ವರ್ಷದಲ್ಲಿ ಎರಡು ಬಾರಿ ಶಿವಾಜಿ ಜನ್ಮದಿನಾಚರಣೆ ಬಗ್ಗೆ ವಾಟ್ಸ್‌ಆ್ಯಪ್ ಪೋಸ್ಟ್
ಮುಂಬೈ, ಮಾ.20: ಛತ್ರಪತಿ ಶಿವಾಜಿಯವರ ಜಯಂತಿಯನ್ನು ವರ್ಷಕ್ಕೆ ಎರಡು ಬಾರಿ ಆಚರಿಸಿರುವ ಔಚಿತ್ಯವನ್ನು ವಾಟ್ಸ್‌ಅಪ್ ಪೋಸ್ಟ್‌ನಲ್ಲಿ ಪ್ರಶ್ನಿಸಿದ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಸುನೀಲ್ ವಾಗ್ಮೋರೆ (38) ಅವರನ್ನು ಖೊಪೋಲಿ ಪೊಲೀಸರು ಬಂಧಿಸಿದ್ದಾರೆ.
ಖಲಾಪುರ ಕೆಎಂಸಿ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಇವರು ಕಾರ್ಯನಿರ್ವಹಿಸುತ್ತಿದ್ದರು. ಶಿವಾಜಿ ಬಗ್ಗೆ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಸೂಕ್ತವಲ್ಲದ ಮಾಹಿತಿಯನ್ನು ಪ್ರಸಾರ ಮಾಡಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಹಿಂದೂ ಪಂಚಾಂಗದ ಪ್ರಕಾರ, ಮಾರ್ಚ್ 15ರಂದು ಶಿವಾಜಿ ಜಯಂತಿಯನ್ನು ರಾಜ್ಯಾದ್ಯಂತ ಆಚರಿಸಲಾಗಿತ್ತು. ಆದರೆ ರಾಜ್ಯ ಸರಕಾರ ಅಧಿಕೃತವಾಗಿ ಫೆಬ್ರವರಿ 19ರಂದು ರಾಜ್ಯದಲ್ಲಿ ಶಿವಾಜಿ ಜಯಂತಿ ಆಚರಿಸಿತ್ತು. ಇತಿಹಾಸದ ದಾಖಲೆಗಳ ಪ್ರಕಾರ, ಶಿವಾಜಿಯವರ ಹುಟ್ಟಿದ ದಿನಾಂಕ ಫೆಬ್ರವರಿ 19 ಎಂಬ ಕಾರಣಕ್ಕೆ ಅಂದು ರಾಜ್ಯಾದ್ಯಂತ ಶಿವಾಜಿ ಜಯಂತಿ ಆಚರಿಸಲಾಗುತ್ತಿದೆ.
ಎರಡನೆ ಬಾರಿಗೆ ಜಯಂತಿ ಆಚರಿಸಿದ ಬಗ್ಗೆ ಅಂದು ರಾತ್ರಿ ವಾಗ್ಮೋರೆ ಅವರು ತಮ್ಮ ಕಾಲೇಜು ಸಹೋದ್ಯೋಗಿಗಳೊಂದಿಗೆ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಇದು ಅವರ ಸ್ನೇಹಿತರು ಹಾಗೂ ಸಹೋದ್ಯೋಗಿಗಳ ಸಿಟ್ಟಿಗೆ ಕಾರಣವಾಗಿದೆ. ಆ ಗುಂಪಿನ ಅಡ್ಮಿನ್, ತಕ್ಷಣ ಗುಂಪನ್ನು ಕಿತ್ತುಹಾಕಿದ್ದಾರೆ. ಕೆಲ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಶುಕ್ರವಾರ ಬೆಳಿಗ್ಗೆ ವಾಗ್ಮೋರೆ ಮೇಲೆ ಹಲ್ಲೆ ಮಾಡಿದ್ದಾರೆ.
ವಾಗ್ಮೋರೆ ಶಿವಾಜಿ ಗೌರವಕ್ಕೆ ಚ್ಯುತಿ ಬರುವ ರೀತಿಯಲ್ಲಿ ವರ್ತಿಸಿದ್ದಾಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಖೊಪೋಲಿ ಠಾಣೆ ಇನ್‌ಸ್ಪೆಕ್ಟರ್ ಸವಾತಿ ಶಿಂಧೆ ಹೇಳಿದ್ದಾರೆ. ಭಾರತೀಯ ದಂಡಸಂಹಿತೆಯ ಸೆಕ್ಷನ್ 295 ಎ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.