×
Ad

ಭವಿಷ್ಯನಿಧಿಗೆ ಶೇ.8.65 ಬಡ್ಡಿ: ಕಾರ್ಮಿಕ ಮತ್ತು ವಿತ್ತಸಚಿವಾಲಯಗಳ ಒಪ್ಪಿಗೆ

Update: 2017-02-15 14:40 IST

ಹೊಸದಿಲ್ಲಿ, ಫೆ.15: ಪ್ರಸಕ್ತ ಹಣಕಾಸು ವರ್ಷಕ್ಕೆ ನೌಕರರ ಭವಿಷ್ಯನಿಧಿ(ಇಪಿಎಫ್) ಠೇವಣಿಗಳ ಮೇಲೆ ಶೇ.8.65 ಬಡ್ಡಿದರವನ್ನು ವಿತ್ತ ಸಚಿವಾಲಯವು ಶೀಘ್ರವೇ ಸ್ಥಿರೀಕರಿಸಲಿದೆ ಮತ್ತು ಈ ವಿಷಯದಲ್ಲಿ ಉಭಯ ಸಚಿವಾಲಯಗಳ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರು ಬುಧವಾರ ತಿಳಿಸಿದರು.

 ದತ್ತಾತ್ರೇಯ ನೇತೃತ್ವದ ಕೇಂದ್ರೀಯ ಭವಿಷ್ಯನಿಧಿ ವಿಶ್ವಸ್ತ ಮಂಡಳಿಯು ಡಿ.19ರಂದು ಶೇ.8.65 ಬಡ್ಡಿದರವನ್ನು ಅಂಗೀಕರಿಸಿದ್ದು, ಇದು ಕಳೆದ ನಾಲ್ಕು ವರ್ಷಗಳಲ್ಲಿ ಕನಿಷ್ಠ ವಾಗಿದೆ.

 ಇಪಿಎಫ್ ಸಂಸ್ಥೆ ತನ್ನ ನಾಲ್ಕು ಕೋಟಿ ಚಂದಾದಾರರಿಗೆ 2015-16ನೇ ಸಾಲಿಗೆ ಶೇ.8.8 ಬಡ್ಡಿದರವನ್ನು ನಿಗದಿಗೊಳಿಸಿತ್ತು. 2013-14 ಮತ್ತು 2014-15 ನೇ ಸಾಲಿಗೆ ಅನುಕ್ರಮವಾಗಿ ಶೇ.8.75 ಮತ್ತು ಶೇ.8.5 ಬಡ್ಡಿದರ ನೀಡಲಾಗಿತ್ತು. ಪ್ರಸಕ್ತ ಹಣಕಾಸು ವರ್ಷಕ್ಕೆ ಶೇ.8.65 ಬಡ್ಡಿದರ ನೀಡಿದರೆ ಇಪಿಎಫ್ ಸಂಸ್ಥೆಯ ಬಳಿ 269 ಕೋ.ರೂ. ಮಿಗತೆ ಹಣ ಉಳಿಯಲಿದೆ.

ಪಿಪಿಎಫ್‌ನಂತಹ ಇತರ ಸಣ್ಣ ಉಳಿತಾಯ ಯೋಜನೆಗಳ ಮಟ್ಟಕ್ಕೆ ಭವಿಷ್ಯನಿಧಿ ಬಡ್ಡಿದರವನ್ನು ತಗ್ಗಿಸುವಂತೆ ವಿತ್ತ ಸಚಿವಾಲಯವು ಕಾರ್ಮಿಕ ಸಚಿವಾಲಯಕ್ಕೆ ಸೂಚಿಸುತ್ತಲೇ ಇತ್ತು. ಈ ಹಿನ್ನೆಲೆಯಲ್ಲಿ ಕಾರ್ಮಿಕ ಸಚಿವರ ಇಂದಿನ ಭರವಸೆ ಭವಿಷ್ಯನಿಧಿ ಚಂದಾದಾರರಿಗೆ ನೆಮ್ಮದಿಯನ್ನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News