×
Ad

ಎಬಿವಿಪಿ ವಿರುದ್ಧ ರಣಕಹಳೆ : ದಿಲ್ಲಿ ವಿವಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರಿಂದ ಬೃಹತ್ ಪ್ರತಿಭಟನಾ ರ‍್ಯಾಲಿ

Update: 2017-02-28 21:19 IST

ಹೊಸದಿಲ್ಲಿ, ಫೆ.28: ‘ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುತ್ತಿರುವ ಎಬಿವಿಪಿಯ ಆಕ್ರಮಣದಿಂದ ವಿಶ್ವವಿದ್ಯಾನಿಲಯಗಳನ್ನು ರಕ್ಷಿಸಿ’ ಎಂಬ ಕರೆಯೊಂದಿಗೆ ಇಂದು ದಿಲ್ಲಿ ವಿವಿಯ ಆವರಣದಲ್ಲಿ ನಡೆದ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ದಿಲ್ಲಿ ವಿವಿ, ಜವಾಹರಲಾಲ್ ನೆಹರೂ ವಿವಿ ಹಾಗೂ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ ಯ ನೂರಾರು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಪಾಲ್ಗೊಂಡಿದ್ದರು. ಪಾದಯಾತ್ರೆಯ ವೇಳೆ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.್ತ.

  ಇತ್ತೀಚಿನ ದಿನಗಳಲ್ಲೇ ಅತಿ ದೊಡ್ಜ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡ ಪ್ರತಿಭಟನಾ ರ್ಯಾಲಿ ಇದೆನ್ನಲಾಗಿದೆ. ರಾಜಧಾನಿಯ ಇತರ ಹಲವಾರು ಕಾಲೇಜುಗಳ ವಿದ್ಯಾರ್ಥಿಗಳು,ಶಿಕ್ಷಣತಜ್ಞರು ಹಾಗೂ ವಿದ್ವಾಂಸರು ಕೂಡಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಕಳೆದ ವಾರ ರಮಜಸ್ ಕಾಲೇಜ್‌ನಲ್ಲಿ ಎಬಿವಿಪಿ ಹಾಗೂ ಎಎಸ್‌ಎ ವಿದ್ಯಾರ್ಥಿ ಸಂಘಟನೆಗಳ ನಡುವೆ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಇಂದು ನಡೆದ ರ್ಯಾಲಿಗೆ ಕಟ್ಟುನಿಟ್ಟಿನ ಭದ್ರತೆಯನ್ನು ಏರ್ಪಡಿಸಲಾಗಿತ್ತು.

ಸಿಪಿಐನ ರಾಜಾ ಹಾಗೂ ಸಿಪಿಎಂನ ಸೀತಾರಾಮ ಯಚೂರಿ, ಕೆ.ಸಿ.ತ್ಯಾಗಿ (ಜೆಡಿಯು). ಯೋಗೇಂದ್ರ ಯಾದವ್ (ಸ್ವರಾಜ್ ಇಂಡಿಯಾ) ಮತ್ತಿತರ ರಾಜಕೀಯ ನಾಯಕರು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

 ‘‘ ಇದು ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವ ಸಾಮೂಹಿಕ ಹೋರಾಟ ಇದಾಗಿದೆ. ರಾಷ್ಟ್ರೀಯವಾದವೆಂದರೆ, ಭಾರತೀಯನಾಗಿರುವುದೇ ಹೊರತು ಹಿಂದುವಾಗಿರುವುದು ಎಂದಲ್ಲವೆಂದು ಅವರು ಪ್ರತಿಪಾದಿಸಿದರು. ‘‘ನಾವು ರಾಷ್ಟ್ರೀಯತಾವಾದವನ್ನು ಭಗತ್‌ಸಿಂಗ್ ಅವರಿಂದ ಕಲಿತಿದ್ದೇವೆಯೇ ಹೊರತು ತಮ್ಮ ಪ್ರಧಾನ ಕಾರ್ಯಾಲಯಗಳಲ್ಲಿ ಎಂದಿಗೂ ರಾಷ್ಟ್ರಧ್ವಜವನ್ನು ಹಾರಿಸದ ಪೂರ್ವಜರನ್ನು ಹೊಂದಿರುವವರಿಂದಲ್ಲವೆಂದು ಯಾದವ್, ಎಬಿವಿಪಿಯ ಪೋಷಕ ಸಂಘಟನೆಯಾದ ಆರೆಸ್ಸೆಸ್‌ನ್ನು ಪರೋಕ್ಷವಾಗಿ ಟೀಕಿಸಿದರು.

 ದಿಲ್ಲಿ ವಿವಿಯ ರಮಜಸ್ ಕಾಲೇಜ್‌ನಲ್ಲಿ ನಡೆದ ಹಿಂಸಾಚಾರದ ಘಟನೆಯನ್ನು ಸಂಸತ್‌ನಲ್ಲಿ ಪ್ರಸ್ತಾಪಿಸುವುದಾಗಿ ಅವರು ತಿಳಿಸಿದರು.

ದಿಲ್ಲಿಯ ರಮಜಸ್ ಕಾಲೇಜ್‌ನಲ್ಲಿ ಜೆಎನ್‌ಯು ವಿದ್ಯಾರ್ಥಿಗಳಾದ ಉಮರ್ ಖಾಲಿದ್ ಹಾಗೂ ಶೆಹಲಾ ರಶೀದ್ ಅವರನ್ನು ಉಪನ್ಯಾಸಕ್ಕೆ ಆಹ್ವಾನಿಸಿರುವುದನ್ನು ವಿರೋಧಿಸಿ ಎಬಿವಿಪಿ ಬೆಂಬಲಿಗರು ಹಿಂಸಾಚಾರಕ್ಕಿಳಿದಿದ್ದರು. ಈ ಸಂದರ್ಭದಲಿ ಹಲವಾರು ಕಾಲೇಜ್‌ನ ಹಲವಾರು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರನ್ನು ಎಬಿವಿಪಿ ಕಾರ್ಯಕರ್ತರೆನ್ನಲಾದವರು ಥಳಿಸಿದ್ದರು. ಎಬಿವಿ ಹಾಗೂ ಎಎಸ್‌ಎ ವಿದ್ಯಾರ್ಥಿ ಸಂಘಟನೆಗಳ ನಡುವೆ ಘರ್ಷಣೆಗಳು ನಡೆದಿದ್ದವು. ಘಟನೆಯ ಹಿನ್ನೆಲೆಯಲ್ಲಿ ರಮಜಸ್ ಕಾಲೇಜಿನ ಆಡಳಿತವು, ಖಾಲಿದ್ ಹಾಗೂ ಶೆಹಲಾ ರಶೀದ್ ಅವರ ಉಪನ್ಯಾಸ ಕಾರ್ಯಕ್ರಮವನ್ನು ರದ್ದುಪಡಿಸಿತ್ತು.

  ‘‘ ದಿಲ್ಲಿ ವಿವಿ ಸೇರಿದಂತೆ ದೇಶಾದ್ಯಂತ ವಿವಿ ಆವರಣಗಳಲ್ಲಿ ಧ್ವನಿಗಳನ್ನು ಹತ್ತಿಕ್ಕುತ್ತಿರುವ ವಿರುದ್ಧದ ಪ್ರತಿಭಟನೆ ಇದಾಗಿದೆ. ಚರ್ಚೆ ನಡೆಸಲು ಹಾಗೂ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಇರುವ ಅವಕಾಶವನ್ನು ನಾವು ಮರಳಿ ಪಡೆಯಲು ಬಯಸುತ್ತಿದ್ದೇವೆ’’ ಇಂದು ನಡೆದ ರ್ಯಾಲಿಯ ನೇತೃತ್ವ ವಹಿಸಿದ್ದ ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಎಸ್‌ಎ) ನಾಯಕಿ ಕನ್ವಲ್‌ಪ್ರೀತ್ ಕೌರ್ ತಿಳಿಸಿದ್ದಾರೆ.

  ಈ ಮಧ್ಯೆ ಕಾರ್ಗಿಲ್ ಹುತಾತ್ಮ ಯೋಧ ಮನ್‌ದೀಪ್‌ಸಿಂಗ್ ಅವರ ಪುತ್ರಿ ಗುರ್ಮೆಹರ್ ಕೌರ್ ಎಬಿವಿಪಿ ವಿರುದ್ಧ ಆರಂಭಿಸಿದ್ದ ಆನ್‌ಲೈನ್ ಅಭಿಯಾನವ್ನ ಹಿಂತೆಗೆದುಕೊಂಡಿದ್ದರಾದರೂ, ಆರೆಸ್ಸೆಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆಯ ವಿರುದ್ಧ ಇಂದು ನಡೆದ ಪಾದಯಾತ್ರೆಗೆ ಬೆಂಬಲ ನೀಡಿದ್ದರು.

 ಗಲಭೆ ಆರೋಪಿಗಳ ಬಂಧನಕ್ಕೆ ಕೇಜ್ರಿವಾಲ್ ಆಗ್ರಹ

   ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಲೆಫ್ಟಿನೆಂಟ್ ಗವರ್ನರ್ ರಮಜಸ್ ಕಾಲೇಜ್‌ನಲ್ಲಿ ಹಿಂಸಾಚಾರಕ್ಕೆ ಕಾರಣವಾದ ಎಬಿವಿಪಿ ಕಾರ್ಯಕರ್ತರನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ರಮಜಸ್ ಕಾಲೇಜ್‌ನಲ್ಲಿ ಹಿಂಸಾಚಾರಕ್ಕೆ ಕಾರಣರಾದವರು, ಭಾರತ ವಿರೋಧಿ ಘೋಷಣೆಗಳನ್ನು ಕೂಗಿದವರು ಹಾಗೂ ವಿದ್ಯಾರ್ಥಿನಿ ಗುರ್ಮೆಹರ್ ಕೌರ್‌ಗೆ ಬೆದರಿಕೆ ಹಾಕಿದವರನ್ನು ಕೂಡಲೇ ಬಂಧಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

 ಈ ಮಧ್ಯೆ ಎಬಿವಿಪಿ ವಿರುದ್ಧ ಆನ್‌ಲೈನ್ ಅಭಿಯಾನ ಆರಂಭಿಸಿದ್ದ ವಿದ್ಯಾರ್ಥಿನಿ ಗುರ್ಮೆಹರ್‌ಕೌರ್, ದಿಲ್ಲಿ ಮಹಿಳಾ ಆಯೋಗಕ್ಕೆ ನೀಡಿದ ದೂರಿನ ಹಿನ್ನೆಲೆಯಲ್ಲಿ, ಆಕೆಗೆ ಅತ್ಯಾಚಾರದ ಬೆದರಿಕೆ ಹಾಕಿದ್ದರೆನ್ನಲಾದ ಅಜ್ಞಾತ ವ್ಯಕ್ತಿಗಳ ವಿರುದ್ಧ ದಿಲ್ಲಿ ಪೊಲೀಸರು ಲೈಂಗಿಕ ಕಿರುಕುಳ ಹಾಗೂ ಕ್ರಿಮಿನಲ್ ಬೆದರಿಕೆಯ ಪ್ರಕರಣವನ್ನು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News