ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಪ್ರಶ್ನಿಸಿದ್ದ ಅರ್ಜಿ ಹೈಕೋರ್ಟ್‌ನಲ್ಲಿ ತಿರಸ್ಕೃತ
ಹೊಸದಿಲ್ಲಿ,ಎ.11:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ 370ನೇ ವಿಧಿಯ ಸಿಂಧುತ್ವವನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಮಂಗಳವಾರ ತಿರಸ್ಕರಿಸಿದ ದಿಲ್ಲಿ ಉಚ್ಚ ನ್ಯಾಯಾಲಯವು, ಈ ವಿಷಯದಲ್ಲಿ ಅರ್ಜಿಯೊಂದನ್ನು ಸರ್ವೋಚ್ಚ ನ್ಯಾಯಾಲಯವು ಈಗಾಗಲೇ ತಿರಸ್ಕರಿಸಿರುವುದರಿಂದ ಈ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿತು.
ನ್ಯಾಯಾಲಯವು ಅರ್ಜಿಗೆ ಸಂಬಂಧಿಸಿದಂತೆ ತನ್ನ ತೀರ್ಪನ್ನು ಕಳೆದ ವರ್ಷದ ಮಾರ್ಚ್‌ನಲ್ಲಿ ಕಾಯ್ದಿರಿಸಿದ್ದು,ಮುಖ್ಯ ನ್ಯಾಯಮೂರ್ತಿ ಜಿ.ರೋಹಿಣಿ ಮತ್ತು ನ್ಯಾ.ಜಯಂತ ನಾಥ್ ಅವರ ಪೀಠವು ಮಂಗಳವಾರದ ಆದೇಶವನ್ನು ಹೊರಡಿಸಿತು.
ಉಚ್ಚ ನ್ಯಾಯಾಲಯದಲಿ ಎತ್ತಲಾಗಿರುವ ವಿಷಯವು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಗಿಂತ ಭಿನ್ನವಾಗಿದೆ ಎಂದು ಅರ್ಜಿದಾರರಾದ ಕುಮಾರಿ ವಿಜಯಲಕ್ಷ್ಮಿ ವಾದಿಸಿದ್ದರು.
370ನೇ ವಿಧಿಯು ತಾತ್ಕಾಲಿಕವಾಗಿದ್ದು, ಜಮ್ಮು-ಕಾಶ್ಮೀರದ ಸಂವಿಧಾನ ಸಭೆಯ ವಿಸರ್ಜನೆಯೊಂದಿಗೆ ಅದು ರದ್ದಾಗಿತ್ತು. ಹೀಗಿದ್ದರೂ ಈ ವಿಧಿಯನ್ನು ಮತ್ತು ರಾಷ್ಟ್ರಪತಿಗಳ ಅಥವಾ ಸಂಸತ್ತಿನ ಅಥವಾ ಭಾರತ ಸರಕಾರದ ಒಪ್ಪಿಗೆಯನ್ನೆಂದೂ ಪಡೆದಿರದ ಜಮ್ಮು-ಕಾಶ್ಮೀರ ಸಂವಿಧಾನವನ್ನು ಮುಂದುವರಿಸಿರುವುದು ನಮ್ಮ ಸಂವಿಧಾನದ ಮೂಲ ಸ್ವರೂಪಕ್ಕೆ ಎಸಗಿರುವ ವಂಚನೆಯಾಗಿದೆ ಎಂದೂ ಅವರು ವಾದಿಸಿದ್ದರು.
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಪ್ರಶ್ನಿಸಿದ್ದ ಅರ್ಜಿಯೊಂದನ್ನು 2014,ಜುಲೈನಲ್ಲಿ ವಜಾಗೊಳಿಸಿದ್ದ ಸರ್ವೋಚ್ಚ ನ್ಯಾಯಾಲಯವು, ಉಚ್ಚ ನ್ಯಾಯಾಲಯ ವನ್ನು ಸಂಪರ್ಕಿಸುವಂತೆ ಅರ್ಜಿದಾರರಿಗೆ ಸೂಚಿಸಿತ್ತು.