ಮಾಯಾವತಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ದಯಾಶಂಕರ್ ಸಿಂಗ್ ಉಚ್ಛಾಟನೆ ರದ್ದುಗೊಳಿಸಿದ ಬಿಜೆಪಿ
Update: 2017-03-12 20:18 IST
ಲಕ್ನೊ, ಮಾ.12: ಉತ್ತರಪ್ರದೇಶ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿದ್ದ ದಯಾಶಂಕರ್ ಸಿಂಗ್ ಅವರ ಉಚ್ಛಾಟನೆಯನ್ನು ರದ್ದುಗೊಳಿಸಲಾಗಿದೆ. ದಯಾಶಂಕರ್ ಸಿಂಗ್ ಕಳೆದ ವರ್ಷ ಬಿಎಸ್ಪಿ ನಾಯಕಿ ಮಾಯಾವತಿ ಅವರನ್ನು ‘ವೇಶ್ಯೆ’ಗೆ ಹೋಲಿಸಿ ಹೇಳಿಕೆ ನೀಡಿ ಭಾರೀ ವಿವಾದಕ್ಕೆ ಕಾರಣವಾಗಿದ್ದರು . ಈ ಹಿನ್ನೆಲೆಯಲ್ಲಿ ಕಳೆದ ಜುಲೈಯಲ್ಲಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು.
ಉತ್ತರ ಪ್ರದೇಶದಲ್ಲಿ ನಿರ್ಣಾಯಕವಾಗಿರುವ ದಲಿತರ ಮತಗಳು ಕೈತಪ್ಪಿ ಹೋಗಬಾರದೆಂಬ ಉದ್ದೇಶದಿಂದ ದಯಾಶಂಕರ್ ಸಿಂಗ್‌ರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಹೇಳಲಾಗಿತ್ತು.
ಇದೀಗ ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಭಾರೀ ಬಹುಮತದೊಂದಿಗೆ ಗೆದ್ದ ಕೂಡಲೇ, ದಯಾಶಂಕರ್ ಅವರ ಉಚ್ಛಾಟನೆಯನ್ನು ಪಕ್ಷ ರದ್ದುಗೊಳಿಸಿದೆ. ದಯಾಶಂಕರ್ ಅವರ ಪತ್ನಿ ಸ್ವಾತಿ ಸಿಂಗ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.