×
Ad

ಡಿಎಂಕೆ ಜೊತೆ ಶಾಮೀಲಾಗಿಲ್ಲ: ಪನ್ನೀರ್

Update: 2017-02-08 22:12 IST

►ಪಕ್ಷದ ಖಜಾಂಚಿ ಹುದ್ದೆಯಿಂದ ನನ್ನನ್ನು ಉಚ್ಚಾಟಿಸಲು ಶಶಿಕಲಾಗೆ ಹಕ್ಕಿಲ್ಲ

►ಜಯಾ ಸಾವಿನ ಬಗ್ಗೆ ತನಿಖೆ ನಡೆಸಲಾಗುವುದು

ಚೆನ್ನೈ,ಫೆ.8:ಎಡಿಎಂಕೆ ನಾಯಕತ್ವದ ವಿರುದ್ಧ ತನ್ನ ಬಂಡಾಯದ ಹಿಂದೆ ಡಿಎಂಕೆಯ ಕೈವಾಡವಿದೆಯೆಂಬ ಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರ ಆರೋಪವನ್ನು ತಮಿಳುನಾಡು ಮುಖ್ಯಮಂತ್ರಿ ಓ.ಪನ್ನೀರ್‌ಸೆಲ್ವನ್ ತಳ್ಳಿಹಾಕಿದ್ದಾರೆ. ಪಕ್ಷದ ಖಜಾಂಚಿ ಹುದ್ದೆಯಿಂದ ತನ್ನನ್ನು ಉಚ್ಚಾಟಿಸಲು ಆಕೆಗೆ ಹಕ್ಕಿಲ್ಲವೆಂದೂ ಅವರು ವಾದಿಸಿದ್ದಾರೆ. ತಾನು ಡಿಎಂಕೆ ಜೊತೆ ಶಾಮೀಲಾಗಿದ್ದೇನೆಂಬ ಆರೋಪವನ್ನು ಸಾಬೀತುಪಡಿಸುವಂತೆಯೂ ಪನ್ನೀರ್, ಶಶಿಕಲಾಗೆ ಸವಾಲೊಡ್ಡಿದ್ದಾರೆ.

ಡಿಎಂಕೆ ಜೊತೆ ನಾನು ಯಾವತ್ತೂ ಸೌಹಾರ್ದಯುತ ಸಂಬಂಧವನ್ನು ಹೊಂದಿಲ್ಲವೆಂದು ಇತಿಹಾಸವನ್ನು ಅವಲೋಕಿಸಿದಲ್ಲಿ ಸ್ಪಷ್ಟವಾಗುತ್ತದೆಯೆಂದವರು ಹೇಳಿದ್ದಾರೆ.

ಪನ್ನೀರ್‌ಸೆಲ್ವಂ ಮಂಗಳವಾರ ಚೆನ್ನೆನಲ್ಲಿ ಜಯಾ ಸಮಾಧಿಯನ್ನು ಸಂದರ್ಶಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಾ, ಶಶಿಕಲಾ ಬೆಂಬಲಿಗರ ಬಲವಂತದಿಂದಾಗಿ ತಾನು ರಾಜೀನಾಮೆ ನೀಡಬೇಕಾಯಿತೆಂದು ಆರೋಪಿಸುವ ಮೂಲಕ ಪಕ್ಷದಲ್ಲಿ ಬಂಡಾಯದ ಬಾವುಟ ಹಾರಿಸಿದ್ದರು.

ಇತ್ತೀಚೆಗೆ ವಿಧಾನಸಭಾ ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕರಾಗಿರುವ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ಜೊತೆ ತಾನು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡಿದ್ದರ ಬಗ್ಗೆ ಶಶಿಕಲಾ ಬೆಟ್ಟು ಮಾಡಿತೋರಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಮಾನವರು ಹಾಗೂ ಪ್ರಾಣಿಗಳ ನಡುವೆ ಇರುವ ವ್ಯತ್ಯಾಸ ಇದೇ ಆಗಿದೆ ’ ಎಂರರು.

ಮುಖ್ಯಮಂತ್ರಿ ಹುದ್ದೆಯಲ್ಲಿ ತಾನು ಮುಂದುವರಿಯುವುದಕ್ಕೆ ಅವಕಾಶ ನೀಡುವಂತೆ ರಾಜ್ಯಪಾಲರ ಜೊತೆ ಹಕ್ಕುಮಂಡಿಸುವಿರಾ ಎಂಬ ಪ್ರಶ್ನೆಗೆ ಅವರು, ಸ್ವಲ್ಪ ಕಾದು ನೋಡಿ ಎಂದಷ್ಟೇ ಉತ್ತರಿಸಿದರು.

ಜಯಾ ನಿಧನದ ಬಳಿಕ ಉದ್ಭವಿಸಿದ ಅಸಾಧಾರಣ ಸನ್ನಿವೇಶಗಳ ಹಿನ್ನೆಲೆಯಲ್ಲಿ ಶಶಿಕಲಾ ಅವರನ್ನು ತಾತ್ಕಾಲಿಕವಾಗಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿತ್ತು. ಆದುದರಿಂದ ಪಕ್ಷದ ಖಜಾಂಚಿ ಹುದ್ದೆಯಿಂದ ತನ್ನನ್ನು ಕಿತ್ತೊಗೆಯಲು ಶಶಿಕಲಾಗೆ ಯಾವುದೇ ಅಧಿಕಾರವಿಲ್ಲವೆಂದು ಪನ್ನೀರ್‌ಸೆಲ್ವಂ ಹೇಳಿದರು.

ಜಯಲಲಿತಾ ಅವರ ಸಾವಿನ ಬಗ್ಗೆ ತನಿಖೆ ನಡೆಸಲಾಗುವುದೆಂದು ಅವರು ಹೇಳಿದರು. ಮುಖ್ಯಮಂತ್ರಿಯಾಗಿ ಮುಂದುವರಿಯಲು ತನಗೆ ಜಯಲಲಿತಾ ಸೋದರ ಸೊಸೆ ದೀಪಾ ಜಯಕುಮಾರ್ ಬೆಂಬಲ ನೀಡಿದಲ್ಲಿ ತಾನದನ್ನು ಸ್ವೀಕರಿಸುವುದಾಗಿ ಪನ್ನೀರ್ ತಿಳಿಸಿದರು.

ಎಡಿಎಂಕೆ ಅಧ್ಯಕ್ಷ ಎಂ.ಜಿ.ರಾಮಚಂದ್ರನ್ ಪಕ್ಷನ್ನು ಸ್ಥಾಪಿಸುವಾಗ ರೂಪಿಸಿದ ನಿಯಮಗಳ ಪ್ರಕಾರ, ಪಕ್ಷದ ಪ್ರಧಾನ ಕಾರ್ಯದರ್ಶಿಯು ಪ್ರಾಥಮಿಕ ಸದಸ್ಯರಿಂದ ಚುನಾಯಿತನಾದ ಆನಂತರವೇ ಆತನ ಹುದ್ದೆಗೆ ಕಾನೂನು ಮಾನ್ಯತೆ ದೊರೆಯುತ್ತದೆ ಎಂದು ಪನ್ನೀರ್ ಸೆಲ್ವಂ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪನ್ನೀರ್‌ಸೆಲ್ವಂ ಜೊತೆ ಶಾಸಕ ವಿ.ಸಿ. ಆರು ಕುಟ್ಟಿ ಹಾಗೂ ರಾಜ್ಯಸಭಾ ಸದಸ್ಯ ಮೈತ್ರೇಯನ್ ಉಪಸ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News