ಪ್ರಜಾಪತಿ ಇನ್ನೂ ಸಂಪುಟದಲ್ಲಿದ್ದಾರೆಯೇ? : ಅಖಿಲೇಶ್‌ಗೆ ಉ.ಪ್ರ.ರಾಜ್ಯಪಾಲರ ಪ್ರಶ್ನೆ
Update: 2017-03-05 23:00 IST
ಲಕ್ನೋ,ಮಾ.5: ಕಳಂಕಿತ ಸಚಿವ ಗಾಯತ್ರಿ ಪ್ರಜಾಪತಿಯನ್ನು ಸಂಪುಟದಲ್ಲಿ ಉಳಿಸಿಕೊಂಡಿರುವುದನ್ನು ನೀವು ಸಮರ್ಥಿಸಿಕೊಳ್ಳುತ್ತೀರಾ ಎಂಬ ಬಗ್ಗೆ ಸ್ಪಷ್ಟನೆಯನ್ನು ಕೇಳಿ ಉತ್ತರ ಪ್ರದೇಶದ ರಾಜ್ಯಪಾಲ ರಾಮ ನಾಯ್ಕೆ ಅವರು ಮುಖ್ಯಮಂತ್ರಿ ಅಖಿಲೇಶ್ ಯಾದವ ಅವರಿಗೆ ರವಿವಾರ ಪತ್ರ ಬರೆದಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ಪ್ರಜಾಪತಿ ವಿರುದ್ಧ ಬೇಜಾಮೀನು ಬಂಧನ ವಾರಂಟ್ ಹೊರಬಿದ್ದಿದೆ. ಸಂಪುಟದಲ್ಲಿ ಅವರ ಮುಂದುವರಿಕೆಯು ಸಾಂವಿಧಾನಿಕ ನೈತಿಕತೆ ಮತ್ತು ಘನತೆಯ ಬಗ್ಗೆ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ ಎಂದು ಪತ್ರದಲ್ಲಿ ಹೇಳಿರುವ ರಾಜ್ಯಪಾಲರು, ಪ್ರಜಾಪತಿ ದೇಶದಿಂದ ಪರಾರಿಯಾಗಬಹುದೆಂಬ ಭೀತಿಯಿಂದ ಅವರ ವಿರುದ್ಧ ಲುಕ್-ಔಟ ನೋಟಿಸ್ ಹೊರಡಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಅವರ ಪಾಸ್‌ಪೋರ್ಟ್‌ನ್ನು ಸಹ ಮುಟ್ಟುಗೋಲು ಹಾಕಿಕೊಳ್ಳ ಲಾಗಿದೆ. ಪ್ರಜಾಪತಿ ಸಂಪುಟ ದರ್ಜೆ ಸಚಿವರಾಗಿರುವುದರಿಂದ ಇದೊಂದು ಗಂಭೀರ ಸ್ವರೂಪದ ವಿಷಯವಾಗಿದೆ ಎಂದು ತಿಳಿಸಿದ್ದಾರೆ.