×
Ad

ವೆಸ್ಟ್‌ಇಂಡೀಸ್ ವೃತ್ತಿಪರ ಕ್ರಿಕೆಟ್ ಲೀಗ್: ಗಯಾನಕ್ಕೆ ಅಪ್ಪ-ಮಗ ಆಸರೆ!

Update: 2017-03-12 23:51 IST

ಜಮೈಕಾ, ಮಾ.12: ಡಬ್ಲುಐಸಿಬಿ ವೃತ್ತಿಪರ ಕ್ರಿಕೆಟ್ ಲೀಗ್‌ನ ನಾಲ್ಕು ದಿನಗಳ ಟೂರ್ನಮೆಂಟ್‌ನಲ್ಲಿ ವೆಸ್ಟ್‌ಇಂಡೀಸ್‌ನ ಮಾಜಿ ಹಿರಿಯ ಟೆಸ್ಟ್ ಕ್ರಿಕೆಟಿಗ ಶಿವನಾರಾಯಣ್ ಚಂದರ್‌ಪಾಲ್‌ ಹಾಗೂ ಅವರ ಪುತ್ರ ತ್ಯಾಗನಾರಾಯಣ್ ಚಂದರ್‌ಪಾಲ್ ಅರ್ಧಶತಕವನ್ನು ಸಿಡಿಸುವ ಮೂಲಕ ಗಯಾನ ತಂಡಕ್ಕೆ ಆಸರೆಯಾದರು.

ಇಲ್ಲಿನ ಸಬೀನಾಪಾರ್ಕ್‌ನಲ್ಲಿ ನಡೆಯುತ್ತಿರುವ ಕ್ರಿಕೆಟ್‌ಲೀಗ್‌ನ 2ನೆ ದಿನವಾದ ಶನಿವಾರ ಗಯಾನ ತಂಡ ಜಮೈಕಾದ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 88.3 ಓವರ್‌ಗಳಲ್ಲಿ 262 ರನ್ ಗಳಿಸಿತು. ಕೇವಲ 7 ರನ್ ಮೊದಲ ಇನಿಂಗ್ಸ್ ಮುನ್ನಡೆ ಪಡೆದಿತ್ತು.

 ಚಂದರ್‌ಪಾಲ್‌ರ 20ರ ಹರೆಯದ ಪುತ್ರ ತ್ಯಾಗನಾರಾಯಣ್ ಚಂದರ್‌ಪಾಲ್(58 ರನ್, 135 ಎಸೆತ, 5 ಬೌಂಡರಿ,1 ಸಿಕ್ಸರ್) ಹಾಗೂ 42ರ ಹರೆಯದ ಶಿವನಾರಾಯಣ್ ಚಂದರ್‌ಪಾಲ್(57 ರನ್,175 ಎಸೆತ, 4 ಬೌಂಡರಿ) ಅರ್ಧಶತಕ ಬಾರಿಸುವ ಮೂಲಕ ಗಮನ ಸೆಳೆದರು.

ಗಯಾನದ ಪರ ಇನಿಂಗ್ಸ್ ಆರಂಭಿಸಿದ ಟಿ. ಚಂದರ್‌ಪಾಲ್ ಹೆಟ್‌ಮೆಯೆರ್ (74)ಅವರೊಂದಿಗೆ ಮೊದಲ ವಿಕೆಟ್‌ಗೆ 104 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು. ಮಧ್ಯಮಕ್ರಮಾಂಕದಲ್ಲಿ ಚಂದರ್‌ಪಾಲ್ ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.

ವೆಸ್ಟ್‌ಇಂಡೀಸ್‌ನ ಖ್ಯಾತ ಬ್ಯಾಟ್ಸ್‌ಮನ್ ಚಂದರ್‌ಪಾಲ್ 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. ವಿಂಡೀಸ್‌ನ ಪರ 10,000ಕ್ಕೂ ಅಧಿಕ ಟೆಸ್ಟ್ ರನ್(164 ಪಂದ್ಯ, 11, 867)ಗಳಿಸಿರುವ ಎರಡನೆ ಬ್ಯಾಟ್ಸ್‌ಮನ್ ಆಗಿರುವ ಚಂದರ್‌ಪಾಲ್ 30 ಟೆಸ್ಟ್ ಶತಕಗಳನ್ನು ಬಾರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News