ಬರದಿಂದ ಕಂಗೆಟ್ಟ ಮಹಾರಾಷ್ಟ್ರದ ಕಣ್ಣಿಗೆ ಚುಚ್ಚಿದ ಬಿಜೆಪಿ ಅಧ್ಯಕ್ಷನ ಮಗನ ವೈಭವದ ಮದುವೆ
ಮುಂಬೈ , ಮಾ.6: ವಿವಾಹ ಸಮಾರಂಭಗಳಲ್ಲಿ ದುಂದುವೆಚ್ಚಗಳಿಗೆ ಕಡಿವಾಣ ಹಾಕಬೇಕೆಂಬ ಬೇಡಿಕೆ ಹೆಚ್ಚುತ್ತಿರುವಂತೆಯೇ ಮಹಾರಾಷ್ಟ್ರದ ರಾಜ್ಯ ಬಿಜೆಪಿ ಅಧ್ಯಕ್ಷ ರಾವ್‌ಸಾಹೇಬ್ ದನ್ವೆ ಅವರ ಪುತ್ರ ಹಾಗೂ ಬರಪೀಡಿತ ಮರಾಠವಾಡ ಪ್ರಾಂತ್ಯದ ಭೋಕರ್ದಾನ್ ಕ್ಷೇತ್ರದ ಶಾಸಕ ಸಂತೋಷ್ ರಾವ್ ಸಾಹೇಬ್ ಪಾಟೀಲ್ ದನ್ವೆ ಅವರ ಅತ್ಯಂತ ವೈಭವೋಪೇತ ವಿವಾಹ ಸಮಾರಂಭ ಹಲವರ ಕಣ್ಣು ಕೆಂಪಾಗಿಸಿದೆಯಲ್ಲದೆ ಬರದಿಂದ ಕಂಗೆಟ್ಟ ರಾಜ್ಯದ ಕಣ್ಣು ಚುಚ್ಚಿದಂತಾಗಿದೆ.
ವಿವಾಹದ ವೀಡಿಯೋ ಆಮಂತ್ರಣ ಪತ್ರಿಕೆಯನ್ನು ಬಂಧು ಬಳಗ, ಸ್ನೇಹಿತರು ಹಾಗೂ ಹಿತೈಷಿಗಳಿಗೆ ವಿತರಿಸಲಾಗಿದ್ದರೆ ವಿವಾಹವು ಔರಂಗಾಬಾದ್ ನಗರದ ಜಬಿಂದಾ ಎಸ್ಟೇಟಿನಲ್ಲಿ ಅಳವಡಿಸಲಾದ ಸರ್ವಾಲಂಕೃತ ಮಧ್ಯಪ್ರಾಚೀನ ಯುಗದ ಅರಮನೆಯ ಸೆಟ್ ನಲ್ಲಿ ಹಲವಾರು ಮಂದಿ ಗಣ್ಯಾತಿಗಣ್ಯರೂ ಸೇರಿದಂತೆ 30,000 ಮಂದಿಯ ಸಮ್ಮುಖದಲ್ಲಿ ನಡೆದಿದೆ. ವಿವಾಹ ಸಮಾರಂಭಕ್ಕೆ ಆಗಮಿಸಿದ್ದ ಗಣ್ಯರಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಹಾಗೂ ಪೂನಮ್ ಮಹಾಜನ್ ಸೇರಿದ್ದರು.
ವರ ಸಂತೋಷ್ ಅವರ ಭೋಕರ್ದಾನ್ ಕ್ಷೇತ್ರ ಕಳೆದೆರಡು ವರ್ಷಗಳಿಂದ ಬರ ಪೀಡಿತವಾಗಿದೆ. ವಿವಾಹಕ್ಕೂ ಮುಂಚೆ ಅವರು ತಮ್ಮ ಪತ್ನಿ ರೇಣು ಸರ್ಕತೆ ಅವರೊಂದಿಗೆ ಕಾಣಿಸಿಕೊಂಡಿರುವ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ವೀಡಿಯೊವನ್ನು ರೆಸಾರ್ಟ್ ಒಂದರಲ್ಲಿ ಡ್ರೋನ್ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗಿದ್ದು ಈ ವೀಡಿಯೊ ತಪ್ಪಾದ ಕಾರಣಗಳಿಗೆ ವೈರಲ್ ಆಗಿತ್ತು. ಒಬ್ಬ ಫೇಸ್ ಬುಕ್ ಬಳಕೆದಾರನಂತೂ ‘‘ಇಷ್ಟೊಂದು ಖರ್ಚು ಮಾಡಬೇಡಿ, ಸಮಾಜ ಸೇವೆಗಾಗಿ ಬಳಸಿ,’’ ಎಂಬ ಸಲಹೆಯನ್ನೂ ನೀಡಿದ್ದರು.
ಕಳೆದ ತಿಂಗಳು ಕಾಂಗ್ರೆಸ್ ಸಂಸದೆ ರಂಜೀತ್ ರಂಜನ್ ಸಂಸತ್ತಿನಲ್ಲಿ ಮಂಡಿಸಿದ ಮದುವೆ ವೆಚ್ಚಗಳಿಗೆ ಕಡಿವಾಣ ಹಾಕುವ ಖಾಸಗಿ ಮಸೂದೆಯ ಮೇಲೆ ಮಾರ್ಚ್ 9ರಂದು ಚರ್ಚೆ ನಡೆಯುವ ಸಾಧ್ಯತೆಯಿದೆ.