×
Ad

ರಾಂಚಿ ಟೆಸ್ಟ್: ಭಾರತಕ್ಕೆ ಪೂಜಾರ ಆಧಾರ

Update: 2017-03-18 23:55 IST

 ರಾಂಚಿ, ಮಾ.18: ಚೇತೇಶ್ವರ ಪೂಜಾರ ಹಾಗೂ ಪ್ಯಾಟ್ ಕಮಿನ್ಸ್ ಇಲ್ಲಿ ನಡೆಯುತ್ತಿರುವ ಮೂರನೆ ಟೆಸ್ಟ್‌ನ 3ನೆ ದಿನದ ಗೌರವಕ್ಕೆ ಪಾತ್ರರಾಗಿದ್ದಾರೆ. ಅಜೇಯ ಶತಕ ಸಿಡಿಸುವ ಜೊತೆಗೆ ಎಂ.ವಿಜಯ್, ಅಜಿಂಕ್ಯ ರಹಾನೆ ಹಾಗೂ ಕರುಣ್ ನಾಯರ್‌ರೊಂದಿಗೆ ಉಪಯುಕ್ತ ಜೊತೆಯಾಟ ನಡೆಸಿದ ಚೇತೇಶ್ವರ ಪೂಜಾರ ಭಾರತಕ್ಕೆ ಆಧಾರವಾಗಿದ್ದಾರೆ.

ಒಟ್ಟು ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ ಆಸೀಸ್‌ನ ವೇಗದ ಬೌಲರ್ ಪ್ಯಾಟ್ ಕಮಿನ್ಸ್(4-59) ಆಸ್ಟ್ರೇಲಿಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸುವ ಅವಕಾಶವನ್ನು ಮುಕ್ತವಾಗಿರಿಸಿದ್ದಾರೆ. ಹಳೆ ಹಾಗೂ ಹೊಸ ಚೆಂಡಿನಲ್ಲಿ ಶಿಸ್ತುಬದ್ಧ ಬೌಲಿಂಗ್ ಸಂಘಟಿಸಿದ ಕಮಿನ್ಸ್(4-59) ಅವರು ಕೊಹ್ಲಿ, ರಹಾನೆ ಹಾಗೂ ಅಶ್ವಿನ್ ವಿಕೆಟ್ ಪಡೆದರು.

ಭಾರತದ ಇತರ ಬ್ಯಾಟ್ಸ್‌ಮನ್‌ಗಳು ಕಮಿನ್ಸ್ ದಾಳಿಯನ್ನು ಎದುರಿಸಲು ಪರದಾಟ ನಡೆಸಿದರೆ ಪೂಜಾರ ಅವರು ಕಮಿನ್ಸ್ ವಿರುದ್ಧ ಆಡಿರುವ 50 ಎಸೆತಗಳಲ್ಲಿ 35 ರನ್ ಗಳಿಸಿ ದಿಟ್ಟ ಉತ್ತರ ನೀಡಿದರು.

ಇಲ್ಲಿನ ಜೆಎಸ್‌ಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ 3ನೆ ದಿನವಾದ ಶನಿವಾರ 1 ವಿಕೆಟ್ ನಷ್ಟಕ್ಕೆ 120 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತಕ್ಕೆ ಪೂಜಾರ ಆಸರೆಯಾದರು. 11ನೆ ಶತಕ ಬಾರಿಸಿದ ಪೂಜಾರ 328 ಎಸೆತಗಳಲ್ಲಿ 17 ಬೌಂಡರಿಗಳ ಸಹಿತ 130 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.ಪೂಜಾರಗೆ ವೃದ್ದಿಮಾನ್ ಸಹಾ(ಅಜೇಯ 18) ಸಾಥ್ ನೀಡುತ್ತಿದ್ದಾರೆ. ಭಾರತ ತಂಡ ಆಸ್ಟ್ರೇಲಿಯದ ಮೊದಲ ಇನಿಂಗ್ಸ್‌ಗಿಂತ 91 ರನ್ ಹಿನ್ನಡೆಯಲ್ಲಿದೆ.

ಪ್ರಸ್ತುತ ಸರಣಿಯಲ್ಲಿ ಶತಕ ಬಾರಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿರುವ ಪೂಜಾರ 2013ರಲ್ಲಿ ನಡೆದಿದ್ದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸೀಸ್ ಶತಕ ಬಾರಿಸಿದ್ದರು. ಬೆಂಗಳೂರು ಟೆಸ್ಟ್‌ನಲ್ಲಿ ಶತಕ ವಂಚಿತರಾಗಿದ್ದ ಪೂಜಾರ 3ನೆ ಟೆಸ್ಟ್‌ನಲ್ಲಿ ಮೂರಂಕೆ ದಾಟಲು ಯಶಸ್ವಿಯಾದರು. ಆಸೀಸ್ ವಿರುದ್ಧ ಪೂಜಾರ ಬಾರಿಸಿದ ಎರಡನೆ ಶತಕ ಇದಾಗಿದೆ.

ಇದಕ್ಕೆ ಮೊದಲು 42 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಆರಂಭಿಕ ಬ್ಯಾಟ್ಸ್‌ಮನ್ ಮುರಳಿ ವಿಜಯ್ ನಿನ್ನೆಯ ಮೊತ್ತಕ್ಕೆ 40 ರನ್ ಸೇರಿಸಿ ಸ್ಪಿನ್ನರ್ ಓ’ಕೀಫೆಗೆ ವಿಕೆಟ್ ಒಪ್ಪಿಸಿದರು. ಶತಕವಂಚಿತರಾದ ವಿಜಯ್ 183 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್‌ಗಳ ಸಹಿತ 82 ರನ್ ಗಳಿಸಿ ಔಟಾದರು.

ತನ್ನ 50ನೆ ಟೆಸ್ಟ್ ಪಂದ್ಯದಲ್ಲಿ 15ನೆ ಅರ್ಧಶತಕ ಪೂರೈಸಿದ ಚೆನ್ನೈ ಬ್ಯಾಟ್ಸ್‌ಮನ್ ವಿಜಯ್ ಹಾಗೂ ಪೂಜಾರ ಬೆಳಗ್ಗಿನ ಅವಧಿಯಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಮಾಡಿದರು. ಭೋಜನ ವಿರಾಮಕ್ಕೆ ಮೊದಲು ಆಸೀಸ್ ವಿಜಯ್ ವಿಕೆಟ್ ಪಡೆಯಲು ಸಫಲವಾಯಿತು.

ವಿಜಯ್ ಹಾಗೂ ಪೂಜಾರ 2ನೆ ವಿಕೆಟ್‌ಗೆ 102 ರನ್ ಜೊತೆಯಾಟ ನಡೆಸಿದರು. ವಿಜಯ್ ಔಟಾದ ಬಳಿಕ ಆಗಮಿಸಿದ ನಾಯಕ ವಿರಾಟ್ ಕೊಹ್ಲಿ(6) ಬೇಗನೆ ಔಟಾದರು. ಭುಜನೋವಿನಿಂದ ಬಳಲುತ್ತಿರುವ ಕೊಹ್ಲಿ 23 ಎಸೆತಗಳನ್ನು ಎದುರಿಸಿ 6 ರನ್ ಗಳಿಸಿ ಔಟಾದರು.

ಆಗ ರಹಾನೆ(14) ಹಾಗೂ ಕರುಣ್ ನಾಯರ್(23) ಅವರೊಂದಿಗೆ ಕ್ರಮವಾಗಿ 51 ಹಾಗೂ 44 ರನ್ ಸೇರಿಸಿದ ಪೂಜಾರ ತನ್ನ ಬ್ಯಾಟಿಂಗ್‌ನ್ನು ನಾಲ್ಕನೆ ದಿನಕ್ಕೆ ಕಾಯ್ದಿರಿಸಿದ್ದಾರೆ. ಪೂಜಾರ ಹಾಗೂ ವೃದ್ದಿಮಾನ್ ಸಹಾ ಕ್ರೀಸ್ ಕಾಯ್ದುಕೊಂಡಿದ್ದು, ಆಲ್‌ರೌಂಡರ್ ರವೀಂದ್ರ ಜಡೇಜ ಬ್ಯಾಟಿಂಗ್‌ಗೆ ಇಳಿಯಲಿದ್ದಾರೆ. ಭಾರತ ನಾಲ್ಕನೆ ದಿನದಾಟದಲ್ಲಿ ಆಸ್ಟ್ರೇಲಿಯದ ಮೊದಲ ಇನಿಂಗ್ಸ್‌ನ್ನು ಹಿಂದಿಕ್ಕಿ ಮುನ್ನಡೆ ಸಾಧಿಸುವ ವಿಶ್ವಾಸದಲ್ಲಿದೆ.

ಅಂಕಿ-ಅಂಶ

2010: ನ್ಯೂಝಿಲೆಂಡ್‌ನ ವಿರುದ್ಧ 2010ರಲ್ಲಿ ನಾಗ್ಪುರದಲ್ಲಿ ಭಾರತದ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳು 50ಕ್ಕೂ ಅಧಿಕ ರನ್ ಗಳಿಸಿದ್ದರು. 2006 ಹಾಗೂ 2010ರ ನಡುವೆ ಭಾರತ 8 ಬಾರಿ ಈ ಸಾಧನೆ ಮಾಡಿದೆ.

06: ವಿಜಯ್ ಹಾಗೂ ಪೂಜಾರ 2016-17ರ ಋತುವಿನಲ್ಲಿ ಆರನೆ ಬಾರಿ ಶತಕದ ಜೊತೆಯಾಟ ನಡೆಸಿದ್ದಾರೆ. 2005-06ರಲ್ಲಿ ಆಸ್ಟ್ರೇಲಿಯದ ಮ್ಯಾಥ್ಯೂ ಹೇಡನ್ ಹಾಗೂ ರಿಕಿ ಪಾಂಟಿಂಗ್ 7 ಬಾರಿ ಶತಕದ ಜೊತೆಯಾಟ ನಡೆಸಿದ್ದರು.

07: ಪೂಜಾರ ಭಾರತದಲ್ಲಿ ಪ್ರಥಮ ದರ್ಜೆ ಋತುವಿನಲ್ಲಿ ಏಳನೆ ಶತಕ ಬಾರಿಸಿದರು. 1999-2000ರಲ್ಲಿ ವಿವಿಎಸ್ ಲಕ್ಷ್ಮಣ್ 8 ಶತಕ ಬಾರಿಸಿದ್ದರು. ಪೂಜಾರ ಈ ವರ್ಷ ಭಾರತದಲ್ಲಿ ನಡೆದ ಟೆಸ್ಟ್‌ನಲ್ಲಿ 4 ಶತಕ ಹಾಗೂ ದೇಶೀಯ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 3 ಶತಕ ಬಾರಿಸಿದ್ದಾರೆ.

ಸ್ಕೋರ್ ವಿವರ

ಆಸ್ಟ್ರೇಲಿಯ ಪ್ರಥಮ ಇನಿಂಗ್ಸ್: 451 ರನ್‌ಗೆ ಆಲೌಟ್

ಭಾರತ ಪ್ರಥಮ ಇನಿಂಗ್ಸ್: 360/6

ರಾಹುಲ್ ಸಿ ವೇಡ್ ಬಿ ಕಮಿನ್ಸ್ 67

ಎಂ.ವಿಜಯ್ ಸ್ಟಂ.ವೇಡ್ ಬಿ ಒ’ಕೀಫೆ 82

ಚೇತೇಶ್ವರ ಪೂಜಾರ ಅಜೇಯ 130

ವಿರಾಟ್ ಕೊಹ್ಲಿ ಸಿ ಸ್ಮಿತ್ ಬಿ ಕಮಿನ್ಸ್ 06

ರಹಾನೆ ಸಿ ವೇಡ್ ಬಿ ಕಮಿನ್ಸ್ 14

ಕರುಣ್ ನಾಯರ್ ಬಿ ಹೇಝಲ್‌ವುಡ್ 23

ಆರ್.ಅಶ್ವಿನ್ ಸಿ ವೇಡ್ ಬಿ ಕಮಿನ್ಸ್ 03

ವೃದ್ಧಿಮಾನ್ ಸಹಾ ಅಜೇಯ 18

ಇತರ 17

ವಿಕೆಟ್ ಪತನ: 1-91, 2-193, 3-225, 4-276, 5-320, 6-328

ಬೌಲಿಂಗ್ ವಿವರ

ಹೇಝಲ್‌ವುಡ್ 31-09-66-1

ಕಮಿನ್ಸ್ 25-08-59-04

ಓ’ಕೀಫೆ 43-11-117-1

ಲಿಯೊನ್ 29-02-97-00

ಮ್ಯಾಕ್ಸ್‌ವೆಲ್ 02-00-04-00

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News