×
Ad

ಪಕ್ಷದ ನಾಯಕಿಗೇ ಅಶ್ಲೀಲ ಸಂದೇಶ ಕಳಿಸಿ ಸಿಕ್ಕಿಬಿದ್ದ ಬಿಜೆಪಿ ಕಾರ್ಯಕರ್ತ

Update: 2017-03-06 11:49 IST

ಮುಂಬೈ, ಮಾ.6: ಬಿಜೆಪಿ ನಾಯಕಿ ಶೈನಾ ಎನ್ ಸಿ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಬಿಜೆಪಿ ಕಾರ್ಯಕರ್ತ ಜಯಂತ್ ಕುಮಾರ್ ಸಿಂಗ್ ಆಲಿಯಾಸ್ ಸಿಂಕು ಎಂಬವನನ್ನು ಬಂಧಿಸಲಾಗಿದೆ. ಆತ ತಾನು ಉತ್ತರ ಪ್ರದೇಶದ ವಾರಣಾಸಿಯ ಬಿಜೆಪಿ ಕಾರ್ಯಕರ್ತನೆಂದು ಹೇಳಿಕೊಂಡಿದ್ದಾನೆ.

ತನ್ನ ಫೋನಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದಾನೆಂದು ಆರೋಪಿಸಿ ವೃತ್ತಿಯಲ್ಲಿ ಫ್ಯಾಶನ್ ಡಿಸೈನರ್ ಆಗಿರುವ ಶೈನಾ ಕಳೆದ ತಿಂಗಳು ಜಯಂತ್ ಕುಮಾರ್ ಸಿಂಗ್ ವಿರುದ್ಧ ಪೊಲೀಸ್ ದೂರು ನೀಡಿದ್ದರು.

ಆರಂಭದಲ್ಲಿ ಶೈನಾರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ ಅವರನ್ನು ಸಹೋದರಿಯೆಂದು ಸಂಬೋಧಿಸಿ ತನ್ನನ್ನು ಪರಿಚಯ ಮಾಡಿಕೊಂಡಿದ್ದ ಜಯಂತ್ ಕ್ರಮೇಣ ತನ್ನ ವರಸೆ ಬದಲಾಯಿಸಿದ್ದು ನಾಯಕಿಗೆ ವಾಟ್ಸ್ ಆಪ್ ಮೂಲಕ ಅಶ್ಲೀಲ ಸಂದೇಶಗಳನ್ನು ಜನವರಿಯಿಂದ ಕಳುಹಿಸಲಾರಂಭಿಸಿದ್ದ. ‘‘ಆತ ಸಾರ್ವಜನಿಕ ಜೀವನದಲ್ಲಿರುವ ನನಗೇ ಇಂತಹ ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಧೈರ್ಯ ತೋರಿಸುತ್ತಿದ್ದರೆ, ಸಾಮಾನ್ಯ ಮಹಿಳೆಯರು ಇಂತಹ ವ್ಯಕ್ತಿಗಳಿಂದ ಎಷ್ಟು ತೊಂದರೆ ಅನುಭವಿಸಲಿಕ್ಕಿಲ್ಲ? ಆತನಿಗೆ ಬುದ್ಧಿ ಕಲಿಸಲೆಂದೇ ಹಾಗೂ ಇಂತಹ ಕಿರುಕುಳಕ್ಕೊಳಗಾಗುವ ಇತರ ವಹಿಳೆಯರಿಗೆ ಧೈರ್ಯ ತುಂಬಲು ನಾನು ದೂರು ದಾಖಲಿಸಿದ್ದೇನೆ,’’ ಎಂದು ಶೈನಾ ಹೇಳಿಕೊಂಡಿದ್ದಾರೆ.

ತಮ್ಮ ತಂದೆಯ ಎನ್‌ಜಿಒ ಮುಖಾಂತರ ಇಂತಹ ಸಮಸ್ಯೆ ಎದುರಿಸುವ ಮಹಿಳೆಯರಿಗೆ ಅಭಯಹಸ್ತ ನೀಡಲು ಸಹಾಯವಾಣಿಯೊಂದನ್ನು ಆರಂಭಿಸುವ ಉದ್ದೇಶವೂ ತನಗಿರುವುದಾಗಿ ಶೈನಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News