×
Ad

ಉತ್ತರ ಪ್ರದೇಶ ಪ್ರಚಂಡ ಜಯಭೇರಿಯ ಹಿಂದಿರುವ ಸುನಿಲ್ ಬನ್ಸಲ್

Update: 2017-03-11 23:57 IST

403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶವು ಹೊರಬಿದ್ದಿದ್ದು, ಬಿಜೆಪಿ 325 ಸಂಖ್ಯಾ ಬಲದ ಮೂಲಕ ಸ್ಪಷ್ಟ ಬಹುಮತದೊಡನೆ ಅಧಿಕಾರದ ಗದ್ದುಗೆಯನ್ನೇರಲು ವೇದಿಕೆ ಸಜ್ಜುಗೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ರಾಜನಾಥ ಸಿಂಗ್, ಕೇಶವ ಪ್ರಸಾದ್ ವೌರ್ಯ ಅವರು ಸಾಕಷ್ಟು ಶ್ರಮಿಸಿದ್ದಾರಾದರೂ, ಬಿಜೆಪಿಯ ಈ ಭಾರೀ ಯಶಸ್ಸಿನಲ್ಲಿ ಉತ್ತರ ಪ್ರದೇಶದ ‘ಅಮಿತ್ ಶಾ’ ಅವರ ಮಹತ್ವದ ಕೊಡುಗೆಯಿದೆ. ಉತ್ತರ ಪ್ರದೇಶ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಸುನಿಲ್ ಬನ್ಸಲ್ ಅವರೇ ಈ ಉತ್ತರ ಪ್ರದೇಶದ ‘ಅಮಿತ್ ಶಾ’ ಕಳೆದ ವರ್ಷ ವಾರಣಾಸಿಯಲ್ಲಿ ಬಹಿರಂಗ ಸಭೆಯೊಂದನ್ನು ನಡೆಸಿದ್ದ ಮೋದಿ ಸಾರ್ವಜನಿಕ ಔತಣಕೂಟದಲ್ಲಿ ಭಾಗವಹಿಸಿದ್ದ ಚಿತ್ರ ವೈರಲ್ ಆಗಿದ್ದಾಗ, ಆ ಚಿತ್ರದಲ್ಲಿದ್ದ ಬನ್ಸಲ್ ಕಡೆ ಹೆಚ್ಚಿನ ಜನ ಗಮನ ಹರಿಸಿರಲಿಲ್ಲ. ಆದರೆ ಆ ಚಿತ್ರದಲ್ಲಿ ಅವರ ಉಪಸ್ಥಿತಿ ಪಕ್ಷದಲ್ಲಿ ಅವರ ಪ್ರಭಾವದ ಸ್ಪಷ್ಟ ಪ್ರತಿಬಿಂಬವಾಗಿತ್ತು. ಬನ್ಸಲ್ ಉ.ಪ್ರ.ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮುನ್ನ ಎಬಿವಿಪಿಯ ಪದಾಧಿಕಾರಿ ಯಾಗಿದ್ದರು. 2014ರ ಲೋಕಸಭಾ ಚುನಾವಣೆಯ ಸಂದರ್ಭ ಬನ್ಸಲ್ ಅಮಿತ್ ಶಾ ನೇತೃತ್ವದ ತಂಡದ ಭಾಗವಾಗಿದ್ದರು.

ಬನ್ಸಲ್ ಪ್ರಸಕ್ತ ಚುನಾವಣೆಯಲ್ಲಿ ಉ.ಪ್ರದೇಶದಲ್ಲಿ ಪಕ್ಷದ ಪ್ರಚಾರ ಕಾರ್ಯವನ್ನಾ ರಂಭಿಸಿದಾಗ ಮೂರು ದೌರ್ಬಲ್ಯಗಳನ್ನು ಗಮನಿಸಿದ್ದರು. ಅವರು ಹೇಳುವಂತೆ ಗ್ರಾಮೀಣ ಪ್ರದೇಶಗಳನ್ನು ಬಿಜೆಪಿ ತಲುಪಿರಲಿಲ್ಲ. ಈ ನಿಟ್ಟಿನಲ್ಲಿ ತಾನು ತುಂಬ ಶ್ರಮಿಸಿರುವುದಾಗಿ ಇಂದು ಆಂಗ್ಲ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು ಹೇಳಿದರು.

ರಾಜ್ಯದಲ್ಲಿ 1.40 ಲಕ್ಷ ಮತದಾನ ಕೇಂದ್ರಗಳಿದ್ದು, ಎಷ್ಟೋ ಕೇಂದ್ರಗಳಲ್ಲಿ ಪಕ್ಷದ ಕಾರ್ಯಕರ್ತರ ಕೊರತೆಯನ್ನು ಬನ್ಸಲ್ ಗಮನಿಸಿದ್ದರು. ಇದು ಪಕ್ಷದ ಎರಡನೆ ದೌರ್ಬಲ್ಯವಾಗಿತ್ತು. ಹೀಗಾಗಿ ಅವರು ರಾಜ್ಯದ ಪ್ರತಿಯೊಂದು ಬೂತ್‌ನಲ್ಲಿಯೂ 10-12 ಕಾರ್ಯಕರ್ತರನ್ನು ನಿಯೋಜಿಸಿದ್ದರು. ಇದರ ಜೊತೆಗೆ ಲಕ್ನೋದಲ್ಲಿರುವ ಕಾಲ್ ಸೆಂಟರ್ ಮೂಲಕ ಇಡೀ ಪ್ರದೇಶದ ಮೇಲೆ ನಿಗಾ ಇರಿಸಲಾಗಿತ್ತು.

ಮೇಲ್ವರ್ಗಗಳಿಗೆ ಸೇರಿದ ಪಕ್ಷ ಎಂಬ ಹಣೆಪಟ್ಟಿ ಬಿಜೆಪಿಯ ಮೂರನೆ ದೌರ್ಬಲ್ಯವಾಗಿತ್ತು. ಇದನ್ನು ತೊಡೆದು ಹಾಕುವಲ್ಲಿ ತನಗೆ ಭಾರೀ ಯಶಸ್ಸು ಲಭಿಸಿದೆ ಎನ್ನುತ್ತಾರೆ ಬನ್ಸಲ್. ಈ ಹಿಂದೆ ಬಿಜೆಪಿಯಲ್ಲಿ ಕೇವಲ ಶೇ.10ರಷ್ಟು ಕಾರ್ಯಕರ್ತರು ಹಿಂದುಳಿದ ಮತ್ತು ಪರಿಶಿಷ್ಟ ಜಾತಿಗಳಿಗೆ ಸೇರಿದವರಾಗಿದ್ದರೆ ಅವರ ಸಂಖ್ಯೆ ಈಗ ಶೇ.40ಕ್ಕೆ ತಲುಪಿದೆ ಎನ್ನುತ್ತಾರೆ ಅವರು. ಚುನಾವಣೆಗೆ ಮುನ್ನ ಇತರ ಪಕ್ಷಗಳ ನಾಯಕರನ್ನು ಬಿಜೆಪಿಗೆ ಸೇರಿಸಿಕೊಂಡು ಅವರಿಗೆ ಟಿಕೆಟ್‌ಗಳನ್ನು ನೀಡಿದ್ದು ಚುನಾವಣಾ ಕಾರ್ಯತಂತ್ರದ ಒಂದು ಭಾಗವಾಗಿತ್ತು ಎನ್ನುತ್ತಾರೆ ಬನ್ಸಲ್. ಇತರ ಪಕ್ಷಗಳಿಂದ ಬಂದಿರುವ 80 ನಾಯಕರಿಗೆ ಬಿಜೆಪಿಯು ಟಿಕೆಟ್‌ಗಳನ್ನು ನೀಡಿದ್ದು, ಈ ಪೈಕಿ 67 ನಾಯಕರು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಪಕ್ಷವು ಈ ಹಿಂದೆಂದೂ ಗೆದ್ದಿರಲಿಲ್ಲ. ಬನ್ಸಲ್ ಕೇವಲ ಭೌತಿಕ ಚುನಾವಣಾ ನೀತಿಗಳ ಮೇಲೆ ಉಸ್ತುವಾರಿ ವಹಿಸಿದ್ದಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಪಕ್ಷದ ಚುನಾವಣಾ ಪ್ರಚಾರ ಕಾರ್ಯ ನಿರ್ವಹಿಸುತ್ತಿದ್ದ ತಂಡವೂ ಅವರಿಗೇ ವರದಿ ಮಾಡುತ್ತಿತ್ತು. ಹೀಗೆ ತನ್ನ ತಂತ್ರಗಾರಿಕೆಯ ಮೂಲಕ ಪಕ್ಷದ ಚುನಾವಣಾ ಯಶಸ್ಸಿನಲ್ಲಿ ಸಾಕಷ್ಟು ಕೊಡುಗೆ ಸಲ್ಲಿಸಿರುವ ಬನ್ಸಲ್ ಈಗ ಉತ್ತರ ಪ್ರದೇಶದ ‘ಅಮಿತ್ ಶಾ ’ ಎಂದೇ ಜನಪ್ರಿಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News