ಸಿವಾನ್ ಜೈಲಿನಿಂದ ತಿಹಾರ್ ಜೈಲಿಗೆ ಶಹಾಬುದ್ದೀನ್ ಸ್ಥಳಾಂತರ: ಸುಪ್ರೀಂ ಆದೇಶ
ಹೊಸದಿಲ್ಲಿ,ಫ.15: ವಿವಾದಾತ್ಮಕ ಆರ್‌ಜೆಡಿ ನಾಯಕ ಮೊಹಮ್ಮದ್ ಶಹಾಬುದ್ದೀನ್ ವಿರುದ್ಧದ ಪ್ರಕರಣಗಳ ವಿಚಾರಣೆ ಮುಕ್ತ ಮತ್ತು ನ್ಯಾಯಯುತವಾಗಿ ನಡೆಯು ವಂತಾಗಲು ಒಂದು ವಾರದೊಳಗೆ ಅವರನ್ನು ಸಿವಾನ್ ಜೈಲಿನಿಂದ ದಿಲ್ಲಿಯ ತಿಹಾರ್ ಜೈಲಿಗೆ ಸ್ಥಳಾಂತರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ಬಿಹಾರ ಸರಕಾರಕ್ಕೆ ಆದೇಶಿಸಿದೆ.
ತಿಹಾರ್ ಜೈಲಿನಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಶಹಾಬುದ್ದೀನ್ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಯಲಿದೆ ಎಂದೂ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾಮತ್ತು ಅಮಿತಾವ್ ರಾಯ್ ಅವರನ್ನೊಳಗೊಂಡ ಪೀಠವು ತಿಳಿಸಿತು.
ಶಹಾಬುದ್ದೀನ್ ವಿರುದ್ಧದ ಪ್ರಕರಣಗಳ ವಿಚಾರಣೆ ಮುಕ್ತ ಮತ್ತು ನ್ಯಾಯಯುತವಾಗಿ ನಡೆಯುವಂತಾಗಲು ಅವರನ್ನು ಸಿವಾನ್‌ನಿಂದ ರಾಜ್ಯದ ಹೊರಗಿನ ಯಾವುದೇ ಜೈಲಿಗೆ ಸ್ಥಳಾಂತರಿಸುವಂತೆ ಅರ್ಜಿದಾರರಾದ ಚಂದ್ರಕೇಶ್ವರ ಪ್ರಸಾದ ಮತ್ತು ಆಶಾ ರಂಜನ್ ಕೋರಿದ್ದರು. ಪ್ರಸಾದ ಅವರ ಮೂವರು ಪುತ್ರರು ಎರಡು ಪ್ರತ್ಯೇಕ ಘಟನೆಗಳಲ್ಲಿ ಕೊಲ್ಲಲ್ಪಟ್ಟಿದ್ದರು. ಆಶಾ ರಂಜನ್ ಅವರ ಪತಿ, ಪತ್ರಕರ್ತ ರಾಜದೇವ ರಂಜನ್ ಅವರನ್ನು ಸಿವಾನ್‌ನಲ್ಲಿ ಹತ್ಯೆ ಮಾಡಲಾಗಿತ್ತು.
ಜಾರ್ಖಂಡ್‌ನಲ್ಲಿ ಒಂದು ಪ್ರಕರಣ ಸೇರಿದಂತೆ ಶಹಾಬುದ್ದೀನ್ ವಿರುದ್ದ 45 ಪ್ರಕರಣಗಳಿವೆ.