ದಫನಗೈದ ಮೃತದೇಹಗಳನ್ನು ಹೊರತೆಗೆದ ನಾಲ್ವರ ವಿರುದ್ಧ ಕೇಸು
ಮರಯೂರ್,ಫೆ.14: ಗ್ರಾಮಪಂಚಾಯತ್‌ನ ಸಾರ್ವಜನಿಕ ಸ್ಮಶಾನದಲ್ಲಿ ದಫನ ಮಾಡಿದ್ದ ಎಂಟು ಮೃತದೇಹಗಳನ್ನು ಹೊರಗೆ ತೆಗೆದು ಹಾಕಿದ ಘಟನೆ ನಡೆದಿದೆ. ಮರಯೂರ್ ಪಂಚಾಯತ್‌ನ ಮಾಲಿನ್ಯ ಹಾಕುವ ಸ್ಥಳದ ಸುತ್ತಲೂ ಗೋಡೆ ಕಟ್ಟುವ ಕೆಲಸ ನಡೆಯುತ್ತಿದ್ದಾಗ ಬುಲ್ಡೋಝರ್ ಮೂಲಕ ಮಣ್ಣು ತೆಗೆದು ಅಲ್ಲಿ ಹೂಳಲಾಗಿದ್ದ ಮೃತದೇಹಗಳನ್ನು ಹೊರಗೆ ತೆಗೆಯಲಾಗಿತ್ತು.
ಇತ್ತೀಚೆಗಷ್ಟೆ ಅಲ್ಲಿ ದಫನ ಮಾಡಲಾಗಿದ್ದು ಸೇರಿ ಎಂಟು ಮೃತದೇಹಗಳನ್ನು ಹೊರಗೆ ತೆಗೆಯಲಾಗಿತ್ತು. ಸೋಮವಾರ ಬಾಬುನಗರ್ ಭಾಗದಲ್ಲಿ ವ್ಯಕ್ತಿಯೊಬ್ಬರು ನಿಧನರಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಜನರು ಸ್ಮಶಾನಕ್ಕೆ ಬಂದಾಗ ಅಲ್ಲಿ ಕೆಟ್ಟವಾಸನೆ ಬಂದಿತ್ತು. ನಂತರ ಮೃತದೇಹಗಳನ್ನು ಹೊರಗೆ ತೆಗೆದು ಹಾಕಿದ್ದು ಅವರಿಗೆ ಕಂಡು ಬಂದಿತ್ತು. ವಿಷಯ ತಿಳಿದು ಊರವರು ಒಗ್ಗೂಡಿ ಪ್ರತಿಭಟಿಸಿದ್ದರು. ನಂತರ ಮರಯೂರ್ ಇನ್ಸ್‌ಪೆಕ್ಟರ್ ಕೆ.ಎ.ಶಾಜಿ ನೇತೃತ್ವದಲ್ಲಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲಾಯಿತು. ಸಾರ್ವಜನಿಕ ಸ್ಮಶಾನ ಮತ್ತು ಮಾಲಿನ್ಯ ಹಾಕುವ ಸ್ಥಳವನ್ನು ಪ್ರತ್ಯೇಕಿಸಲಿಕ್ಕಾಗಿ ಆವರಣ ಗೊಡೆ ಕಟ್ಟಲಾಗುತ್ತಿದೆ ಎಂದು ತಿಳಿಸಲಾಯಿತು. ಯೋಜನೆಯ ನಿರ್ವಹಣೆಯ ಅಧಿಕಾರಿ, ಗುತ್ತೇದಾರ, ಪಂಚಾಯತ್ ಅಧಿಕಾರಿಗಳ ವಿರುದ್ಧ ಕೇಸು ದಾಖಲಿಸಬೇಕೆಂದು ಊರವರು ಹಟ ಹಿಡಿದರು. ಮೃತದೇಹಕ್ಕೆ ಅಗೌರವ ತೋರಿಸಿದ ದೂರಿನ ಹಿನ್ನೆಲೆಯಲ್ಲಿ ಗುತ್ತೇದಾರ, ಸೈಟ್ ಸೂಪರ್‌ವೈಸರ್, ಬುಲ್ಡೋಝರ್ ಆಪರೇಟರ್ ಹೀಗೆ ಒಟ್ಟು ನಾಲ್ವರ ವಿರುದ್ಧ ಪೊಲೀಸರು ಕೇಸುದಾಖಲಿಸಿದ್ದಾರೆ. ಬುಲ್ಡೋಝರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ವರದಿ ತಿಳಿಸಿದೆ.