×
Ad

ವಿದೇಶಿ ಹೂಡಿಕೆ ಉತ್ತೇಜನ ನಿಗಮ ರದ್ದು

Update: 2017-02-01 23:57 IST

ಹೊಸದಿಲ್ಲಿ,ಫೆ.1: ಈ ಸಲದ ಬಜೆಟ್‌ನಲ್ಲಿಯೂ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹೆಚ್ಚಿನ ಆಸಕ್ತಿ ವಹಿಸಿರುವ ವಿತ್ತ ಸಚಿವ ಅರುಣ್‌ಜೇಟ್ಲಿ, ದೇಶಕ್ಕೆ ಎಫ್‌ಡಿಐನ ಒಳಹರಿವನ್ನು ಸುಲಲಿತಗೊಳಿಸಲು ವಿದೇಶಿ ಹೂಡಿಕೆ ಉತ್ತೇಜನ ನಿಗಮವನ್ನು ರದ್ದುಪಡಿಸುವುದಾಗಿ ಘೋಷಿಸಿದ್ದಾರೆ. ಎಫ್‌ಡಿಐ ಹರಿವನ್ನು ಶೇ. 36ರಷ್ಟು ಹೆಚ್ಚಿಸಲಾಗುವುದೆಂದೂ ಅವರು ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ. ವಿದೇಶಿ ಹೂಡಿಕೆ ನಿಗಮದ ರದ್ದತಿಯು ವಿದೇಶಿ ಕಂಪೆನಿಗಳಿಗೆ ದೇಶದಲ್ಲಿ ಹೂಡಿಕೆಗಳನ್ನು ಮಾಡಲು ಸುಗಮ ಹಾದಿ ಕಲ್ಪಿಸಿಕೊಡಲಿದೆಯೆಂದು ಅವರು ಹೇಳಿದ್ದಾರೆ.

ವಿದೇಶಿ ಹೂಡಿಕೆ ಉತ್ತೇಜನ ನಿಗಮವು, ಪ್ರಸ್ತುತ ಎಫ್‌ಡಿಐ ಅನುಮೋದನೆಗಾಗಿ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಶೀಲಿಸುವ  ಹೊಣೆಗಾರಿಕೆಯನ್ನು ಹೊಂದಿವೆ. 

♦♦♦♦♦♦♦♦♦♦♦♦♦♦♦♦♦♦♦♦♦♦♦

 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಶೇ.20ರಷ್ಟು ಅಧಿಕ ಹಂಚಿಕೆ

ಹೊಸದಿಲ್ಲಿ,ಫೆ.1: 2017-18ನೇ ಸಾಲಿನ ಕೇಂದ್ರ ಮುಂಗಡಪತ್ರದಲ್ಲಿ ಮಹಿಳಾ ಮತ್ತು ಮಕ್ಕಳ ಸಚಿವಾಲಯಕ್ಕೆ ಹಂಚಿಕೆಯನ್ನು ಶೇ.20ರಷ್ಟು ಹೆಚ್ಚಿಸಿ 22,095 ಕೋ.ರೂ.ಗೆ ನಿಗದಿಗೊಳಿಸಲಾಗಿದೆ.

2016-17ನೇ ಸಾಲಿನ 634 ಕೋ.ರೂ.ಗೆ ಹೋಲಿಸಿದರೆ 2017-18ನೇ ಸಾಲಿಗೆ ‘ಇಂದಿರಾ ಗಾಂಧಿ ಮಾತೃತ್ವ ಸಹಯೋಗ ಯೋಜನೆ ’ಗೆ ಮೀಸಲಿರಿಸಿರುವ ಮೊತ್ತವು ನಾಲ್ಕು ಪಟ್ಟು ಜಿಗಿದು 2,700 ಕೋ.ರೂ.ಆಗಿದೆ.

14 ಲಕ್ಷ ಐಸಿಡಿಸಿ ಅಂಗನವಾಡಿಗಳಿಗಾಗಿ 500 ಕೋ.ರೂ.ಗಳ ಹಂಚಿಕೆಯೊಂದಿಗೆ ಗ್ರಾಮ ಮಟ್ಟದಲ್ಲಿ ‘ಮಹಿಳಾ ಶಕ್ತಿ ಕೇಂದ್ರ ’ಗಳ ಸ್ಥಾಪನೆಯನ್ನೂ ವಿತ್ತಸಚಿವ ಅರುಣ್ ಜೇಟ್ಲಿ ಅವರು ತನ್ನ ಮುಂಗಡಪತ್ರ ಭಾಷಣದಲ್ಲಿ ಪ್ರಕಟಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ನೆಚ್ಚಿನ ಯೋಜನೆ ‘ಬೇಟಿ ಬಚಾವೊ,ಬೇಟಿ ಪಢಾವೊ ’ಗಾಗಿ 200 ಕೋ.ರೂ.ಗಳನ್ನು ಮೀಸಲಿರಿಸಲಾಗಿದ್ದು, ಇದು ಕಳೆದ ವರ್ಷದ ಮೊತ್ತದ ಐದು ಪಟ್ಟು ಆಗಿದೆ.

 ನಿರ್ಭಯಾ ನಿಧಿಗಾಗಿ 500 ಕೋ.ರೂ.ಗಳನ್ನು ತೆಗೆದಿರಿಸಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಮೊತ್ತದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದರೊಂದಿಗೆ 2013ರಲ್ಲಿ ಈ ನಿಧಿ ಸ್ಥಾಪನೆಯದಾಗಿನಿಂದ 3,000 ರೂ.ಗಳನ್ನು ಒದಗಿಸಿದಂತಾಗಿದೆ.

ಕಳೆದ ವರ್ಷ 400 ಕೋ.ರೂ.ಗಳನ್ನು ಒದಗಿಸಲಾಗಿದ್ದ ಮಕ್ಕಳ ರಕ್ಷಣಾ ಯೋಜನೆಯು ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯಲ್ಲಿ ವಿಲೀನಗೊಂಡಿದ್ದು, ಈ ವರ್ಷದ ಮುಂಗಡಪತ್ರದಲ್ಲಿ 648 ಕೋ.ರೂ.ಗಳನ್ನು ಮೀಸಲಿರಿಸಲಾಗಿದೆ.

ಎಲ್ಲ ಸಚಿವಾಲಯಗಳಿಗೆ ಮಹಿಳೆಯರ ಏಳಿಗೆಗಾಗಿ ಹಣ ಹಂಚಿಕೆಯನ್ನು ಕಳೆದ ವರ್ಷದ 1,56,528 ಕೋ.ರೂ.ಗಳಿಂದ ಈ ವರ್ಷ 1,84,632 ಕೋ.ರೂ.ಗೆ ಹೆಚ್ಚಿಸಲಾಗಿದೆ ಎಂದು ಜೇಟ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News