×
Ad

ಮಹಿಳಾ ಸ್ವಾಭಿಮಾನವನ್ನು ಹರಾಜು ಹಾಕಿದ ಅಬ್ಬಕ್ಕ ಉತ್ಸವ

Update: 2017-02-08 23:59 IST

16ನೆ ಶತಮಾನದಲ್ಲಿ ಬಾಳಿ ಬದುಕಿ ನಮ್ಮ ಉಳ್ಳಾಲಕ್ಕೆ ಇತಿಹಾಸದ ಪುಟಗಳಲ್ಲಿ ವಿಶಿಷ್ಟ ಸ್ಥಾನಮಾನವೊದಗಿಸಿದವಳು ಅಬ್ಬಕ್ಕ. ರಾಣಿ ಅಬ್ಬಕ್ಕ ಮಹಿಳಾ ಬಂಡಾಯದ ಪ್ರತೀಕ. ಮಹಿಳಾ ಸ್ವಾಭಿಮಾನದ ಬಹುದೊಡ್ಡ ಸಂಕೇತ. ಅಳಿಯ ಕಾಮರಾಯ ಪೋರ್ಚುಗೀಸರೊಂದಿಗೆ ಕೈ ಜೋಡಿಸಿ ನಾಡಿಗೆ ದ್ರೋಹವೆಸಗಿದಾಗ, ಪತಿ ಲಕ್ಷ್ಮ್ಮಪ್ಪಬಂಗರಸು ಪೋರ್ಚುಗೀಸರಿಗೆ ಬೆದರಿ ಕಪ್ಪಕೊಡುತ್ತಿದ್ದಾಗ ಅದನ್ನು ವಿರೋಧಿಸಿದವಳು ನಮ್ಮ ಅಬ್ಬಕ್ಕ. ತನ್ನ ನಾಡಿನ ಜನತೆಯ ಬೆವರಿನ, ಶ್ರಮದ ದುಡಿಮೆ ತನ್ನ ಜನರ ಕಲ್ಯಾಣಕ್ಕಾಗಿ ವಿನಿಯೋಗವಾಗಬೇಕೇ ಹೊರತು ಕಡಲಾಚೆಯಿಂದ ವ್ಯಾಪಾರಕ್ಕೆಂದು ಬಂದವರ ಬೇಕು ಬೇಡಗಳನ್ನು ಪೂರೈಸಲು ವಿನಿಯೋಗವಾಗಬಾರದೆಂದು ಚಿಂತಿಸಿದ ಮಹಾನ್ ವನಿತೆ ಅಬ್ಬಕ್ಕ.

ಪುಕ್ಕಲ ಪತಿ ಲಕ್ಷ್ಮ್ಮಪ್ಪ ಬಂಗರಸು ಆಕೆಯ ಮಾತನ್ನು ಧಿಕ್ಕರಿಸಿ ದ್ರೋಹಿ ಕಾಮರಾಯನ ಮಾತನ್ನು ಮನ್ನಿಸಿ ಪೋರ್ಚುಗೀಸರಿಗೆ ಕಪ್ಪ ಕೊಡುವುದನ್ನು ಮುಂದುವರಿಸಿದಾಗ ಪತಿಯ ವಿರುದ್ಧವೇ ಬಂಡಾಯವೆದ್ದವಳು ಅಬ್ಬಕ್ಕ. ಪತಿ ಉಡುಗೊರೆಯಾಗಿ ನೀಡಿದ್ದ ಒಡವೆಗಳನ್ನು ಆತನಿಗೆ ಹಿಂದಿರುಗಿಸಿ ಆತನಿಂದ ದೂರವಾಗಿ ಬ್ಯಾರಿಗಳ ಮತ್ತು ಮೊಗವೀರರ ಸೇನೆ ಕಟ್ಟಿಕೊಂಡು ಪೋರ್ಚುಗೀಸರೊಂದಿಗೆ ಕಾದಾಡಿ ಇತಿಹಾಸದ ಪುಟಗಳಲ್ಲಿ ಅಜರಾಮರಳಾದವಳು ಅಬ್ಬಕ್ಕ. ಆದರೆ ಈ ಕಾಲದ ದುರಂತವೇನೆಂದರೆ ಅಬ್ಬಕ್ಕ ಯಾವ ಪೋರ್ಚುಗೀಸರ ಅಡಿಯಾಳು ಲಕ್ಷ್ಮ್ಮಪ್ಪಬಂಗರಸನನ್ನು ಧಿಕ್ಕರಿಸಿದ್ದಳೋ ಇಂದು ಅಬ್ಬಕ್ಕ ಉತ್ಸವದ ಸಂದರ್ಭಗಳಲ್ಲಿ ಆತನನ್ನು ಪುರಸ್ಕರಿಸಲಾಗುತ್ತಿದೆ. ಆತನ ಹೆಸರಿನಲ್ಲಿ ಅಬ್ಬಕ್ಕ ಉತ್ಸವದ ದ್ವಾರಗಳನ್ನು ನಿರ್ಮಿಸಲಾಗುತ್ತಿದೆ. ಇದು ಅಬ್ಬಕ್ಕಳಿಗೆ ಮಾಡುವ ಅವಮಾನವೂ ಹೌದು. ಇತಿಹಾಸ ತಿರುಚುವಿಕೆಯೂ ಹೌದು.

ಮೊನ್ನೆ ಕೊಣಾಜೆ ಬಳಿಯ ಅಸೈಗೋಳಿ ಎಂಬಲ್ಲಿ ರಾಜ್ಯ ಸರಕಾರದ ಬೃಹತ್ ಅನುದಾನದ ಮೂಲಕ ಅದ್ಧೂರಿಯ ಅಬ್ಬಕ್ಕ ಉತ್ಸವ ನಡೆಸಲಾಯಿತು. ಡಾ ಶೈಲಾ ಟಿ. ವರ್ಮ ಮತ್ತು ಕೋಡಿಬೆಟ್ಟು ರಾಜಲಕ್ಷ್ಮೀಯವರು ‘ಮಹಿಳೆ ಮತ್ತು ಅಸಾಂಪ್ರದಾಯಿಕ ನೆಲೆಗಳು’ ಎಂಬ ಪ್ರಬಂಧ ಮಂಡಿಸಿದ್ದರು. ಇಬ್ಬರೂ ಪ್ರಬಂಧಕಾರ್ತಿಯರು. ಮಹಿಳಾ ಸ್ವಾಭಿಮಾನ, ಶೋಷಣೆ, ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಗೆ ಆಗುತ್ತಿರುವ ಅನ್ಯಾಯ, ದುಡಿಯುವ ಮಹಿಳೆಯ ಮುಂದಿರುವ ಸವಾಲುಗಳು ಇತ್ಯಾದಿಗಳ ಕುರಿತಂತೆ ಚೆನ್ನಾಗಿಯೇ ವಿಷಯ ಮಂಡಿಸಿದರು. ಅದಾದ ಬಳಿಕ ತುಳುನಾಡಿನ ಜನರ ಆಡುಭಾಷೆಗಳಾದ ತುಳು, ಬ್ಯಾರಿ, ಕೊಂಕಣಿಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ಚೆನ್ನಾಗಿ ಮೂಡಿಬಂತು.

ರವಿವಾರ ಮಧ್ಯಾಹ್ನದ ಹೊತ್ತಿಗೆ ನಾಟಕ ತಂಡವೊಂದರಿಂದ ತುಳು ಹಾಸ್ಯರಂಜನೆ ಕಾರ್ಯಕ್ರಮವಿತ್ತು. ಮೂರು ಮಂದಿ ಪಾತ್ರಧಾರಿಗಳಿದ್ದ ಈ ಪ್ರಹಸನವು ಟ್ರಾಫಿಕ್ ಪೊಲೀಸನೊಬ್ಬ ಬಸ್ಸೊಂದನ್ನು ತಡೆದು ನಿಲ್ಲಿಸಿ ದಂಡ ಕೇಳುವ ಮೂಲಕ ಪ್ರಾರಂಭವಾಗುತ್ತದೆ. ಬಸ್ಸಿನ ಸಿಬ್ಬಂದಿಯಲ್ಲಿ ಚಾಲಕ ಪುರುಷನಾದರೆ, ನಿರ್ವಾಹಕ ಓರ್ವ ಮಹಿಳೆ. ಈ ಮೂರು ಮಂದಿಯ ಮಧ್ಯೆ ನಡೆಯುವ ಸಂಭಾಷಣೆಯೇ ಒಟ್ಟು ಪ್ರಹಸನದ ವಸ್ತು. ಅದೆಷ್ಟು ಅಶ್ಲೀಲವಾಗಿತ್ತೆಂದರೆ ಅದರ ಸಂಭಾಷಣೆ ‘ಎ’ ಪ್ರಮಾಣಪತ್ರದ ಸಿನೆಮಾದ ಸಂಭಾಷಣೆಯಂತಿತ್ತು. ಆ ಹೊತ್ತು ಅಲ್ಲಿ ನೆರೆದಿದ್ದ ಪ್ರೇಕ್ಷಕರ ಸಂಖ್ಯೆ ಅಂದಾಜು ಎಂಟು ನೂರರಿಂದ ಒಂದು ಸಾವಿರದಷ್ಟಿರಬಹುದು. ಅದರಲ್ಲಿ ಅರ್ಧಕ್ಕೂ ಮಿಕ್ಕಿದವರು ಮಹಿಳಾ ಪ್ರೇಕ್ಷಕರಾಗಿದ್ದರು. ಸ್ವಾಭಿಮಾನಿ ಮಹಿಳೆಯರಿಗೆ ರೋಲ್ ಮಾಡೆಲ್ ಆಗಿರುವ ಅಬ್ಬಕ್ಕಳ ಉತ್ಸವದ ಈ ಪ್ರಹಸನದಲ್ಲಿ ನೇರವಾಗಿ ಮಹಿಳೆಯನ್ನು ವ್ಯಾಪಾರದ ಸರಕು ಎಂಬಂತೆ ಬಿಂಬಿಸಲಾಗಿತ್ತು. ಒಂದೆಡೆ ಚಾಲಕ ಹೇಳುತ್ತಾನೆ ‘‘ಈ ಹಿಂದೆ ನಮ್ಮ ಬಸ್ಸಿಗೆ ಏನೇನೂ ಕಲೆಕ್ಷನ್ ಇರಲಿಲ್ಲ. ಮುಂಬೈಯ ಬಾರ್‌ವೊಂದರಲ್ಲಿ ದುಡಿಯುತ್ತಿದ್ದ ಈಕೆಯನ್ನು ಕಂಡಕ್ಟರ್ ಆಗಿ ನೇಮಿಸಿದ ಬಳಿಕ ನಮ್ಮ ಬಸ್ ಸದಾ ಫುಲ್. ಜನ ಈಕೆಯನ್ನು ನೋಡಿ ಇದೇ ಬಸ್ಸಿಗೆ ನೂಕು ನುಗ್ಗಲು ಮಾಡಿ ಹತ್ತುತ್ತಾರೆ. ಅದಕ್ಕೆ ನೀವು ನಮ್ಮ ಬಸ್ಸಿನ ಮೇಲೆ ದಂಡ ಹಾಕುವುದು ಯಾವ ನ್ಯಾಯ ಸ್ವಾಮೀ? ಈಕೆ ಹಳೆ ವೃತ್ತಿಯ ಅಭ್ಯಾಸದಂತೆ ಬಸ್ಸಲ್ಲಿ ವಯ್ಯಾರದ ನೃತ್ಯ ಮಾಡಿ ಮೈ ಕೈ ಸೋಕಿಸುತ್ತಾ ಕೆಲಸ ನಿರ್ವಹಿಸುವುದರಿಂದ ನಮ್ಮ ಬಸ್ ಲಾಭದಾಯಕವಾಗಿ ನಡೆಯುತ್ತದೆ’’.

ಇದು ಇನ್ನೂ ಎಷ್ಟು ಅಶ್ಲೀಲವಾಗಿ ಮುಂದುವರಿಯುತ್ತದೆಯೆಂದರೆ ಮಹಿಳಾ ಕಂಡಕ್ಟರ್ ಪಾತ್ರಧಾರಿ (ಪುರುಷ)ಯ ಸಂಭಾಷಣೆ ಬಸ್ಸಿನ ಪ್ರಯಾಣಿಕರನ್ನು ಮಂಚಕ್ಕೆ ಕರೆಯುವ ರೀತಿಯ ದ್ವಂದ್ವಾರ್ಥದಲ್ಲಿತ್ತು. ಒಟ್ಟಿನಲ್ಲಿ ಇಡೀ ಪ್ರಹಸನವೇ ದ್ವಂದ್ವಾರ್ಥದ ಅಶ್ಲೀಲ ಹಾಸ್ಯದಲ್ಲೇ ತುಂಬಿತ್ತು. ಅವನ್ನು ಇಲ್ಲಿ ಬರೆಯಲು ಸಾಧ್ಯವಿಲ್ಲ. ಇದನ್ನು ನೋಡುತ್ತಾ ಅನೇಕ ಮಹಿಳಾ ಪ್ರೇಕ್ಷಕರ ಕರತಾಡನ ಮುಗಿಲು ಮುಟ್ಟುವಂತಿತ್ತು. ಇಡೀ ಮಹಿಳಾ ಸಂಕುಲವನ್ನೇ ಅವಮಾನಿಸುತ್ತಿದ್ದರೂ ಇವರ್ಯಾರಿಗೂ ಸಂವೇದನೆಯೇ ಇಲ್ಲವೇ..... ಎಂದನಿಸುತ್ತಿತ್ತು. ಈ ಕಾರ್ಯಕ್ರಮವನ್ನು ಸ್ಥಳೀಯ ಚಾನೆಲ್‌ವೊಂದರಲ್ಲಿ ನೇರ ಪ್ರಸಾರ ಮಾಡಲಾಗುತ್ತಿತ್ತು. ಅದು ಇನ್ನು ಒಂದು ತಿಂಗಳ ಕಾಲ ಮರುಪ್ರಸಾರವಾಗುತ್ತಿರುತ್ತದೆ. ಈ ಕಾರ್ಯಕ್ರಮಕ್ಕೆ ಅನುದಾನ ಒದಗಿಸುವ ಇಲಾಖೆಯ ಸಚಿವೆ ಉಮಾಶ್ರೀಯೂ ಓರ್ವ ಮಹಿಳೆ. ಸಂಘಟಕರ ಮತ್ತು ಆ ತಂಡದ ದಾರ್ಷ್ಟಕ್ಕೆ ಏನೆನ್ನಬೇಕು? ಇದನ್ನು ಪುರುಷಾಹಂಕಾರವೆನ್ನಬೇಕೆ? ಅಥವಾ ಮಹಿಳೆಯರ ಅಸಹಾಯಕತೆಯ ದುರ್ಲಾಭ ಎತ್ತುವುದೆನ್ನಬೇಕೇ.....? ಸಂಬಂಧಪಟ್ಟವರು ಉತ್ತರಿಸುವರೇ.....

Writer - ಇಸ್ಮತ್ ಫಜೀರ್

contributor

Editor - ಇಸ್ಮತ್ ಫಜೀರ್

contributor

Similar News