×
Ad

ವಿವಾದಿತ 370ನೇ ವಿಧಿ ಕೊಟ್ಟಿದ್ದೇ ನೆಹರೂ ಸಾಧನೆ: ಸುಬ್ರಹ್ಮಣ್ಯನ್ ಸ್ವಾಮಿ

Update: 2017-03-13 09:34 IST

ಹೊಸದಿಲ್ಲಿ, ಮಾ.13: ಮಾಜಿ ಪ್ರಧಾನಿ ದಿವಂಗತ ಜವಾಹರಲಾಲ್ ನೆಹರೂ ಅವರ ವಿರುದ್ಧ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಪ್ರಧಾನಿ ನೆಹರೂ ಅವರು ದೇಶದ ಸಂವಿಧಾನಕ್ಕೆ ನೀಡಿದ ಏಕೈಕ ಕೊಡುಗೆ ಎಂದರೆ, ಸಂವಿಧಾನದ 370ನೇ ವಿಧಿಯನ್ನು ನೀಡಿದ್ದು ಎಂದು ದಿಲ್ಲಿ ವಿಶ್ವವಿದ್ಯಾನಿಲಯದ ಕಾನೂನು ವಿಭಾಗ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸ್ವಾಮಿ ನುಡಿದರು.

ದಿಲ್ಲಿ ವಿಶ್ವವಿದ್ಯಾನಿಲಯ, ಜೆಎನ್‌ಯು ಹಾಗೂ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಸಂಸ್ಥೆಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹುಟ್ಟಿಕೊಂಡಿರುವ ಚರ್ಚೆ ಬಗ್ಗೆ ಪ್ರಸ್ತಾಪಿಸಿದ ಅವರು, ಕೆಲ ಜೆಎನ್‌ಯು ವಿದ್ಯಾರ್ಥಿಗಳು ಸಮಸ್ಯೆ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.

ನೆಹರೂ ಹಾಗೂ ಎಡಪಂಥೀಯ ಪ್ರಾಬಲ್ಯದ ಜೆಎನ್‌ಯು ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, "ಜವಾಹರಲಾಲ್ ನೆಹರೂ ಜೆಎನ್‌ಯುನಲ್ಲಿ ತಮ್ಮ ರಾಜಕೀಯ ಉತ್ತರಾಧಿಕಾರಿಗಳನ್ನು ಬಿಟ್ಟುಹೋಗಿದ್ದಾರೆ" ಎಂದು ಲೇವಡಿ ಮಾಡಿದರು.

ಹಿಂಸೆಗೆ ಕುಮ್ಮಕ್ಕು ನೀಡುವುದೂ ಅಪರಾಧ. ಜೆಎನ್‌ಯು ಮುಖಂಡರು ತಮ್ಮ ವಿದ್ಯಾರ್ಥಿಗಳನ್ನು ಸೇನೆಯತ್ತ ಕಲ್ಲೆಸೆಯುವಂತೆ ಕುಮ್ಮಕ್ಕು ನೀಡಿದ್ದಾರೆ. ಅಫ್ಜಲ್ ಗುರುವನ್ನು ನೇಣಿಗೇರಿಸಿದ್ದಕ್ಕಾಗಿ ಅವರು ಜನರನ್ನು ಎತ್ತಿಕಟ್ಟುತ್ತಿದ್ದಾರೆ ಎಂದು ಸ್ವಾಮಿ ಕೆಂಡ ಕಾರಿದರು. ಭಾರತ ಹಿಂದೂಭೂಮಿ ಎಂದು ಅವರು ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News