ಹೈದರಾಬಾದ್‌ನ ಮಕ್ಕಾ ಮಸೀದಿ ಸ್ಫೋಟ ಪ್ರಕರಣ: ಅಸೀಮಾನಂದನ ಜಾಮೀನು ರದ್ದತಿಗೆ ಕ್ರಮ ; ತೆಲಂಗಾಣ
ಹೈದರಾಬಾದ್,ಮಾ.24: 2007ರ ಹೈದರಾಬಾದ್‌ನ ಮಕ್ಕಾ ಮಸೀದಿ ಸ್ಫೋಟ ಪ್ರಕರಣದ ಆರೋಪಿ ಸ್ವಾಮಿ ಅಸೀಮಾನಂದನ ಜಾಮೀನು ಬಿಡುಗಡೆ ರದ್ದುಪಡಿಸಲು ಕೈಗೊಳ್ಳಲಿದೆಯೆಂದು ತೆಲಂಗಾಣ ಸರಕಾರ ಶುಕ್ರವಾರ ತಿಳಿಸಿದೆ.
ತೆಲಂಗಾಣ ವಿಧಾನಸಭಾ ಕಲಾಪದ ಶೂನ್ಯವೇಳೆಯಲ್ಲಿ ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮಿನ್ (ಎಂಐಎಂ) ಪಕ್ಷದ ವರಿಷ್ಠ ಅಕ್ಬರುದ್ದೀನ್ ಉವೈಸಿ ಈ ವಿಷಯ ಪ್ರಸ್ತಾಪಿಸಿದಾಗ ಗೃಹ ಸಚಿವ ನಯನಿ ನರಸಿಂಹ ರೆಡ್ಡಿ ಈ ಮಾಹಿತಿ ನೀಡಿದ್ದಾರೆ. ‘‘ ಅಕ್ಬರುದ್ದೀನ್ ಉವೈಸಿ ಎತ್ತಿರುವ ಪ್ರಶ್ನೆಯು ವೌಲ್ಯಯುತವಾದುದಾಗಿದೆ. ಅಸೀಮಾನಂದನಿಗೆ ಹೇಗೆ ಜಾಮೀನು ದೊರೆಯಿತು ಎಂಬ ಬಗ್ಗೆ ಖಂಡಿತವಾಗಿಯೂ ತನಿಖೆ ನಡೆಸಲಾಗುವುದು. ಆತನಿಗೆ ದೊರೆತಿರುವ ಜಾಮೀನನ್ನು ರದ್ದುಪಡಿಸಲು ಪ್ರಯತ್ನಿಸಲಾಗುವುದು’’ ಎಂದವರು ಹೇಳಿದರು.
ಹೈದರಾಬಾದ್‌ನ ಮಕ್ಕಾ ಮಸೀದಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕನೆ ಮೆಟ್ರೊಪಾಲಿಟನ್ ಸೆಶನ್ಸ್ ನ್ಯಾಯಾಲಯವು ಗುರುವಾರ ಸ್ವಾಮಿ ಅಸೀಮಾನಂದ ಹಾಗೂ ಸಹ ಆರೋಪಿ ಭರತ್ ಭಾಯ್‌ಗೆ ಜಾಮೀನು ಬಿಡುಗಡೆ ನೀಡಿತ್ತು.
ಅಸೀಮಾನಂದನಿಗೆ ಜಾಮೀನು ಬಿಡುಗಡೆ ರದ್ದುಗೊಳ್ಳುವಂತೆ ಮಾಡಲು ತೆಲಂಗಾಣ ಸರಕಾರವು ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮೇಲೆ ಒತ್ತಡ ಹೇರಬೇಕು ಎಂದು ಉವೈಸಿ ಸದನದಲ್ಲಿ ಆಗ್ರಹಿಸಿದ್ದರು. ಹೈದರಾಬಾದ್‌ನ ಮಕ್ಕಾ ಮಸೀದಿ ಸ್ಫೋಟ ಹಾಗೂ ಆನಂತರ ನಡೆದ ಘಟನೆಗಳ ಕುರಿತು ಸಲ್ಲಿಸಲಾಗಿರುವ ಭಾಸ್ಕರರಾವ್ ಸಮಿತಿಯ ವರದಿಯನ್ನು ಸರಕಾರವು ಬಹಿರಂಗಪಡಿಸಬೇಕೆಂದು ಉವೈಸಿ ಆಗರಹಿಸಿದರು.
ಸ್ವಾಮಿ ಅಸೀಮಾನಂದನ ಅಸಲಿ ಹೆಸರು ನಭ ಕುಮಾರ್ ಸರ್ಕಾರ್ ಎಂದಾಗಿದ್ದು, ಹೈದರಾಬಾದ್‌ನಲ್ಲಿ 2007ರ ಮೇ 19ರಂದು ಮಕ್ಕಾ ಮಸೀದಿಯಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಆತನ ಬಂಧನವಾಗಿತ್ತು. ಈ ಸ್ಫೋಟ ಪ್ರಕರಣದಲ್ಲಿ 9 ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದರು.