×
Ad

ಹತ್ತನೆ ಆವೃತ್ತಿಯ ಐಪಿಎಲ್: ಮಿಂಚಲು ಸಜ್ಜಾಗಿದ್ದಾರೆ ವಿದೇಶಿ ಕ್ರಿಕೆಟಿಗರು

Update: 2017-03-31 23:41 IST

ಹೊಸದಿಲ್ಲಿ, ಮಾ.31: ಹತ್ತನೆ ಆವೃತ್ತಿಯ ಐಪಿಎಲ್ ಟೂರ್ನಿಯು ಎಪ್ರಿಲ್ 5 ರಿಂದ ಆರಂಭವಾಗಲಿದೆ. ಹೊಸ ಫ್ರಾಂಚೈಸಿಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಪ್ರಮುಖ ಐವರು ವಿದೇಶಿ ಕ್ರಿಕೆಟಿಗರು ಸಜ್ಜಾಗಿದ್ದು, ಅವರ ಬಗ್ಗೆ ಕಿರು ಪರಿಚಯ ಇಲ್ಲಿದೆ. *ಕೋರಿ ಆ್ಯಂಡರ್ಸನ್(ಡೆಲ್ಲಿ ಡೇರ್ ಡೆವಿಲ್ಸ್): ಫೆಬ್ರವರಿಯಲ್ಲಿ ನಡೆದ ಆಟಗಾರರ ಹರಾಜಿನಲ್ಲಿ 2 ಕೋ.ರೂ.ಮೂಲಬೆಲೆ ಹೊಂದಿದ್ದ ಆ್ಯಂಜೆಲೊ ಮ್ಯಾಥ್ಯೂಸ್ ಡೆಲ್ಲಿ ತಂಡಕ್ಕೆ ವಾಪಸಾಗಿದ್ದರು. ಈ ಹಿಂದೆ 1 ಕೋ.ರೂ.ಗೆ ಸಹಿ ಹಾಕಿರುವ ನ್ಯೂಝಿಲೆಂಡ್‌ನ ಆಲ್‌ರೌಂಡರ್ ಕೋರಿ ಆ್ಯಂಡರ್ಸನ್ ತಂಡದ ಪ್ರಮುಖ ಆಟಗಾರನಾಗಿದ್ದಾರೆ. ದಕ್ಷಿಣ ಆಫ್ರಿಕದ ಕ್ವಿಂಟನ್ ಡಿಕಾಕ್ ಹಾಗೂ ಜೆಪಿ ಡುಮಿನಿ ಈ ವರ್ಷದ ಐಪಿಎಲ್‌ನಿಂದ ಹೊರಗುಳಿದಿರುವ ಹಿನ್ನೆಲೆಯಲ್ಲಿ ಆ್ಯಂಡರ್ಸನ್ ತಂಡದ ಮೊದಲ ಆಯ್ಕೆಯ ಆಲ್‌ರೌಂಡರ್ ಆಗಿದ್ದಾರೆ. 26ರ ಹರೆಯದ ಆ್ಯಂಡರ್ಸನ್ ಜನವರಿಯಲ್ಲಿ ಬಾಂಗ್ಲಾದೇಶದ ವಿರುದ್ಧ 41 ಎಸೆತಗಳಲ್ಲಿ 94 ರನ್ ಗಳಿಸಿದ್ದರು.

*ರಶೀದ್ ಖಾನ್(ಸನ್‌ರೈಸರ್ಸ್ ಹೈದರಾಬಾದ್):

ಕಳೆದ ವರ್ಷ ಭಾರತದಲ್ಲಿ ನಡೆದಿದ್ದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ಬೌಲರ್ ರಶೀದ್ ಖಾನ್ 11 ವಿಕೆಟ್‌ಗಳನ್ನು ಕಬಳಿಸಿ ಎರಡನೆ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಯುಎಇ ವಿರುದ್ಧದ ಟ್ವೆಂಟಿ-20 ಚಾಲೆಂಜ್ ಟೂರ್ನಿಯಲ್ಲಿ 4 ಪಂದ್ಯಗಳಲ್ಲಿ 6 ವಿಕೆಟ್‌ಗಳನ್ನು ಉರುಳಿಸಿದ್ದ ರಶೀದ್ ಝಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ 10 ವಿಕೆಟ್‌ಗಳನ್ನು ಕಬಳಿಸಿ ಅಫ್ಘಾನಿಸ್ತಾನ ತಂಡ 3-2 ಅಂತರದಿಂದ ಸರಣಿ ಜಯಿಸಲು ನೆರವಾಗಿದ್ದರು. ಗ್ರೇಟರ್ ನೊಯ್ಡಾದಲ್ಲಿ ನಡೆಯುತ್ತಿರುವ ಐರ್ಲೆಂಡ್ ವಿರುದ್ಧ 3 ಪಂದ್ಯಗಳ ಟ್ವೆಂಟಿ-20 ಸರಣಿ ಹಾಗೂ 5 ಪಂದ್ಯಗಳ ಏಕದಿನ ಸರಣಿಯಲ್ಲಿ 18ರ ಹರೆಯದ ರಶೀದ್ ಒಟ್ಟು 24 ವಿಕೆಟ್‌ಗಳನ್ನು ಕಬಳಿಸಿ ಗಮನ ಸೆಳೆದಿದ್ದರು. ಏಕದಿನ ಪಂದ್ಯದಲ್ಲಿ 43ಕ್ಕೆ 6 ವಿಕೆಟ್ ಉರುಳಿಸಿ ಅಫ್ಘಾನ್ ಪರ ಏಕದಿನ ಕ್ರಿಕೆಟ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದರು. ಐಸಿಸಿ ಇಂಟರ್‌ಕಾಂಟಿನೆಂಟೆಲ್ ಕಪ್‌ನಲ್ಲಿ ಐರ್ಲೆಂಡ್‌ನ ವಿರುದ್ಧ 8 ವಿಕೆಟ್‌ಗಳನ್ನು ಪಡೆದಿದ್ದರು. ಐಪಿಎಲ್‌ನ ಹಾಲಿ ಚಾಂಪಿಯನ್ ಹೈದರಾಬಾದ್ ತಂಡದಲ್ಲಿ ಉತ್ತಮ ವಿದೇಶಿ ಸ್ಪಿನ್ನರ್‌ಗಳ ಕೊರತೆಯಿತ್ತು.ಇದೀಗ ರಶೀದ ಆ ಸ್ಥಾನ ತುಂಬುವ ವಿಶ್ವಾಸದಲ್ಲಿದ್ದಾರೆ.

 *ಜೇಸನ್ ರಾಯ್(ಗುಜರಾತ್ ಲಯನ್ಸ್): ಒಂದು ವರ್ಷದ ಹಿಂದೆ ಭಾರತದ ಪ್ರೇಕ್ಷಕರಿಗೆ ಅಪರಿಚಿತರಾಗಿದ್ದ ಇಂಗ್ಲೆಂಡ್‌ನ ಜೇಸನ್ ರಾಯ್ ಭಾರತದಲ್ಲಿ ನಡೆದ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದರು. ವಿಶ್ವಕಪ್‌ನಲ್ಲಿ 148.78 ಸ್ಟ್ರೈಕ್‌ರೇಟ್‌ನಲ್ಲಿ 183 ರನ್ ಗಳಿಸಿದ್ದರು. ದಕ್ಷಿಣ ಆಫ್ರಿಕ ವಿರುದ್ಧ ರನ್ ಚೇಸಿಂಗ್‌ನ ವೇಳೆ 16 ಎಸೆತಗಳಲ್ಲಿ 43 ರನ್ ಗಳಿಸಿದ್ದ ರಾಯ್ ನ್ಯೂಝಿಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ 44 ಎಸೆತಗಳಲ್ಲಿ 78 ರನ್ ಗಳಿಸಿ 154 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಲು ನೆರವಾಗಿದ್ದರು. ಜನವರಿಯಲ್ಲಿ ನಡೆದ ಭಾರತ ವಿರುದ್ಧ ಸತತ 3 ಏಕದಿನ ಪಂದ್ಯಗಳಲ್ಲಿ 73, 82, 65 ರನ್ ಗಳಿಸಿದ್ದ ರಾಯ್ ಟ್ವೆಂಟಿ-20 ಸರಣಿಯಲ್ಲಿ 19, 10 ಹಾಗೂ 32 ರನ್ ಗಳಿಸಿದ್ದರು. ಟ್ವೆಂಟಿ-20ಯಲ್ಲಿ ಒಟ್ಟು ನಾಲ್ಕು ಶತಕಗಳನ್ನು ಬಾರಿಸಿರುವ ರಾಯ್ ಲಯನ್ಸ್ ಪರ ಗರ್ಜಿಸುವ ವಿಶ್ವಾಸ ಮೂಡಿಸಿದ್ದಾರೆ.

    *ರೊವ್‌ಮನ್ ಪೊವೆಲ್(ಕೋಲ್ಕತಾ ನೈಟ್ ರೈಡರ್ಸ್): ವೆಸ್ಟ್‌ಇಂಡೀಸ್‌ನ 23ರ ಹರೆಯದ ಪೊವೆಲ್ ಈ ವರ್ಷದ ಐಪಿಎಲ್‌ನಲ್ಲಿ ತಮ್ಮದೇ ದೇಶದ ಆಲ್‌ರೌಂಡರ್ ಆ್ಯಂಡ್ರೆ ರಸ್ಸೆಲ್ ಬದಲಿಗೆ ಕೋಲ್ಕತಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ಪೊವೆಲ್ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದಲ್ಲಿ ಆಡಿದ್ದರು. ಪೊವೆಲ್ 14 ಟಿ-20 ಪಂದ್ಯಗಳಲ್ಲಿ ಕೇವಲ 233 ರನ್ ಗಳಿಸಿದ್ದು, 2 ವಿಕೆಟ್‌ಗಳನ್ನು ಪಡೆದಿದ್ದಾರೆ. ಐಪಿಎಲ್-10ರಲ್ಲಿ ಪೊವೆಲ್ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ಕೆಕೆಆರ್ ನಾಯಕ ಗೌತಮ್ ಗಂಭೀರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

*ಮಾರ್ಟಿನ್ ಗಪ್ಟಿಲ್(ಕಿಂಗ್ಸ್ ಇಲೆವೆನ್ ಪಂಜಾಬ್): ನ್ಯೂಝಿಲೆಂಡ್‌ನ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ ಈ ವರ್ಷ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ 2017ರ ಋತುವನ್ನು ಆರಂಭಿಸಿದ್ದ ಗಪ್ಟಿಲ್ ಆಸ್ಟ್ರೇಲಿಯ ವಿರುದ್ಧ ಏಕದಿನದಲ್ಲಿ 73 ಎಸೆತಗಳಲ್ಲಿ 61 ರನ್ ಗಳಿಸಿದ್ದರು. ಗಾಯದ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕ ವಿರುದ್ಧದ ಏಕದಿನ ಸರಣಿಯ ಮೊದಲ 3 ಪಂದ್ಯಗಳಿಂದ ಹೊರಗುಳಿದಿದ್ದ ಗಪ್ಟಿಲ್ ನಾಲ್ಕನೆ ಪಂದ್ಯದಲ್ಲಿ ತಂಡಕ್ಕೆ ವಾಪಸಾಗಿದ್ದರು. ನಿರ್ಣಾಯಕ 4ನೆ ಪಂದ್ಯದಲ್ಲಿ ಅಜೇಯ 180 ರನ್ ಗಳಿಸಿದ್ದರು. ಐಪಿಎಲ್‌ನಲ್ಲಿ ಫಿಟ್‌ನೆಸ್ ಕಾಯ್ದುಕೊಂಡರೆ ಗಪ್ಟಿಲ್ ವಿದೇಶಿ ಆಟಗಾರರ ಪೈಕಿ ಮೊದಲ ಆಯ್ಕೆ ಎನಿಸಿಕೊಳ್ಳಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News