×
Ad

ಗೋವಾದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ, ಪಾರಿಕ್ಕರ್ ವಿಲನ್: ಕಾಂಗ್ರೆಸ್

Update: 2017-03-13 11:36 IST

 ಪಣಜಿ, ಮಾ.13: ‘‘ಬಿಜೆಪಿ ಗೋವಾದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ. ಎಲ್ಲ ಬೆಳವಣಿಗೆಯ ಹಿಂದೆ ಮನೋಹರ್ ಪಾರಿಕ್ಕರ್ ಖಳನಾಯಕನಾಗಿದ್ದಾರೆ. ಸರಕಾರ ರಚನೆಗೆ ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿದೆ. ಕೆಲವು ಶಾಸಕರಿಗೆ ಹಣ ಹಾಗೂ ಮಂತ್ರಿಗಿರಿ ಆಮಿಷ ನೀಡಿ ಪಕ್ಷಕ್ಕೆ ಸೆಳೆಯುತ್ತಿದೆ’’ ಎಂದು ಗೋವಾದಲ್ಲಿ ಕಾಂಗ್ರೆಸ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.

 ‘‘ಗೋವಾದಲ್ಲಿ ಜನಾದೇಶದ ವಿರುದ್ಧ ಹಣಬಲ ಗೆಲುವು ಸಾಧಿಸಿದೆ. ರಾಜ್ಯದಲ್ಲಿ ನಮ್ಮ ಪಕ್ಷಕ್ಕೆ ಹೆಚ್ಚಿನ ಸೀಟುಗಳು ಲಭಿಸಿದ್ದರೂ ಸರಕಾರ ರಚಿಸುವಷ್ಟು ಬೆಂಬಲ ಒಟ್ಟುಗೂಡಿಸಲು ನಮ್ಮಿಂದ ಸಾಧ್ಯವಾಗದೇ ಇರುವುದಕ್ಕೆ ಗೋವಾ ಜನತೆಯಲ್ಲಿ ಕ್ಷಮೆ ಕೋರುವೆ. ಗೋವಾದಲ್ಲಿ ಕೋಮುವಾದಿ ಸಂಘಟನೆ ಹಾಗೂ ಹಣಬಲದ ರಾಜಕೀಯದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ’’ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿರುವ ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ರಾಜಕೀಯ ಪಕ್ಷವೊಂದರ ಮುಖ್ಯಮಂತ್ರಿ, ಆರು ಸಚಿವರು ಸೋತ ಬಳಿಕವೂ ಸರಕಾರ ರಚನೆಗೆ ಮುಂದಾಗಿರುವುದನ್ನು ನಾನು ಎಲ್ಲಿಯೂ ನೋಡಿಲ್ಲ ಎಂದು ಬಿಜೆಪಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಸಿಂಗ್ ಮನೋಹರ್ ಪಾರಿಕ್ಕರ್ ಹಾಗೂ ಬಿಜೆಪಿಗೆ ಅಧಿಕಾರದ ದಾಹ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

‘‘ವಿಧಾನಸಭೆಯ ಚುನಾವಣೆಯಲ್ಲಿ ಎರಡನೆ ಸ್ಥಾನ ಪಡೆದಿರುವ ಪಕ್ಷಕ್ಕೆ ಸರಕಾರ ರಚಿಸುವ ಅಧಿಕಾರವಿಲ್ಲ. ಗೋವಾ ಹಾಗೂ ಮಣಿಪುರದಲ್ಲಿ ಬಿಜೆಪಿಯು ಹಣಬಲ, ತೋಳ್ಬಲ ಹಾಗೂ ಅಧಿಕಾರದ ದುರ್ಬಳಕೆ ಮಾಡಿಕೊಂಡು ಜನಾದೇಶದ ವಿರುದ್ಧ ಹೆಜ್ಜೆ ಇಟ್ಟಿದೆ’’ ಎಂದು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಟ್ವೀಟ್ ಮಾಡಿದ್ದಾರೆ.

 ಕಾಂಗ್ರೆಸ್ ಪಕ್ಷ ಗೋವಾದಲ್ಲಿ 40 ಕ್ಷೇತ್ರಗಳ ಪೈಕಿ 17ರಲ್ಲಿ ಗೆಲುವು ಸಾಧಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಅಗತ್ಯದ ಬಹುಮತ ಪಡೆಯಲು ವಿಫಲವಾಗಿ ಸರಕಾರ ರಚನೆಯ ಸ್ಪರ್ಧೆಯಿಂದ ಹೊರ ನಡೆದಿದೆ. 13 ಸ್ಥಾನಗಳಲ್ಲಿ ಜಯ ಸಾಧಿಸಿರುವ ಬಿಜೆಪಿ ಪಕ್ಷ ಎಂಜಿಪಿಯ ಮೂವರು ಶಾಸಕರು, ಗೋವಾ ಫಾರ್ವರ್ಡ್‌ನ ಮೂವರು ಶಾಸಕರು ಹಾಗೂ ಇಬ್ಬರು ಪಕ್ಷೇತರ ಶಾಸಕರ ಬೆಂಬಲ ಪಡೆದು ಸರಕಾರ ರಚನೆಗೆ ಮುಂದಾಗಿದ್ದು, ಮನೋಹರ್ ಪಾರಿಕ್ಕರ್ ಮುಖ್ಯಮಂತ್ರಿಪಟ್ಟಕ್ಕೇರಲು ಸಜ್ಜಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News