ವಿಶ್ವದ ಅತ್ಯಂತ ತೂಕದ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ
ಮುಂಬೈ,ಮಾ.9: 500 ಕೆ.ಜಿ.ತೂಗುತ್ತಿದ್ದ, ವಿಶ್ವದ ಅತ್ಯಂತ ತೂಕದ ಮಹಿಳೆ ಎಮಾನ್ ಅಹ್ಮದ್(36) ಅವರಿಗೆ ಇಲ್ಲಿಯ ಸೈಫೀ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಎಮಾನ್‌ರನ್ನು ಕಳೆದ ತಿಂಗಳು ಚಿಕಿತ್ಸೆಗಾಗಿ ಈಜಿಪ್ತ್‌ನಿಂದ ಇಲ್ಲಿಗೆ ಕರೆತರಲಾಗಿತ್ತು.
ಮಾ.7ರಂದು ಬ್ಯಾರಿಯಾಟ್ರಿಕ್ ಸರ್ಜನ್ ಮುಫಝಲ್ ಲಕ್ಡಾವಾಲಾ ನೇತೃತ್ವದ ವೈದ್ಯರ ತಂಡವು ಎಮಾನ್‌ಗೆ ಲ್ಯಾಪರೊಸ್ಕೋಪಿಕ್ ಸ್ಲೀವ್ ಗ್ಯಾಸ್ಟ್ರೆಕ್ಟಮಿ ಶಸ್ತ್ರಚಿಕಿತ್ಸೆಯನ್ನು ನಡೆಸಿದೆ. ರೋಗಿಗೆ ಈಗ ಬಾಯಿ ಮೂಲಕ ದ್ರವಾಹಾರವನ್ನು ನೀಡಲಾಗುತ್ತಿದೆ ಎಂದು ಸೈಫೀ ಆಸ್ಪತ್ರೆಯು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಎಮಾನ್‌ಗಿರುವ ಎಲ್ಲ ವೈದ್ಯಕೀಯ ಸಮಸ್ಯೆಗಳನ್ನು ಪರಿಹರಿಸಲು ವೈದ್ಯರು ಪ್ರಯತ್ನಿಸಲಿದ್ದಾರೆ ಮತ್ತು ಆಕೆ ಶೀಘ್ರ ಸ್ವದೇಶಕ್ಕೆ ಮರಳುವಂತೆ ಮಾಡಲಿದ್ದಾರೆ ಎಂದೂ ಅದು ಹೇಳಿದೆ.
ಕಳೆದ 25 ವರ್ಷಗಳಿಂದಲೂ ತನ್ನ ಹಾಸಿಗೆಗೆ ಅಂಟಿಕೊಂಡಿದ್ದ ಎಮಾನ್ ಮನೆಯಿಂದ ಹೊರಬಿದ್ದಿರಲಿಲ್ಲ. ಮುಂಬೈಗೆ ಅವರನ್ನು ವಿಶೇಷ ಬಾಡಿಗೆ ವಿಮಾನದಲ್ಲಿ ಕರೆತರಲಾಗಿತ್ತು.