ಆರ್‌ಬಿಐ ಗವರ್ನರ್‌ಗೆ ಬೆದರಿಕೆ ಮೇಲ್
ಮುಂಬೈ,ಮಾ.5: ಹುದ್ದೆಯನ್ನು ತೊರೆಯುವಂತೆ ಒತ್ತಾಯಿಸಿ ಬೆದರಿಕೆ ಮೇಲ್‌ವೊಂದು ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರಿಗೆ ಬಂದಿದ್ದು, ಇದನ್ನು ರವಾನಿಸಿದ್ದ ಆರೋಪಿಯನ್ನು ನಾಗ್ಪುರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಇಂದಿಲ್ಲಿ ತಿಳಿಸಿದರು.
ಫೆ.23ರಂದು ಈ ಇ-ಮೇಲ್ ಬಂದಿದ್ದು, ಹುದ್ದೆಯನ್ನು ತೊರೆಯದಿದ್ದರೆ ಪಟೇಲ್ ಮತ್ತು ಅವರ ಕುಟುಂಬ ಸದಸ್ಯರು ಅಪಾಯಕ್ಕೆ ಗುರಿಯಾಗುತ್ತಾರೆ ಎಂದು ಬೆದರಿಕೆಯೊಡ್ಡಲಾಗಿತ್ತು. ಈ ಬಗ್ಗೆ ಮುಂಬೈ ಸೈಬರ್ ಪೊಲೀಸರಲ್ಲಿ ದೂರು ದಾಖಲಾಗಿತ್ತು.
ನಾಗ್ಪುರದ ಸೈಬರ್ ಕೆಫೆಯೊಂದರಿಂದ ಮೇಲ್ ರವಾನೆಯಾಗಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದ್ದು, ಅಲ್ಲಿಗೆ ತೆರಳಿದ ಪೊಲೀಸ್ ತಂಡವು ಆರೋಪಿ ವೈಭವ್ ಬದ್ದಲ್ವಾರ್(37)ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಸೈಬರ್ ಸೆಲ್ ಡಿಸಿಪಿ ಅಖಿಲೇಶ ಸಿಂಗ್ ತಿಳಿಸಿದರು.
ಆರೋಪಿಯು ವಿದೇಶದಲ್ಲಿ ತನ್ನ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಸದ್ಯ ನಿರುದ್ಯೋಗಿಯಾಗಿದ್ದಾನೆ. ಹತಾಶೆಯಿಂದ ಆತ ಈ ಕೃತ್ಯವನ್ನು ಮಾಡಿರಬೇಕೆಂದು ಶಂಕಿಸಲಾಗಿದ್ದು, ತನಿಖೆಯು ಪ್ರಗತಿಯಲ್ಲಿದೆ ಎಂದರು.