ಎಂಎನ್‌ಎಸ್ ಗೆ ರಾಜ್‌ಠಾಕ್ರೆ ಪುತ್ರ 'ಸ್ಟಾರ್ ಪ್ರಚಾರಕ'
ಮುಂಬೈ,ಫೆ.6: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಪರವಾಗಿ ಪಕ್ಷಾಧ್ಯಕ್ಷ ರಾಜ್‌ಠಾಕ್ರೆಯವರ ಪುತ್ರ ಅಮಿತ್ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಫೆಬ್ರವರಿ 16 ಹಾಗೂ 21ರಂದು ಎರಡು ಹಂತಗಳಲ್ಲಿ ನಡೆಯಲಿರುವ ಮಹಾರಾಷ್ಟ್ರ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಉದ್ಧವ್ ಠಾಕ್ರೆಯವರ ಪುತ್ರ ಆದಿತ್ಯರನ್ನು 'ತಾರಾ ಪ್ರಚಾರಕ'ನಾಗಿ ಕಣಕ್ಕಿಳಿಸುವ ಶಿವಸೇನೆಯ ನಿರ್ಧಾರಕ್ಕೆ ಪ್ರತಿಯಾಗಿ ಎಂಎನ್‌ಎಸ್ ಈ ಹೆಜ್ಜೆಯನ್ನಿಟ್ಟಿದೆಯೆಂದು ರಾಜಕೀಯ ವಿಶ್ಲೇಷಕರು ಬಣ್ಣಿಸಿದ್ದಾರೆ. 2006ರಲ್ಲಿ ಶಿವಸೇನೆಯಿಂದ ಸಿಡಿದು, ರಾಜ್‌ಠಾಕ್ರೆ ಎಂಎನ್‌ಎಸ್ ಪಕ್ಷವನ್ನು ಸ್ಥಾಪಿಸಿದ್ದರು. ರಾಜ್‌ಠಾಕ್ರೆ ಅವರು ಶಿವಸೇನೆಯ ಸ್ಥಾಪಕ ದಿವಂಗತ ಬಾಳಾಠಾಕ್ರೆಯವರ ಸೋದರಳಿಯ.
15 ಜಿಲ್ಲಾ ಪರಿಷತ್‌ಗಳಲ್ಲಿ, 165 ಪಂಚಾಯತ್ ಸಮಿತಿಗಳಲ್ಲಿ ಹಾಗೂ 10 ಮುನ್ಸಿಪಲ್ ಕಾರ್ಪೊರೇಷನ್‌ಗಳಿಗೆ ಚುನಾವಣೆ ನಡೆಯಲಿದ್ದು, ಹಲವೆಡೆ ಬಿಜೆಪಿ, ಶಿವಸೇನೆ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದ್ದರೆ, ಎಂಎನ್‌ಎಸ್‌ಗೆ ಈ ಚುನಾವಣೆಯು ಅಳಿವು ಉಳಿವಿನ ಪ್ರಶ್ನೆಯಾಗಿದೆ.
25 ವರ್ಷ ವಯಸ್ಸಿನ ಅಮಿತ್, ಮಹಾರಾಷ್ಟ್ರದ ನಾಲ್ಕು ಮಹಾನಗರಗಳಾದ ಮುಂಬೈ, ಪುಣೆ,ನಾಸಿಕ್ ಹಾಗೂ ಥಾಣೆಗಳಲ್ಲಿ ಎಂಎನ್‌ಎಸ್ ಪರವಾಗಿ ಬಿರುಸಿನ ಚುನಾವಣಾ ಪ್ರಚಾರ ನಡೆಸಲಿದ್ದಾರೆಂದು ಎಂಎನ್‌ಎಸ್ ನಾಯಕ ಶಿರೀಶ್ ಸಾವತ್ ಹೇಳಿದ್ದಾರೆ. ವಾಣಿಜ್ಯ ಪದವೀಧರನಾದ ಅಮಿತ್, 2014ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಎಂಎನ್‌ಎಸ್ ಪರವಾಗಿ ಪ್ರಚಾರ ಮಾಡಿದ್ದರು. ಇತ್ತೀಚಿನ ತಿಂಗಳುಗಳಲ್ಲಿ ಎಂಎನ್‌ಎಸ್‌ನಿಂದ ದೊಡ್ಚ ಸಂಖ್ಯೆಯ ನಾಯಕರು ಹಾಗೂ ಕಾರ್ಯಕರ್ತರು ಪಕ್ಷಾಂತರ ಮಾಡಿರುವ ಹಿನ್ನೆಲೆಯಲ್ಲಿ, ಆ ಪಕ್ಷವು ನೈತಿಕ ಸ್ಥೈರ್ಯದ ಕೊರತೆಯಿಂದ ಬಳಲುತ್ತಿದ್ದು,ಚುನಾವಣೆಯಲ್ಲಿ ಅದು ಪ್ರಬಲ ಪೈಪೋಚಿಯನ್ನು ನೀಡುವ ಸಾಧ್ಯತೆ ವಿರಳವೆನ್ನಲಾಗುತ್ತಿದೆ.