×
Ad

‘ನನ್ನ ಧೈರ್ಯವನ್ನು ಪ್ರದರ್ಶಿಸಿದ್ದೇನೆ’ ಎಬಿವಿಪಿ ವಿರೋಧಿ ಅಭಿಯಾನದಿಂದ ಹಿಂದೆ ಸರಿದ ಹುತಾತ್ಮ ಯೋಧನ ಪುತ್ರಿ

Update: 2017-02-28 20:53 IST

ಹೊಸದಿಲ್ಲಿ,ಫೆ.28: ಎಬಿವಿಪಿ ಕಾರ್ಯಕರ್ತರೆನ್ನಲಾದವರಿಂದ ಬೆದರಿಕೆಗೊಳಗಾಗಿದ್ದ ದಿಲ್ಲಿ ವಿದ್ಯಾರ್ಥಿನಿ ಗುರ್ಮೆಹರ್ ಕೌರ್, ಈ ಅರೆಸ್ಸೆಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತಾನು ಆರಂಭಿಸಿದ್ದ ಅಭಿಯಾನವನ್ನು ಹಿಂತೆಗೆದುಕೊಂಡಿದ್ದಾರೆ. ಗುರ್ಮೆಹರ್ ವಿರುದ್ಧ ಕೆಲವು ಬಿಜೆಪಿ ಮುಖಂಡರಿಂದಲೂ ಕಟುವಾದ ಟೀಕೆಗಳು ವ್ಯಕ್ತವಾಗಿದ್ದವು.ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಗುಂಪೊಂದು ಇಂದು ಎಬಿವಿಪಿ ವಿರುದ್ಧ ನಡೆಸಿದ ಪಾದಯಾತ್ರೆಯಲ್ಲೂ ಆಕೆ ಪಾಲ್ಗೊಳ್ಳಲಿಲ್ಲವಾದರೂ, ಅದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

‘‘ ಈ ಅಭಿಯಾನವು ವಿದ್ಯಾರ್ಥಿಗಳ ಕುರಿತಾಗಿದೆಯೇ ಹೊರತು ನನಗಾಗಿಯಲ್ಲ. ದೊಡ್ಡ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಿ. ಶುಭವಾಗಲಿ... ನನ್ನ ಧೈರ್ಯ ಹಾಗೂ ಶೌರ್ಯವನ್ನು ಯಾರಾದರೂ ಪ್ರಶ್ನಿಸುವುದಿದ್ದರೆ, ಅವರಿಗೆ ನಾನು ಹೇಳುವುದೇನೆಂದರೆ ನಾನದನ್ನು ಅಗತ್ಯಕ್ಕಿಂತಲೂ ಹೆಚ್ಚಾಗಿ ಪ್ರದರ್ಶಿಸಿದ್ದೇನೆ ’’ ಎಂದು ಆಕೆ ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ.

ಗುರ್ಮೆಹರ್ ಕೌರ್‌ಗೆ ಆಕೆ ಕಲಿಯುತ್ತಿಇರುವ ಲೇಡಿಶ್ರೀರಾಮ್ ಕಾಲೇಜ್‌ನ ಆಡಳಿತ ಮಂಡಳಿಯಿಂದಲೂ ಬೆಂಬಲ ವ್ಯಕ್ತವಾಗಿದೆ. ಆಕೆಯ ನಡೆಯು ದಿಟ್ಟ ಹಾಗೂ ವಿವೇಚನಾಯುತವಾಗಿತ್ತೆಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

‘‘ ವಿದ್ಯಾರ್ಥಿಗಳನ್ನು ನಿರ್ಭಿತರಾಗಿ ಬೆಳೆಸುವುದು ಶಿಕ್ಷಣಸಂಸ್ಥೆಗಳ ಕರ್ತವ್ಯವಾಗಿದ್ದು, ನಾವು ನಮ್ಮ ವಿದ್ಯಾರ್ಥಿನಿಯನ್ನು ಬೆಂಬಲಿಸುತ್ತೇವೆ. ಗುರ್ಮೆಹರ್‌ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕಿದೆ ಹಾಗೂ ಆಕೆ ಸಂವೇದನಾಶೀಲತೆಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಯುವ ಪೌರಳಾಗಿ ಆಕೆ ತನ್ನ ಕರ್ತವ್ಯವನ್ನು ಈಡೇರಿಸಿದ್ದಾಳೆ’’ ಎಂದು ಶ್ರೀರಾಮ್ ಕಾಲೇಜ್ ಹೇಳಿಕೆಯಲ್ಲಿ ತಿಳಿಸಿದೆ.

ದಿಲ್ಲಿಯ ರಮಾಜಾಸ್ ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆದ ಬಳಿಕ 20ರ ಹರೆಯದ ಗುರ್ಮೆಹರ್‌ಕೌರ್ ‘ನಾನು ಎಬಿವಿಪಿಗೆ ಹೆದರುವುದಿಲ್ಲ’ ಎಂಬ ಅಭಿಯಾನವನ್ನು ಆರಂಭಿಸಿದ್ದರು. ಆಕೆಯ ಅಭಿಯಾನವು ಭಾರೀ ಜನಪ್ರಿಯಗೊಂಡಿತ್ತು ಹಾಗೂ ವಿವಿಧ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳಿಂದ ಬೆಂಬಲ ವ್ಯಕ್ತವಾಗಿತ್ತು. ತದನಂತರ ಕೌರ್‌ಗೆ ಎಬಿವಿಪಿ ಕಾರ್ಯಕರ್ತರೆನ್ನಲಾದವರಿಂದ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಾಚಾರದ ಬೆದರಿಕೆಗಳು ಬಂದ ಹಿನ್ನೆಲೆಯಲ್ಲಿ ಆಕೆ ಸೋಮವಾರ ದಿಲ್ಲಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News