×
Ad

ವಿಶ್ವದ ಟಾಪ್-10 ವಿವಿ ಪಟ್ಟಿಗೆ ಐಐಎಸ್‌ಸಿ

Update: 2017-03-07 09:05 IST

ಹೊಸದಿಲ್ಲಿ, ಮಾ.7: ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ವಿಶ್ವದ ಅಗ್ರಗಣ್ಯ 10 ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿ ಅತ್ಯಪೂರ್ವ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಟೈಮ್ಸ್ ಹೈಯರ್ ಎಜ್ಯುಕೇಶನ್ (ಟಿಎಚ್‌ಇ) ಬಿಡುಗಡೆ ಮಾಡಿದ 2017ನೆ ಸಾಲಿನ ವಿಶ್ವವಿದ್ಯಾನಿಲಗಳ ರ‍್ಯಾಂಕಿಂಗ್ ನಲ್ಲಿ ಸಣ್ಣ ವಿಶ್ವವಿದ್ಯಾನಿಲಯ ವಿಭಾಗದಲ್ಲಿ ಐಐಎಸ್‌ಸಿ ಎಂಟನೆ ಸ್ಥಾನದಲ್ಲಿದೆ.

ಆದರೆ ಭಾರತದ ಸಂಸ್ಥೆಗಳ ಒಟ್ಟಾರೆ ರ್ಯಾಂಕಿಂಗ್ ಮಾತ್ರ ಕುಸಿದಿದೆ. ಕಳೆದ ವರ್ಷದ ಪಟ್ಟಿಯಲ್ಲಿ ಅಗ್ರ 10ರಲ್ಲಿ ಭಾರತದ ಯಾವ ವಿಶ್ವವಿದ್ಯಾನಿಲಯ ಇಲ್ಲದಿದ್ದರೂ, ಅಗ್ರ 20ರ ಪಟ್ಟಿಯಲ್ಲಿ ಎರಡು ಸಂಸ್ಥೆಗಳು ಸ್ಥಾನ ಪಡೆದಿದ್ದವು. ಸಣ್ಣ ವಿಶ್ವವಿದ್ಯಾನಿಲಯ ಎಂದರೆ 5,000ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ವಿಶ್ವವಿದ್ಯಾನಿಲಯವಾಗಿದೆ.

ಜೆಮ್‌ಶೆಡ್‌ಜಿ ಟಾಟಾ ಹಾಗೂ ಮೈಸೂರು ಮಹಾರಾಜರಾಗಿದ್ದ ಶ್ರೀಕೃಷ್ಣರಾಜ ಒಡೆಯರ್-4 ಅವರ ಬೆಂಬಲದೊಂದಿಗೆ 1909ರಲ್ಲಿ ಆರಂಭವಾದ ಐಐಎಸ್‌ಸಿ, ವಿಶ್ವದ ಅಗ್ರಗಣ್ಯ 100 ವಿವಿಗಳ ಪಟ್ಟಿಯಲ್ಲಿ 99ನೆ ಸ್ಥಾನ ಪಡೆದಿತ್ತು. ಈ ಮೂಲಕ ಭಾರತ ಮೊಟ್ಟಮೊದಲ ವಿವಿ ಎಂಬ ಹೆಗ್ಗಳಿಕೆಗೆ 2015-16ರಲ್ಲಿ ಪಾತ್ರವಾಗಿತ್ತು.

ಇದೀಗ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಅಮೆರಿಕ), ಎಕೋಲ್ ನೋರ್ಮಲ್ ಸುಪೀರಿಯರ್ (ಫ್ರಾನ್ಸ್), ಪೊಹಾಂಗ್ ಯುನಿವರ್ಸಿಟಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ (ದಕ್ಷಿಣ ಕೊರಿಯಾ) ಮುಂತಾದ ಅಗ್ರಗಣ್ಯ ಸಂಸ್ಥೆಗಳ ಎಲೈಟ್ ಕ್ಲಬ್‌ಗೆ ಸೇರಿದಂತಾಗಿದೆ. ಕ್ಯಾಲ್‌ಟೆಕ್ ವಿಶ್ವವಿದ್ಯಾನಿಲಯ ಅಗ್ರಸ್ಥಾನದಲ್ಲಿ ಮುಂದುವರಿದಿದ್ದರೆ, ಫ್ರಾನ್ಸ್ ಹಾಗೂ ಇಟೆಲಿ ಅಗ್ರ 10ರಲ್ಲಿ ತಲಾ 3 ಸ್ಥಾನ ಪಡೆದಿವೆ.

ಆದರೆ ಕಳೆದ ವರ್ಷ ಕ್ರಮವಾಗಿ 14 ಮತ್ತು 18ನೆ ಸ್ಥಾನ ಗಳಿಸುವ ಮೂಲಕ ಅಗ್ರ 20ರ ಪಟ್ಟಯಲ್ಲಿದ್ದ ಐಐಟಿ ಗುವಾಹಟಿ ಹಾಗೂ ಪುಣೆಯ ಸಾವಿತ್ರಿಭಾಯಿ ಫುಲೆ ವಿಶ್ವವಿದ್ಯಾನಿಲಯಗಳು ಈ ಬಾರಿ ಆ ಸ್ಥಾನ ಉಳಿಸಿಕೊಳ್ಳಲು ವಿಫಲವಾಗಿದ್ದು, ಅಗ್ರ 20ರ ಪೈಕಿ ಐಐಎಸ್‌ಸಿ ಹೊರತುಪಡಿಸಿದರೆ ಯಾವುದೇ ಭಾರತೀಯ ಶಿಕ್ಷಣ ಸಂಸ್ಥೆಗಳು ಸೇರಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News