ಹಿಂದಿ ಹೇರಿಕೆಯ ಗುರಿ!

Update: 2017-02-17 18:28 GMT

ಮಾನ್ಯರೆ,

ಕರ್ನಾಟಕದ ರಾಜ್ಯಪಾಲ ವಜೂಭಾಯಿ ವಾಲಾ ಇವರು ಕಳೆದವಾರ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ್ದಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತ ಪಡಿಸಿದರೆ ಕೇವಲ ಬಿಜೆಪಿ ಸದಸ್ಯರು ಮಾತ್ರ ರಾಜ್ಯಪಾಲರ ಹಿಂದಿ ಭಾಷಣಕ್ಕೆ ಬೆಂಬಲ ಸೂಚಿಸಿದರು. ಅದು ರಾಷ್ಟ್ರಭಾಷೆ ಎಂದು ತಪ್ಪುಅಭಿಪ್ರಾಯವನ್ನ್ನು ಬಿಜೆಪಿ ಸದಸ್ಯರು ಮಂಡಿಸಿ ತಮ್ಮ ಹಿಂದಿ ಪ್ರೀತಿ ಹಾಗೂ ಕನ್ನಡ ದ್ರೋಹವನ್ನು ಬಹಿರಂಗ ಪಡಿಸಿದರು. 2025ರೊಳಗೆ ಕರ್ನಾಟಕವನ್ನು ಹಿಂದಿ ಭಾಷಿಕ ರಾಜ್ಯವನ್ನಾಗಿ ಪರಿವರ್ತಿಸಿ ಕನ್ನಡವನ್ನು ಎರಡನೆ ಸ್ಥಾನಕ್ಕೆ ತಳ್ಳಬೇಕೆಂದು ಕೇಂದ್ರ ಸರಕಾರವೇ ಗುರಿ ಹೊಂದಿದೆ. ಅದಕ್ಕಾಗಿಯೇ ಈಗ ಎಲ್ಲಾ ಕೇಂದ್ರ ಸರಕಾರದ ಕಚೇರಿ, ಬ್ಯಾಂಕು ಮತ್ತು ರೈಲ್ವೆಯಲ್ಲಿ ಶೇ. 80 ನೌಕರಿಗಳು ಕೇವಲ ಉತ್ತರ ಭಾರತೀಯ ಹಿಂದಿ ಭಾಷಿಕರಿಗೆ ಉದ್ದೇಶಪೂರ್ವಕವಾಗಿ ಕೊಡಲಾಗುತ್ತಿದೆ. ದಿಲ್ಲಿಯ ಅಖಿಲ ಭಾರತ ಹಿಂದಿ ಪ್ರಚಾರ ಸಭೆ ಮತ್ತು ಕೇಂದ್ರ ಸರಕಾರವು ಕರ್ನಾಟಕದಲ್ಲಿ ಹಿಂದಿ ಪಸರಿಸಬೇಕೆಂದು ಗುರಿ ಹಾಕಿಕೊಂಡಿದೆ. ಹೈದರಾಬಾದ್ ಕರ್ನಾಟಕ ಜಿಲ್ಲೆಗಳು ಅವರ ಮೊದಲ ಟಾರ್ಗೆಟ್, ಅದರಲ್ಲಿ ಬೆಂಗಳೂರು ಮಹಾನಗರವೂ ಟಾರ್ಗೆಟ್ ಆಗಿದೆ. ನಂತರ ಉಳಿದ ಉತ್ತರ ಕರ್ನಾಟಕ ಜಿಲ್ಲೆಗಳು. ಕೊನೆಗೆ ಹಳೆ ಮೈಸೂರು ಭಾಗ. ಕರಾವಳಿಯಂತೂ ತನ್ನ ಮುಂಬೈ ಮತ್ತು ಕೊಲ್ಲಿ ರಾಷ್ಟ್ರಗಳ ಸಂಪರ್ಕದಿಂದ ಹಿಂದಿಯನ್ನು ಎಂದೋ ಅಪ್ಪಿಕೊಂಡಿದೆ. ಹೀಗಾಗಿ ನಾವು ಕರ್ನಾಟಕವನ್ನು ಹಿಂದಿ ರಾಜ್ಯವನ್ನಾಗಿ ಮರುನಾಮಕರಣ ಮಾಡಲು ತಯಾರಾಗಬೇಕಾಗಿದೆ.
 

Writer - -ಅಭಿಷೇಕ್ ಪಡಿವಾಳ್, ಸುಳ್ಯ

contributor

Editor - -ಅಭಿಷೇಕ್ ಪಡಿವಾಳ್, ಸುಳ್ಯ

contributor

Similar News