2018ರೊಳಗೆ 2.5 ಲಕ್ಷ ಗ್ರಾಮಗಳಿಗೆ ಇಂಟರ್‌ನೆಟ್
ಹೊಸದಿಲ್ಲಿ,ಫೆ.8: ಮುಂದಿನ ವರ್ಷದ ಅಂತ್ಯದೊಳಗೆ ಎಲ್ಲಾ 2.5 ಲಕ್ಷ ಗ್ರಾಮ ಪಂಚಾಯತ್‌ಗಳಿಗೂ ಇಂಟರ್‌ನೆಟ್ ಸೇವೆಗಳನ್ನು ಒದಗಿಸುವ ನಿರೀಕ್ಷೆಯಿದೆಯೆಂದು ಕೇಂದ್ರ ಸರಕಾರವು ಬುಧವಾರ ಲೋಕಸಭೆಗೆ ತಿಳಿಸಿದೆ. ನಗದು ರಹಿತ ಆರ್ಥಿಕತೆಯನ್ನು ಉತ್ತೇಜಿಸಲು ದೇಶಾದ್ಯಂತ ಅಂತರ್‌ಜಾಲ ಸಂಪರ್ಕವನ್ನು ಬಲಪಡಿಸ ಲಾಗುವುದೆಂದವರು ತಿಳಿಸಿದರು.
ಭಾರತ್‌ನೆಟ್ ಪ್ರಾಜೆಕ್ಟ್ ಯೋಜನೆಯ ಮೊದಲ ಹಂತವಾಗಿ ಈ ವರ್ಷದ ಮಾರ್ಚ್‌ನೊಳಗೆ ಸುಮಾರು ಒಂದು ಲಕ್ಷ ಗ್ರಾಮಪಂಚಾಯತ್‌ಗಳನ್ನು ಭೂಗತ ಒಪ್ಟಿಕಲ್ ಫೈಬರ್ ಕೇಬಲ್ (ಓಎಫ್‌ಸಿ) ಜಾಲದಿಂದ ಸಂಪರ್ಕಿಸಲಾಗುವುದೆಂದು ಕೇಂದ್ರ ಸಚಿವ ಪಿ.ಪಿ.ಚೌಧುರಿ ಪ್ರಶ್ನೋತ್ತರ ವೇಳೆಯಲ್ಲಿ ತಿಳಿಸಿದರು.
ಭಾರತ್‌ನೆಟ್ ಪ್ರಾಜೆಕ್ಟ್‌ನ ಎರಡನೆ ಹಂತದಲ್ಲಿ 1.5 ಲಕ್ಷ ಗ್ರಾಮಪಂಚಾಯತ್‌ಗಳಿಗೆ 2018ರ ಡಿಸೆಂಬರ್‌ನೊಳಗೆ ಅಂತರ್‌ಜಾಲ ಸಂಪರ್ಕ ಒದಗಿಸಲಾಗುವುದು ಎಂದರು.
ಸದನದಲ್ಲಿ ಗೈರುಹಾಜರಾಗಿದ್ದ ಕೇಂದ್ರ ಸಂಪರ್ಕ ಸಚಿವ ಮನೋಜ್ ಸಿನ್ಹಾ ಪರವಾಗಿ ಉತ್ತರಿಸುತ್ತಿದ್ದ ಅವರು 2017ರ ಜನವರಿ 29ರವರೆಗೆ 76,089 ಗ್ರಾಮ ಪಂಚಾಯತ್‌ಗಳಲ್ಲಿ ಓಎಫ್‌ಸಿ ಕೇಬಲ್‌ನ್ನು ಅಳವಡಿಸಲಾಗಿದ್ದು, ಅವು 1,72,257 ಕಿ.ಮೀ. ವಿಸ್ತೀರ್ಣ ಹೊಂದಿವೆ ಎಂದರು. ಸುಮರು 16,355 ಗ್ರಾಮಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ಒದಗಿಸಲಾಗಿದೆಯೆಂದರು.