×
Ad

ವಿಶ್ವಕಪ್ ವಿಜೇತ ಅಂಧ ಕ್ರಿಕೆಟ್ ಆಟಗಾರರ ಭೇಟಿಯಾದ ಪ್ರಧಾನಿ ಮೋದಿ

Update: 2017-02-28 19:36 IST

ಹೊಸದಿಲ್ಲಿ,ಫೆ.28: ಇತ್ತೀಚೆಗೆ ವಿಶ್ವಕಪ್ ಗೆದ್ದ ಟಿ20 ಅಂಧರ ಕ್ರಿಕೆಟ್ ತಂಡದ ಆಟಗಾರರನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭೇಟಿಯಾಗಿದ್ದು, ಅವರ ಸಾಧನೆಯು ಕೋಟ್ಯಂತರ ಜನರಿಗೆ ಸ್ಫೂರ್ತಿಯಾಗಿದೆಯೆಂದು ಶ್ಲಾಘಿಸಿದ್ದಾರೆ.

‘‘ಟಿ-20 ಅಂಧರ ವಿಶ್ವಕಪ್ ಕ್ರಿಕೆಟ್ ಪಂದ್ಯದ ವಿಜೇತರಾದ ನಮ್ಮ ಚಾಂಪಿಯನ್ ಕ್ರಿಕೆಟಿಗರೊಂದಿಗಿನ ಒಡನಾಟ ಸ್ಮರಣೀಯವಾಗಿತ್ತು. ಅವರು ತಮ್ಮ ಶಾಲೆಗಳ ಹಿರಿಯ ಆಟಗಾರರಿಂದ ಪ್ರೇರಿತರಾಗಿ ಈ ಆಟವನ್ನು ಆಯ್ದುಕೊಂಡಿದ್ದು. ಇಂದು ಅವರೆಲ್ಲರೂ ನಮಗೆ ಸ್ಫೂರ್ತಿಯಾಗಿದ್ದಾರೆ’’ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

   ಅಂಧ ಕ್ರಿಕೆಟ್ ತಂಡದ ಸದಸ್ಯರ ಜೊತೆ ಕುಶಲೋಪರಿ ನಡೆಸಿದ ಸಂದರ್ಭದಲ್ಲಿ ಅವರ ಸಾಧನೆಗಳ ಬಗ್ಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ಇನ್ನಷ್ಟು ಉತ್ತಮ ಸಾಧನೆಯನ್ನು ತೋರುವಂತೆ ಅವರನ್ನು ಉತ್ತೇಜಿಸಿದರು ಎಂದು ಪ್ರಧಾನಿ ಕಾರ್ಯಾಲಯದ ಹೇಳಿಕೆ ತಿಳಿಸಿದೆ.

  ತಂಡದ ಸದಸ್ಯರು ಪ್ರಧಾನಿಗೆ ತಮ್ಮ ಹಸ್ತಾಕ್ಷರಗಳಿರುವ ಬ್ಯಾಟ್, ಚೆಂಡು ಹಾಗೂ ಜೆರ್ಸಿಯನ್ನು ಅರ್ಪಿಸಿದರು. ಮೋದಿ ಕೂಡಾ ತಂಡಕ್ಕೆ ತನ್ನ ಹಸ್ತಾಕ್ಷರದ ಬ್ಯಾಟ್ ಹಾಗೂ ಬಾಲ್ ಅನ್ನು ಅರ್ಪಿಸಿದರು.

 ಅಂಧಆಟಗಾರರನ್ನು ಒಬ್ಬೊಬ್ಪರಾಗಿ ಅವರ ಭಾವಚಿತ್ರಗಳೊಂದಿಗೆ ಪ್ರಧಾನಿ ಟ್ವಿಟರ್‌ನಲ್ಲಿ ಪರಿಚಯಿಸಿದ್ದಾರೆ.

    ‘‘ಅಜಯ್‌ಕುಮಾರ್ ರೆಡ್ಡಿ ಶಾಲಾ ದಿನಗಳಲ್ಲಿಯೇ ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿದ್ದರು. ಅವರು 50ಕ್ಕೂ ಅಧಿಕ ಸರಣಿ ಶ್ರೇಷ್ಠ ಹಾಗೂ ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗಳಿಸಿದ್ದಾರೆ ಎಂದು ಪ್ರಧಾನಿ ಟ್ವೀಟ್ ಒಂದರಲ್ಲಿ ಹೇಳಿದ್ದಾರೆ. ‘‘ತನ್ನ ಶಾಲಾ ಹಿರಿಯ ಆಟಗಾರರಿಂದ ಸ್ಫೂರ್ತಿಗೊಂಡು ಫರ್‌ಹಾನ್ ಕ್ರಿಕೆಟ್‌ನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಧ್ಯೇಯಶೀಲ ಆಟಗಾರನಾದ ಆತ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ’’ ಎಂದು ಪ್ರಧಾನಿ, ಅಂಧರ ತಂಡದ ಇನ್ನೋರ್ವ ಆಟಗಾರನನ್ನು ಪ್ರಶಂಸಿಸಿದ್ದಾರೆ. ತನ್ನ ನಾಲ್ಕನೆ ವಯಸ್ಸಿನಲ್ಲಿ ಅಪಘಾತದಲ್ಲಿ ದೃಷ್ಟಿ ಕಳೆದುಕೊಂಡರೂ, ಕ್ರಿಕೆಟ್ ಆಟದಲ್ಲಿ ಅಭೂತಪೂರ್ವ ಸಾಧನೆ ಮಾಡಿ, ಹಲವು ಪ್ರಶಸ್ತಿಗಳನ್ನು ಗೆದ್ದ ಸುನೀಲ್‌ರನ್ನೂ ಪ್ರಧಾನಿ ಹೊಗಳಿದ್ದಾರೆ.

ಹಾಗೆಯೇ ಪ್ರಕಾಶ್ ಜಯರಾಮಯ್ಯ, ದುನ್ನಾ ವೆಂಕಟೇಶ್ವರ, ಫೈಸಲ್, ಸುನೀಲ್ ಸೇರಿದಂತೆ ತಂಡದ ಇತರ ಆಟಗಾರರ ಸಾಧನೆಗಳನ್ನು ಮೋದಿ ಟ್ವಿಟರ್‌ನಲ್ಲಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News