ತಾಯ್ತನ ಕಳೆದುಕೊಳ್ಳುತ್ತಿರುವ ದಕ್ಷಿಣ ಕನ್ನಡ ಜಿಲ್ಲೆ
ಮಾನ್ಯರೆ,
ದಕ್ಷಿಣ ಕನ್ನಡ ಜಿಲ್ಲೆಯನ್ನು ಬುದ್ಧಿವಂತರ ಜಿಲ್ಲೆ ಎಂದು ಕರೆಯುತ್ತಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕುಸಿತವಾಗುತ್ತಿದೆ ಎನ್ನುವ ಅಂಶ ಇದೀಗ ಹೊರ ಬಿದ್ದಿದೆ. ಸದ್ಯದ ಜನನ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಸಾವಿರ ಪುರುಷರ ಅನುಪಾತಕ್ಕೆ 948 ಹೆಣ್ಣು ಮಕ್ಕಳ ಸಂಖ್ಯೆ ಇದೆ. ಪ್ರಸವಪೂರ್ವ ಲಿಂಗಪತ್ತೆ ಕಾರ್ಯಾಚರಣೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಕ್ರಿಯವಾಗಿದೆ ಎನ್ನುವ ಅನುಮಾನ ಇದರಿಂದ ಕಾಡುತ್ತದೆ. ಇದು ನಿಜಕ್ಕೂ ಆತಂಕಕಾರಿ. ಇದರ ವಿರುದ್ಧ ನಿಗಾ ಇಡಬೇಕಾದ ಅಗತ್ಯವಿದೆ ಎನ್ನುವುದನ್ನು ಈ ವರದಿ ಎಚ್ಚರಿಸುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಹೆಣ್ಣು ಮಕ್ಕಳು ಸಾಕ್ಷರತೆಯಲ್ಲಿ ಸದಾ ಮುಂದು. ಆದರೆ ಅಕ್ಷರವಂತ ಮಹಿಳೆಯರೂ ಹೆಣ್ಣು ಮಕ್ಕಳನ್ನು ಹೆರಲು ಹಿಂದೆ ಮುಂದೆ ನೋಡುವುದನ್ನು ನಾವು ಕಾಣುತ್ತಿದ್ದೇವೆ. ಒಂದು ಅಥವಾ ಎರಡು ಮಕ್ಕಳನ್ನು ಹೊಂದಲು ಇಷ್ಟ ಪಡುವ ಕುಟುಂಬ ಗಂಡು ಮಕ್ಕಳನ್ನೇ ಮೊದಲ ಆಯ್ಕೆ ಮಾಡಿಕೊಳ್ಳುತ್ತಿರುವುದು ಈ ನಾಡಿನ ದುರ್ದೈವ. ಒಂದೆಡೆ ಕೋಮುವಾದ, ಇನ್ನೊಂದೆಡೆ ಭೂಮಾಫಿಯಾಗಳಿಗೆ ಕುಖ್ಯಾತವಾಗುತ್ತಿರುವ ಮಂಗಳೂರು ಇದೀಗ ಹೆಣ್ಣು ಭ್ರೂಣವನ್ನು ನಾಶ ಮಾಡುವುದರಲ್ಲೂ ಮುಂಚೂಣಿ ಸ್ಥಾನ ಪಡೆಯುತ್ತಿರುವುದು ಹೇಗೆ ದಕ್ಷಿಣ ಕನ್ನಡ ಜಿಲ್ಲೆ ತಾಯಿ ಮನಸ್ಸನ್ನು ಕಳೆದುಕೊಳ್ಳುತ್ತಿದೆ ಎನ್ನುವುದಕ್ಕೆ ಉದಾಹರಣೆಯಾಗಿದೆ. -ರೋಹಿಣಿ ಅಡ್ಯಾರು, ಮಂಗಳೂರು