ಜಯಲಲಿತಾಗೆ ಸಮರ್ಪಕ ಚಿಕಿತ್ಸೆ ನೀಡಲಾಗಿತ್ತು: ಡಾ. ಬೀಯಲ್
ಹೊಸದಿಲ್ಲಿ,ಫೆ.6: ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ನೀಡಲಾಗಿದ್ದ ಚಿಕಿತ್ಸೆ ಹಾಗೂ ಅವರ ಸಾವಿನ ಸುತ್ತ ಹರಿದಾಡುತ್ತಿರುವ ವದಂತಿಗಳಿಗೆ ತೆರೆಯೆಳೆಯಲು ರಾಜ್ಯ ಸರಕಾರವು ಸೋಮವಾರ ದಿಢೀರ್ ಪತ್ರಿಕಾಗೋಷ್ಠಿಯೊಂದನ್ನು ಏರ್ಪಡಿಸಿತ್ತು. ನೂತನ ಮುಖ್ಯಮಂತ್ರಿಯಾಗಿ ವಿ..ಕೆ. ಶಶಿಕಲಾ ಅವರನ್ನು ಎಡಿಎಂಕೆ ಶಾಸಕಾಂಗ ಸಭೆಯು ಆಯ್ಕೆ ಮಾಡಿದ ಮಾರನೆಯ ದಿನವೇ ಸರಕಾರವು ಈ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿತ್ತು.
ಜಯಲಲಿತಾರ ಅಂತಿಮ ದಿನಗಳಲ್ಲಿ ಅವರ ದೇಹಪರಿಸ್ಥಿತಿ ಹಾಗೂ ಅವರಿಗೆ ನೀಡಲಾಗಿದ್ದ ಚಿಕಿತ್ಸೆಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯರ ತಂಡವು ಸುಮಾರು ಒಂದು ತಾಸುಗಳಿಗೂ ಅಧಿಕ ಸಮಯದವರೆಗೆ ಉತ್ತರಿಸಿತು.
ಜಯಲಲಿತಾ ಅವರಿಗೆ ಆಸ್ಪತ್ರೆಯಲ್ಲಿ ಉತ್ಕೃಷ್ಟ ಮಟ್ಟದ ಚಿಕಿತ್ಸೆ ನೀಡಲಾಗಿತ್ತೆಂದು, ಅವರ ಚಿಕಿತ್ಸೆಯ ಮೇಲ್ವಿಚಾರಣೆ ವಹಿಸಿದ್ದ ಲಂಡನ್‌ನ ವೈದ್ಯಕೀಯ ತಜ್ಞ ರಿಚರ್ಡ್ ಬೀಯಲ್, ಮದ್ರಾಸ್ ಮೆಡಿಕಲ್ ಕಾಲೇಜ್‌ನ ಖ್ಯಾತ ವೈದ್ಯ ಪಿ. ಬಾಲಾಜಿ ಹಾಗೂ ಅಪೊಲೊ ಆಸ್ಪತ್ರೆಯ ಕೆ.ಬಾಬು ಸುದ್ದಿಗಾರರಿಗೆ ತಿಳಿಸಿದರು. ಜಯಾ ಅವರ ಸಾವಿನ ಬಗ್ಗೆ ಹರಿದಾಡುತ್ತಿರುವ ವದಂತಿಗಳನ್ನು ಕೊನೆಗೊಳಿಸುವ ಪ್ರಯತ್ನ ಇದಾಗಿದೆಯೆಂದು ಅವರು ಹೇಳಿದರು.ಜಯಲಲಿತಾ ಅವರು ಸೋಂಕಿನಿಂದಾಗಿ ರಕ್ತದಲ್ಲಿ ನಂಜೇರಿ (ಸೆಪ್ಸಿಸ್)ಪರಿಣಾಮವಾಗಿ ಸೆಪ್ಟೆಂಬರ್ 22ರಂದು ಚೆನ್ನೈನ ಆಪೋಲೋ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಆಸ್ಪತ್ರೆಯಲ್ಲಿ ಅವರಿಗೆ ನೀಡಲಾಗುತ್ತಿದ್ದ ಚಿಕಿತ್ಸೆಯ ಕುರಿತು ಹೆಚ್ಚಿನ ಮಾಹಿತಿಗಳನ್ನು ಬಹಿರಂಗಪಡಿಸದಿದ್ದುು ಊಹಾಪೋಹಗಳಿಗೆ ಕಾರಣವಾಗಿತ್ತು.
ಸೋಂಕು ಪೀಡಿತರಿಗೆ, ರಕ್ತದಲ್ಲಿ ನಂಜನ್ನುಂಟು ಮಾಡುವ ಸೆಪ್ಸಿಸ್ ಕೆಲವೇ ತಾಸುಗಳಲ್ಲಿ ಅಥವಾ ದಿನಗಳಲ್ಲಿ ಜೀವಕ್ಕೆ ಅಪಾಯವನ್ನುಂಟು ಮಾಡಬಹುದೆಂದು ಡಾ. ಬೇಯಲ್ ತಿಳಿಸಿದರು. ಚಿಕಿತ್ಸೆಯ ಸಂದರ್ಭ ಜಯಲಲಿತಾ ಅವರು ಪ್ರಜ್ಞಾಸ್ಥಿತಿಯಲ್ಲಿದ್ದರು ಹಾಗೂ ತನ್ನೊಂದಿಗೆ ಮಾತನಾಡಿದ್ದರೆಂದು ಅವರು ಹೇಳಿದರು.
ಜಯಲಲಿತಾ ನಿಧನದ ಬಗ್ಗೆ ವಿವಿಧ ಊಹಾಪೋಹಗಳು ಹಬ್ಬಿದ್ದವು. ಜಯಲಲಿತಾಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿರಲಿಲ್ಲ ಹಾಗೂ ಆಕೆಗೆ ನೀಡಲಾಗುತ್ತಿರುವ ಚಿಕಿತ್ಸೆಯ ವಿವರಗಳನ್ನು ಗೌಪ್ಯವಾಗಿರಿಸಲಾಗಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು.
ಜಯಲಲಿತಾ ಅವರ ಚಿಕಿತ್ಸಾ ಪ್ರಕ್ರಿಯು ಅತ್ಯಂತ ನೇರವಾಗಿತ್ತು. ಆದರಲ್ಲಿ ಯಾವುದೇ ಸಂಚು ಅಡಗಿರಲಿಲ್ಲವೆಂದು ಹೇಳಿದ ಡಾ. ಬೀಯಲ್, ದಿವಂಗತ ಮುಖ್ಯಮಂತ್ರಿಯ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೊಳಪಡಿಸಬೇಕೆಂಬ ಕೆಲವರ ಬೇಡಿಕೆಯು ತೀರಾ ಅಸಂಬದ್ಧವಾದುದೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು. 68 ವರ್ಷದ ಜಯಾ, ಡಿಸೆಂಬರ್ 5ರಂದು ಹೃದಯಾಘಾತದಿಂದ ಮೃತಪಟ್ಟರು.
ತಮಿಳುನಾಡಿನ ಮುಖ್ಯಮಂತ್ರಿಯಾಗಿ ಶಶಿಕಲಾ ಅವರ ದಿಢೀರ್ ನೇಮಕದ ಬಗ್ಗೆ ತಮಿಳುನಾಡಿನ ಜನತೆಯಲ್ಲಿ ತೀವ್ರವಾದ ಅಸಮಾಧಾನವಿದ್ದು, ಈ ಪತ್ರಿಕಾಗೋಷ್ಟಿಯ ಮೂಲಕ ಪಕ್ಷದ ನಾಯಕರು ಜನರ ಭಾವನೆಗಳನ್ನು ಸಮಾಧಾನಪಡಿಸಲು ಬಯಸಿದ್ದಾರೆಂದು ಡಿಎಂಕೆ ಪಕ್ಷದ ವಕ್ತಾರ ಸರವಣನ್ ಟೀಕಿಸಿದ್ದಾರೆ.