ಕೇಂದ್ರದಿಂದ ಶೇ.2-4 ತುಟ್ಟಿಭತ್ಯೆ ಏರಿಕೆ ಸಾಧ್ಯತೆ
ಹೊಸದಿಲ್ಲಿ,ಮಾ.5: ಕೇಂದ್ರ ಸರಕಾರವು ತನ್ನ ನೌಕರರ ತುಟ್ಟಿಭತ್ಯೆಯನ್ನು ಶೇ.2ರಿಂದ ಶೇ.4ರಷ್ಟು ಹೆಚ್ಚಿಸುವ ಸಾಧ್ಯತೆಯಿದ್ದು, ಈ ತಿಂಗಳ ಕೊನೆಯ ವಾರದಲ್ಲಿ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆಯಿದೆ. ಈ ವರ್ಷದ ಜ.1ರಿಂದಲೇ ಈ ಏರಿಕೆ ಅನ್ವಯಗೊಳ್ಳಲಿದ್ದು, ಸುಮಾರು 50 ಲಕ್ಷ ಕೇಂದ್ರ ಸರಕಾರಿ ನೌಕರು ಮತ್ತು 58 ಲಕ್ಷ ಪಿಂಚಣಿದಾರರು ಲಾಭ ಪಡೆಯಲಿದ್ದಾರೆ.
ಆದರೆ ಉದ್ದೇಶಿತ ಏರಿಕೆಯು ಕಾರ್ಮಿಕ ಯೂನಿಯನ್‌ಗಳಿಗೆ ತೃಪ್ತಿತಂದಿಲ್ಲ. ಉದ್ದೇಶಿತ ಏರಿಕೆ ಪ್ರಮಾಣವು ಬೆಲೆಏರಿಕೆಗೆ ಅನುಗುಣವಾಗಿಲ್ಲ ಎಂದು ಅವು ತಕರಾರು ಎತ್ತಿವೆ.
ಕೇಂದ್ರ ಸರಕಾರವು ಒಪ್ಪಿಕೊಂಡಿರುವ ಸೂತ್ರದಂತೆ ತುಟ್ಟಿಭತ್ಯೆ ಏರಿಕೆಯು ಶೇ.2ರಷ್ಟಾಗುತ್ತದೆ. ಕೈಗಾರಿಕಾ ಕಾರ್ಮಿಕರಿಗಾಗಿರುವ ಗ್ರಾಹಕ ಬೆಲೆ ಸೂಚ್ಯಂಕವನ್ನು ಅವಲಂಬಿಸಿ ತುಟ್ಟಿಭತ್ಯೆಯನ್ನು ಹೆಚ್ಚಿಸಲಾಗುತ್ತಿದ್ದು, ಈ ಸೂಚ್ಯಂಕವು ವಾಸ್ತವತೆಗಿಂಂತ ದೂರವಾಗಿದೆ ಎಂದು ಕೇಂದ್ರ ಸರಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಕೆಕೆಎನ್ ಕುಟ್ಟಿ ಸುದ್ದಿಸಂಸ್ಥೆಗೆ ತಿಳಿಸಿದರು.
ಕಳೆದ ವರ್ಷದ ಆರಂಭದಲ್ಲಿ ಸರಕಾರವು ತುಟ್ಟಿಭತ್ಯೆಯನ್ನು ಮೂಲವೇತನದ ಶೇ.6ರಷ್ಟು ಹೆಚ್ಚಿಸಿತ್ತು. ಬಳಿಕ ಏಳನೇ ವೇತನ ಆಯೋಗದ ಶಿಫಾರಸುಗಳ ಜಾರಿಯ ಹಿನ್ನೆಲೆಯಲ್ಲಿ ತುಟ್ಟಿಭತ್ಯೆಯನ್ನು ಮೂಲವೇತನದೊಂದಿಗೆ ವಿಲೀನಗೊಳಿಸಲಾಗಿತ್ತು.
ಪ್ರಸಕ್ತ ಕೇಂದ್ರ ಸರಕಾರಿ ನೌಕರರು ಮತ್ತು ಪಿಂಚಣಿದಾರರು 2016,ಜು.1ರಂದು ಜಾರಿಗೊಂಡಿರುವ ಶೇ.2 ತುಟ್ಟಿಭತ್ಯೆಗೆ ಹಕ್ಕುದಾರರಾಗಿದ್ದಾರೆ.