ ಎಂಎಸ್‌ಎಂಇ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ಹೆಚ್ಚು ಸ್ಪರ್ಧಾತ್ಮಕವಾಗಲಿವೆ . ಈ ಕ್ರಮದಿಂದ ವಾರ್ಷಿಕ 7,200 ಕೋಟಿ ರೂ.ಆದಾಯ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಜೇಟ್ಲೀ ತಿಳಿಸಿದ್ದಾರೆ.
►ಇ-ಪಾವತಿ ವ್ಯವಹಾರ ಪ್ರೋತ್ಸಾಹಿಸಲು ಪಿಒಎಸ್ ಮೇಲಿನ ತೆರಿಗೆ ರದ್ದು
ಹೊಸದಿಲ್ಲಿ, ಫೆ.1: ನಗದು ರಹಿತ ವ್ಯವಹಾರಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪಿಒಎಸ್ ಯಂತ್ರ(ಪಾಂಟ್ ಆಫ್ ಸೇಲ್ಸ್ ಮೆಷೀನ್)ದ ವ್ಯವಹಾರ, ಬೆರಳಚ್ಚು ಗ್ರಹಿಸುವ ವ್ಯವಸ್ಥೆಗಳ ಮೇಲೆ ವಿಧಿಸಲಾಗುವ ತೆರಿಗೆಯನ್ನು ರದ್ದುಗೊಳಿಸಲಾಗಿದೆ. ನಗದುರಹಿತ ವ್ಯವಹಾರವನ್ನು ಉತ್ತೇಜಿಸಲು- ಸಣ್ಣ ಕಾರ್ಡ್ ರೀಡರ್‌ಗಳು ಮತ್ತು ಎಂಪಿಒಗಳು, 1.5.1. ಆವೃತ್ತಿಯ ಮೈಕ್ರೋ ಎಟಿಎಂಗಳು, ಬೆರಳಚ್ಟು ಗ್ರಹಿಸುವ ಯಂತ್ರಗಳು, ಸ್ಕಾನರ್‌ಗಳು, ಐರಿಸ್ ಸ್ಕಾನರ್‌ಗಳ ಮೇಲಿನ ಮೂಲ ಅಬಕಾರಿ ಸುಂಕ, ಸೀಮಾ ಸುಂಕ, ಸಿವಿಡಿ(ಸರಿಹೊಂದಿಸುವ ತೆರಿಗೆಗಳು), ಎಸ್‌ಎಡಿ(ವಿಶೇಷ ಹೆಚ್ಚುವರಿ ತೆರಿಗೆ)ಯನ್ನು ರದ್ದುಪಡಿಸಲಾಗುವುದು ಎಂದು ವಿತ್ತ ಸಚಿವ ಅರುಣ್ ಜೇಟ್ಲೀ ತಿಳಿಸಿದ್ದಾರೆ. ಈ ವ್ಯವಸ್ಥೆಗಳ ದೇಶೀಯ ಉತ್ಪಾದನೆಗೆ ಪೋತ್ಸಾಹ ನೀಡುವ ನಿಟ್ಟಿನಲ್ಲಿ ಇವುಗಳ ಬಿಡಿಭಾಗಗಳಿಗೂ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಈ ಯಂತ್ರಗಳ ಕೊರತೆಯನ್ನು ಸರಿದೂಗಿಸಲು ಇಂತಹ ತೆರಿಗೆ ವಿನಾಯಿತಿಯ ಅಗತ್ಯವಿದೆ. ಆದರೆ ದೀರ್ಘಾವಧಿಯವರೆಗೆ ತೆರಿಗೆ ವಿನಾಯಿತಿ ನೀಡಿದರೆ ಅದರಿಂದ ಸ್ಥಳೀಯ ಉತ್ಪಾದನೆಗೆ ತೊಂದರೆಯಾಗಲಿದೆ ಎಂದು ಎಲ್ಸಿನಾ (ಇಲೆಕ್ಟ್ರಾನಿಕ್ ಇಂಡಸ್ಟ್ರೀಸ್ ಅಸೋಷಿಯೇಷನ್ ಆಫ್ ಇಂಡಿಯಾ ) ಅಭಿಪ್ರಾಯಪಟ್ಟಿದೆ. ಡಿಜಿಟಲ್ ವ್ಯವಹಾರ ಉತ್ತೇಜಿಸಲು ಇದೊಂದು ಸೂಕ್ತ ಕ್ರಮ ಎಂದು ಎಲ್ಸಿನಾ ಕಾರ್ಯದರ್ಶಿ ರಾಜೂ ಗೋಯೆಲ್ ತಿಳಿಸಿದ್ದಾರೆ.
►ಆಹಾರ, ರಸಗೊಬ್ಬರ, ಪೆಟ್ರೋಲಿಯಂ ಉತ್ಪನ್ನ ಸಬ್ಸಿಡಿ ಶೇ.3ರಷ್ಟು ಹೆಚ್ಚಳ
ಹೊಸದಿಲ್ಲಿ, ಫೆ.1: ಆಹಾರ, ರಸಗೊಬ್ಬರ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಬ್ಸಿಡಿಯ ಮೊತ್ತದಲ್ಲಿ ಶೇ.3ರಷ್ಟು ಹೆಚ್ಚಳವನ್ನು ಬಜೆಟ್‌ನಲ್ಲಿ ಪ್ರಸ್ತಾವಿಸಲಾಗಿದೆ. 2017-18ರ ಆರ್ಥಿಕ ಅವಧಿಯಲ್ಲಿ ಆಹಾರ , ಪೆಟ್ರೋಲಿಯಂ ಮತ್ತು ರಸಗೊಬ್ಬರದ ಮೇಲಿನ ಸಬ್ಸಿಡಿ ಮೊತ್ತವನ್ನು 2,40,338.6 ಕೋಟಿ ರೂ. ಎಂದು ಪ್ರಸ್ತಾವಿಸಲಾಗಿದೆ.
2016-17ರಲ್ಲಿ ಈ ಮೊತ್ತ 2,32,704.68 ಕೋಟಿ ರೂ. ಆಗಿತ್ತು. ಇದು ಶೇ.3ರಷ್ಟು ಏರಿಕೆಯಾಗಿದೆ.ಕಳೆದ ವರ್ಷ ಆಹಾರ ಸಬ್ಸಿಡಿ 1,35,172.96 ಕೋಟಿ ರೂ. ಆಗಿದ್ದರೆ 2017-18ರಲ್ಲಿ ಈ ಮೊತ್ತ 1, 45,338.60 ಕೋಟಿ ಎಂದು ಪ್ರಸ್ತಾವಿಸಲಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಸರಕಾರವು ಅತ್ಯಧಿಕ ಸಬ್ಸಿಡಿ ದರದಲ್ಲಿ 80 ಕೋಟಿಗೂ ಹೆಚ್ಚಿನ ಜನರಿಗೆ ಆಹಾರ ಒದಗಿಸುವ ಕಾರಣ ಆಹಾರ ಸಬ್ಸಿಡಿಯ ಮೊತ್ತದಲ್ಲಿ ಹೆಚ್ಚಳವಾಗಿದೆ.
ರಸಗೊಬ್ಬರ ಸಬ್ಸಿಡಿಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಕಳೆದ ವರ್ಷದಷ್ಟೇ, ಅಂದರೆ 70 ಸಾವಿರ ಕೋಟಿ ಸಬ್ಸಿಡಿಯನ್ನು ಪ್ರಸ್ತಾವಿಸಲಾಗಿದೆ. ಇದರಲ್ಲಿ ಯೂರಿಯಾಕ್ಕೆ 49,768 ಕೋಟಿ ರೂ.ಮತ್ತು ನಿಯಂತ್ರಣ ರಹಿತ ಫಾಸ್ಫರಿಕ್ ಮತ್ತು ಪೊಟಾಸಿಕ್ ರಸಗೊಬ್ಬರಕ್ಕೆ 20,232 ಕೋಟಿ ರೂ. ಸಬ್ಸಿಡಿಯನ್ನು ಪ್ರಸ್ತಾವಿಸಲಾಗಿದೆ. ಪೆಟ್ರೋಲಿಯಂ ಸಬ್ಸಿಡಿಯನ್ನು 27, 531.71 ಕೋಟಿ. ರೂ.ನಿಂದ 25 ಸಾವಿರ ಕೋಟಿ ರೂ.ಗೆ ಇಳಿಸಲಾಗಿದೆ. ಇದರಲ್ಲಿ 16,076.13 ಕೋಟಿ ರೂ. ಎಲ್‌ಪಿಜಿ ಸಬ್ಸಿಡಿಗೆ, ಉಳಿದ ಮೊತ್ತ ಸೀಮೆಎಣ್ಣೆ ಸಬ್ಸಿಡಿಗೆ ಎಂದು ವಿಂಗಡಿಸಲಾಗಿದೆ.
►ಬಜೆಟ್‌ಗೆ ಧನಾತ್ಮಕವಾಗಿ ಸ್ಪಂದಿಸಿದ ಶೇರು ಮಾರುಕಟ್ಟೆ
ಹೊಸದಿಲ್ಲಿ,ಫೆ.1: ವಿತ್ತಸಚಿವ ಅರುಣ್ ಜೇಟ್ಲಿ ಅವರು ಬುಧವಾರ ಸಂಸತ್ತಿನಲ್ಲಿ ಮಂಡಿಸಿದ 2017-18ನೇ ಸಾಲಿನ ಕೇಂದ್ರ ಮುಂಗಡಪತ್ರವನ್ನು ಶೇರು ಮಾರುಕಟ್ಟೆ ಸಂಭ್ರಮದಿಂದ ಸ್ವಾಗತಿಸಿದೆ. ಲೋಕಸಭೆಯಲ್ಲಿ ಜೇಟ್ಲಿಯವರ ಭಾಷಣ ಮುಂದುವರಿಯುತ್ತಿದ್ದಂತೆ ಸ್ಥಿರವಾಗಿ ಏರುತ್ತಲೇ ಇದ್ದ ಮುಂಬೈ ಶೇರು ವಿನಿಮಯ ಕೇಂದ್ರದ ಸೂಚ್ಯಂಕ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಶೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ಅವರು ಮಾತು ಮುಗಿಸಿದಾಗ ಸುಮಾರು ಶೇ.1ರಷ್ಟು ಏರಿಕೆಯನ್ನು ದಾಖಲಿಸಿದ್ದವು.
ಜೇಟ್ಲಿಯವರು ಮುಂಗಡಪತ್ರ ಭಾಷಣವನ್ನು ಮುಗಿಸಿ ತನ್ನ ಆಸನದಲ್ಲಿ ಕುಳಿತಾಗ ಸೆನ್ಸೆಕ್ಸ್ 300 ಅಂಶಗಳಿಗೂ ಹೆಚ್ಚಿನ ಏರಿಕೆಯನ್ನು ಕಂಡಿದ್ದರೆ, ನಿಫ್ಟಿ 80 ಅಂಶಗಳಷ್ಟು ಜಿಗಿದಿತ್ತು.
ಅತ್ತ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಕೂಡ ಮುಂಗಡಪತ್ರಕ್ಕೆ ಧನಾತ್ಮಕವಾಗಿ ಸ್ಪಂದಿಸಿದೆ. ಡಾಲರ್‌ನೆದುರು ರೂಪಾಯಿ 24 ಪೈಸೆಗಳಷ್ಟು ವೃದ್ಧಿ ಕಂಡು 67.63ರಷ್ಟಾಯಿತು. ಮುಂಗಡಪತ್ರ ಭಾಷಣಕ್ಕೆ ಮುನ್ನ ಎರಡು ದಿನಗಳ ವಹಿವಾಟುಗಳಲ್ಲಿ ಸೆನ್ಸೆಕ್ಸ್ 226 ಅಂಶಗಳನ್ನು ಕಳೆದುಕೊಂಡಿತ್ತು.
ಉಭಯ ಸೂಚ್ಯಂಕಗಳಲ್ಲಿ ಏರಿಕೆಯು ಸ್ಮಾಲ್‌ಕ್ಯಾಪ್ ಮತ್ತು ಮಿಡ್‌ಕ್ಯಾಪ್ ಸೂಚ್ಯಂಕಗಳಲ್ಲಿಯೂ ಪ್ರತಿಬಿಂಬಿಸಿತ್ತು. ಹೆಚ್ಚಿನ ಕ್ಷೇತ್ರಗಳು ಏರಿಕೆಗೆ ಸಾಕ್ಷಿಯಾದವು.