ಆವರ್ತನ ಆಧಾರದಲ್ಲಿ ಮುಂಬೈ, ಸೌರಾಷ್ಟ್ರಕ್ಕೆ ಮತದಾನದ ಅವಕಾಶ: ಸಿಒಎ

Update: 2017-03-22 18:26 GMT

ಹೊಸದಿಲ್ಲಿ, ಮಾ.22: ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ) ಅಥವಾ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ(ಎಸ್‌ಸಿಎ) ಪೂರ್ಣ ಸದಸ್ಯತ್ವದ ಸ್ಥಾನಮಾನ ಕಳೆದುಕೊಳ್ಳುವ ಸಾಧ್ಯತೆಯಿದೆ. ಆದರೆ, ಈ ಎರಡು ಸಂಸ್ಥೆಗಳು ಬಿಸಿಸಿಐ ವಾರ್ಷಿಕ ಮಹಾಸಭೆ(ಎಜಿಎಂ)ಯಲ್ಲಿ ಆವರ್ತನ ಆಧಾರದಲ್ಲಿ ಮತದಾನದ ಅವಕಾಶ ಪಡೆಯಲಿವೆ ಎಂದು ಸುಪ್ರೀಂಕೋರ್ಟ್‌ನಿಂದ ನೇಮಿಸಲ್ಪಟ್ಟಿರುವ ಆಡಳಿತಾಧಿಕಾರಿಗಳ ಸಮಿತಿ(ಸಿಒಎ) ಅಂತಿಮಗೊಳಿಸಿರುವ ಬಿಸಿಸಿಐ ಸಂವಿಧಾನದ ನಿಯಮ 3ರಲ್ಲಿ ಸ್ಪಷ್ಟಪಡಿಸಲಾಗಿದೆ.

 ಗೌರವಾನ್ವಿತ ಜಸ್ಟಿಸ್ ಲೋಧಾ ಸಮಿತಿ ಹಾಗೂ ಗೌರವಾನ್ವಿತ ಸುಪ್ರೀಂಕೋರ್ಟಿನ ನಿರ್ದೇಶನದ ಮೇರೆಗೆ ಆಡಳಿತಾಧಿಕಾರಿಗಳ ಸಮಿತಿ ಬಿಸಿಸಿಐ ಸಂವಿಧಾನವನ್ನು ಅಂತಿಮಗೊಳಿಸಿದೆ. ಮಹಾರಾಷ್ಟ್ರ ರಾಜ್ಯದ 3 ಕ್ರಿಕೆಟ್ ಸಂಸ್ಥೆಗಳಾದ ಮುಂಬೈ ಕ್ರಿಕೆಟ್ ಸಂಸ್ಥೆ, ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಹಾಗೂ ವಿದರ್ಭ ಕ್ರಿಕೆಟ್ ಸಂಸ್ಥೆ ಮಹಾರಾಷ್ಟ್ರ ರಾಜ್ಯದ ಪರ ಆವರ್ತನಾ ನಿಯಮದಂತೆ ಪ್ರತಿವರ್ಷ ಮತ ಚಲಾಯಿಸಬಹುದು. ಅದೇ ರೀತಿ ಗುಜರಾತ್ ಕ್ರಿಕೆಟ್ ಸಂಸ್ಥೆ, ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಹಾಗೂ ಬರೋಡಾ ಕ್ರಿಕೆಟ್ ಸಂಸ್ಥೆ ಗುಜರಾತ್ ರಾಜ್ಯದ ಪರ ಪ್ರತಿವರ್ಷ ಆವರ್ತನಾ ಆಧಾರದಲ್ಲಿ ಮತ ಚಲಾಯಿಸುವ ಅವಕಾಶವಿದೆ.

ಒಂದೇ ರಾಜ್ಯಕ್ಕೆ ಒಂದೇ ಕ್ರಿಕೆಟ್ ಸಂಸ್ಥೆ ಎಂಬ ನಿಯಮದಿಂದ ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯವನ್ನು ಹೊರಗಿಡಲಾಗಿದೆ. ಈ ಎರಡು ರಾಜ್ಯಗಳಲ್ಲಿ 3 ಕ್ರಿಕೆಟ್ ಸಂಸ್ಥೆಗಳಿರುವುದು ಇದಕ್ಕೆ ಕಾರಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News